ಸಿನಿಮಾ

ಶಿಗ್ಗಾಂವಿಯಲ್ಲಿ ಮುಖ್ಯಮಂತ್ರಿ ಭರ್ಜರಿ ರೋಡ್ ಶೋ

ಸವಣೂರ: ಈ ಬಾರಿಯ ವಿಧಾನಸಭಾ ಚುನಾವಣೆ ಬಹಳ ವಿಶೇಷವಾಗಿದ್ದು, ಅದರಲ್ಲಿ ಶಿಗ್ಗಾಂವಿ-ಸವಣೂರ ವಿಧಾನಸಭಾ ಕ್ಷೇತ್ರದ ಚುನಾವಣೆ ಇಡೀ ರಾಜ್ಯವನ್ನು ಅಕರ್ಷಣೆ ಮಾಡಿದೆ. ಕ್ಷೇತ್ರದ ಜನತೆಯ ಆಶೀರ್ವಾದದಿಂದ ಒಂದೇ ಅವಧಿಯಲ್ಲಿ ಶಾಸಕನಾಗಿ, ಗೃಹ ಸಚಿವನಾಗಿ, ಮುಖ್ಯಮಂತ್ರಿಯಾಗಿ ರಾಜ್ಯದ ಜನರ ಸೇವೆಯನ್ನು ಮಾಡುವ ಅವಕಾಶ ನೀಡಿದ್ದೀರಿ. ನಿಮಗೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ತಾಲೂಕಿನ ತೆಗ್ಗೀಹಳ್ಳಿ, ಕುರುಬರಮಲ್ಲೂರ, ಹುರಳಿಕುಪ್ಪಿ, ತೊಂಡೂರ, ಕುಣಿಮೆಳ್ಳಿಹಳ್ಳಿ ಹಾಗೂ ತವರಮೆಳ್ಳಿಹಳ್ಳಿ ಗ್ರಾಮಗಳಲ್ಲಿ ಗುರುವಾರ ರೋಡ್ ಶೋ ಮೂಲಕ ಮತಯಾಚಿಸಿ, ಮತದಾರರನ್ನು ಉದ್ದೇಶಿಸಿ ಮಾತನಾಡಿದರು.

ಕ್ಷೇತ್ರದ ಪ್ರತಿಯೊಂದು ಗ್ರಾಮಗಳಿಗೆ ಹೋದಾಗ ಅತ್ಯಂತ ಪ್ರೀತಿಯಿಂದ ಸ್ವಾಗತ ಮಾಡಿರುವುದು ನೋಡಿದರೆ ಅಧಿಕ ಮತಗಳ ಅಂತರದಲ್ಲಿ ಗೆಲುವನ್ನು ನೀಡುತ್ತೀರಿ ಎನ್ನುವ ವಿಶ್ವಾಸವಿದೆ ಎಂದರು.

ಕ್ಷೇತ್ರ ಜನರ ನೀರಿನ ದಾಹ ಇಂಗಿಸಲು 438 ಕೋಟಿ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ರಸ್ತೆಗಳ ಅಭಿವೃದ್ಧಿ ಪಡಿಸಲಾಗಿದೆ. 2018-23ರ ಅವಧಿಯಲ್ಲಿ ಹೆಚ್ಚಿನ ಅಭಿವೃದ್ಧಿಗೆ ಒತ್ತು ನೀಡಿ, ನಿಮ್ಮ ಪ್ರೀತಿ ವಿಶ್ವಾಸಕ್ಕೆ ಚ್ಯುತಿ ಬರದಂತೆ ನೋಡಿಕೊಂಡಿದ್ದೇನೆ. ಕ್ಷೇತ್ರದ ಜನರೊಂದಿಗೆ ಇದ್ದರೆ ಆರೋಗ್ಯದಿಂದ ಇರಲು ಸಾಧ್ಯ. ಇಲ್ಲಿನ ಜನರ ಪ್ರೀತಿ, ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನನ್ನ ಉಸಿರು ಇರುವವರೆಗೂ ನಿಮ್ಮ ಸೇವೆಯನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.

ಶಿಗ್ಗಾಂವಿ-ಸವಣೂರ ಕ್ಷೇತ್ರದಲ್ಲಿ 2 ಪ್ರಮುಖ ಕೆಲಸಗಳು ಆಗಬೇಕಿದೆ. ಯುವಕರಿಗೆ ವಿದ್ಯೆ, ಉದ್ಯೋಗ ಮತ್ತು ಆರೋಗ್ಯವನ್ನು ನೀಡಬೇಕು. ಈಗಾಗಲೇ ಸವಣೂರಿಗೆ 67 ಕೋಟಿ ರೂ ವೆಚ್ಚದಲ್ಲಿ ಆಯುರ್ವೆದಿಕ್ ಮೆಡಿಕಲ್ ಕಾಲೇಜು ಮಂಜುರಾತಿ, 60 ಕೋಟಿ ವೆಚ್ಚದಲ್ಲಿ ಐಟಿಐ ಕಾಲೇಜ್ ಕಾಮಗಾಗಿ ಪ್ರಾರಂಭಿಸಲಾಗಿದೆ. 100 ಹಾಸಿಗೆಯ ತಾಯಿ, ಮಕ್ಕಳ ಆಸ್ಪತ್ರೆ ಸವಣೂರಿಗೆ ನೀಡಲಾಗಿದೆ. ಇನ್ನೂ ಹೆಚ್ಚಿನ ಯೋಜನೆಗಳನ್ನು ಜಾರಿ ಮಾಡುವಂ ಚಿಂತನೆ ಇದೆ. ತಮ್ಮ ಆಶೀರ್ವಾದ, ಬೆಂಬಲವಿದ್ದರೆ ಅದು ಕೂಡ ಈಡೇರುವ ವಿಶ್ವಾಸ ವಿದೆ ಎಂದರು.

ಕೆಲಸ ಮಾಡುವಾಗ ಜಾತಿ, ಮತ, ಪಂಥಗಳನ್ನು ನೋಡದೆ ಸಮಾನವಾಗಿ ಸೌಲಭ್ಯಗಳನ್ನು ನೀಡುವ ಕೆಲಸ ಮಾಡಿದ್ದೇನೆ. ಪ್ರತಿ ಗ್ರಾಮದಲ್ಲಿ ಇರುವ, ಬಡಿಗ, ಕುಂಬಾರ, ಕಮ್ಮಾರ, ವಿಶ್ವಕರ್ಮ, ಎಸ್​ಟಿ ಸಮಾಜದ ಜನರು ಅಭಿವೃದ್ಧಿ ಹೊಂದಬೇಕು ಎನ್ನುವ ಉದ್ದೇಶದಿಂದ ಕಾಯಕ ಯೋಗಿ ಯೋಜನೆ ಜಾರಿಗೆ ತಂದು, 50 ಸಾವಿರ ಹಣ ನೀಡಿ ಅರವನ್ನು ಉತ್ತೇಜಿಸುವಂಥ ಕೆಲಸ ಮಾಡಿದ್ದೇನೆ. ಕುರಿಗಾರರಿಗೆ ಕುರಿ, ಮೇಕೆ ಕೊಡುವಂಥ ಯೋಜನೆ ರೂಪಿಸಿ, ಪ್ರತಿ ಸಂಘಗಳಿಗೆ ಸುಮಾರು 10 ಲಕ್ಷ ರೂ. ಸಹಾಯಧನ ನೀಡುವ ಯೋಜನೆ ಜಾರಿಗೆ ತರಲಾಗಿದೆ. ಇದಕ್ಕೆಂದೇ ರೂ. 360 ಕೋಟಿ ಅನುದಾನ ಮಂಜುರಾತಿ ನೀಡಿ ಬಿಡುಗಡೆ ಮಾಡಿದ್ದೇನೆ. ಇದೇ ರೀತಿ ಎಲ್ಲ ಕಸಬುದಾರರಿಗೆ ನ್ಯಾಯ ಕೊಡುವಂಥ ಕೆಲಸವನ್ನು ಮಾಡಿದ್ದೇನೆ ಎಂದರು.

ಶಿಗ್ಗಾಂವ-ಸವಣೂರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಕಮಲವನ್ನು ಅರಳಿಸಬೇಕು. ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾದಿಂದ ಅತಿ ಹೆಚ್ಚು ಅನುದಾನವನ್ನು ತಂದು ಕ್ಷೇತ್ರದ ಪ್ರತಿಯೊಂದು ತಾಲೂಕನ್ನು ಅಭಿವೃದ್ಧಿ ಮಾಡುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದರು.

ತೆಗ್ಗಿಹಳ್ಳಿ ಗ್ರಾಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕಾರ್ಯಕರ್ತರು ಕ್ರೇನ್ ಮೂಲಕ ಮಾಲಾರ್ಪಣೆ ಹೂಮಳೆ ಸುರಿದರು. ವಿವಿಧ ಗ್ರಾಮಗಳಲ್ಲಿ ಡೊಳ್ಳು, ಜಾಂಜ್ ಮೇಳಗಳ ಮೂಲಕ ಮೆರವಣಿಗೆ ಮಾಡುವ ಮೂಲಕ ಗ್ರಾಮಗಳಿಗೆ ಭವ್ಯ ಸ್ವಾಗತ ಕೋರಿದರು.

ಪ್ರಮುಖರಾದ ಎಸ್.ವೈ. ಪಾಟೀಲ, ಮೋಹನ ಮೆಣಸಿನಕಾಯಿ, ಸುಭಾಸ ಗಡೆಪ್ಪನವರ, ಮಲ್ಲಾರಪ್ಪ ತಳ್ಳಿಹಳ್ಳಿ, ಬಿಜೆಪಿ ಮಂಡಲ ಅಧ್ಯಕ್ಷ ಗಂಗಾಧರ ಬಾಣದ, ಶಿವಪುತ್ರಪ್ಪ ಕಲಕೋಟಿ, ಎಂ.ಕೆ. ಬಿಜ್ಜೂರ, ಗಾಳೆಪ್ಪ ದೊಡ್ಡಪೂಜಾರ, ಬಸವರಾಜ ಸವೂರ, ಪ್ರದೀಪ ಸವೂರ, ಮಹಾದೇವಪ್ಪ ಗುದಗಿ, ಇಂದೂಧರಯ್ಯ ಹಿರೇಮಠ, ರಸೂಲ್​ಅಹ್ಮದ ಗುಂಡೂರ, ಸೋಮಶೇಖರ ತಳವಾರ, ಸುರೇಶಗೌಡ ಪಾಟೀಲ, ಮಂದೀಶ ಗೊಡ್ಡೆಮ್ಮಿ, ನಿಂಗಪ್ಪ ಡವಗಿ, ಸಮೀತ ಕೆಮ್ಮಣಕೇರಿ, ಮಹೇಶ ಜಡಿ, ಬಸನಗೌಡ ಪಾಟೀಲ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.

Latest Posts

ಲೈಫ್‌ಸ್ಟೈಲ್