ಹೊನ್ನಾಳಿ: ಶೇ. 80 ರಷ್ಟು ಅಹಿಂದ ವರ್ಗದ ಜನರಿಗೆ ಉಪಯೋಗವಾಗುವ ಕಾಂತರಾಜ್ ಆಯೋಗದ ವರದಿಯನ್ನು ಕೂಡಲೇ ಮಂಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಸಾಬ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.
ಪಟ್ಟಣದ ಗುರುಭವನದಲ್ಲಿ ಮಂಗಳವಾರ ಅವಳಿ ತಾಲೂಕು ಅಹಿಂದ ಹಾಗೂ ಶೋಷಿತ ಸಮುದಾಯಗಳ ವೇದಿಕೆಯಡಿ ಆಯೋಜಿಸಿದ್ದ ಅಹಿಂದ ಹಾಗೂ ಶೋಷಿತ ವರ್ಗಗಳ ಸಭೆಯಲ್ಲಿ ಮಾತನಾಡಿದರು.
ಆಯೋಗದ ವರದಿ ಮಂಡಿಸುವ ಮುಂಚೆಯೇ ವಿರೋಧ ಮಾಡುವುದು ಪೂರ್ವಗ್ರಹ. ಮೊದಲು ವರದಿ ಮಂಡಿಸಲಿ, ಅದರಲ್ಲಿ ಲೋಪವಿದ್ದರೆ ಸಿಎಂ ಬಳಿ ರ್ಚಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬಹುದು. ಸಿಎಂ ಬಳಿ ಜಿಲ್ಲೆಯ ಎಲ್ಲ ತಾಲೂಕು ಅಹಿಂದ ಪ್ರಮುಖರ ನಿಯೋಗ ತೆರಳಿ ಕಾಂತರಾಜ್ ವರದಿ ಮಂಡಿಸಲು ಮನವಿ ಮಾಡಲಾಗುವುದು ಎಂದು ತಿಳಿಸಿದರು.
ತಾಲೂಕು ಅಹಿಂದ ಮುಖಂಡ ಬಿ.ಸಿದ್ದಪ್ಪ ಮಾತನಾಡಿ, ವರದಿ ಮಂಡಿಸಿದರೆ ಶೇ.80 ರಷ್ಟಿರುವ ಹಿಂದುಳಿದ ಎಲ್ಲ ವರ್ಗಗಳಿಗೆ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ನ್ಯಾಯ ಸಿಗುತ್ತದೆ ಎಂದರು.
ಅಹಿಂದ ವರ್ಗದ ಮುಖಂಡ ಎ.ಬಿ. ರಾಮಚಂದ್ರಪ್ಪ ಮಾತನಾಡಿ, ಆಯೋಗದ ಅಧ್ಯಕ್ಷರು ವರದಿಯನ್ನು ಸಿಎಂಗೆ ಹಸ್ತಾಂತರ ಮಾಡಿದಾಗಲೇ, ಶೀಘ್ರವೇ ಸಚಿವ ಸಂಪುಟದಲ್ಲಿ ಮಂಡಿಸಿ, ಜಾರಿ ಮಾಡಿ ಎಂದು ಒತ್ತಾಯ ಮಾಡಬೇಕಿತ್ತು. ಶೇ.3 ರಷ್ಟು ಇರುವ ಜನರಿಗೆ ಕೇಂದ್ರ ಸರ್ಕಾರ ಶೇ.10 ರಷ್ಟು ಮೀಸಲಾತಿ ನೀಡಿದೆ. ಆದರೆ ಶೇ.70 ರಷ್ಟಿರುವ ನಾವು, ನಮ್ಮ ಹಕ್ಕುಗಳಿಗೆ ಹೋರಾಟ ನಡೆಸಲು ಸಿದ್ದರಾಗಬೇಕು ಎಂದು ಹೇಳಿದರು.
ಡಾ. ಅಲಸಂಗಿ ಮಾತನಾಡಿ, ಶೋಷಣೆಮುಕ್ತ ಸಮಾಜಕ್ಕೆ ಎಲ್ಲರೂ ಶಿಕ್ಷಣ ಪಡೆದು ಸುಜ್ಞಾನಿಗಳಾಗಬೇಕು. ಮನವಿಗೆ ಕೂಡಲೇ ಸ್ಪಂದಿಸಿ ಕಾಂತರಾಜ್ ಆಯೋಗದ ವರದಿಯನ್ನು ಸಚಿವ ಸಂಪುಟದಲ್ಲಿ ಮಂಡನೆ ಮಾಡಲು ಎಲ್ಲ ಸಚಿವರು ಸಿಎಂಗೆ ಕೈಜೋಡಿಸಬೇಕು ಎಂದರು.
ಸಮುದಾಯದ ತಾಲೂಕು ಅಧ್ಯಕ್ಷ ಡಾ. ಈಶ್ವರನಾಯ್್ಕ ದಾದಾಪೀರ್ ಮಾತನಾಡಿದರು. ಅಹಿಂದ ಜಿಲ್ಲಾ ಹಾಗೂ ತಾಲೂಕು ಮುಖಂಡರಾದ ಹೊದಿಗೆರೆ ರಮೇಶ್, ವೀರೇಶ್, ರುದ್ರಮುನಿ, ರವಿನಾರಾಯಣ್, ಲೋಕಿಕೆರೆ ಸಿದ್ದಪ್ಪ, ಸಿರಾಜ್, ಎಚ್.ಬಿ. ಶಿವಯೋಗಿ, ಕರವೇ ಶ್ರೀನಿವಾಸ್, ವಾಜಿದ್, ಶಿವಾನಂದ್ ಬೇಲಿಮಲ್ಲೂರು, ದಿಡಗೂರು ಪಾಲಾಕ್ಷಪ್ಪ, ಎಂ.ಎಸ್. ಪಾಲಾಕ್ಷಪ್ಪ, ಬಾಬು ಹೋಬಳದಾರ್, ಎಂ. ಸುರೇಶ್. ಶೇಖರಪ್ಪ, ಡಿ.ಸಿ. ತಮ್ಮಣ್ಣ, ಮಂಜುನಾಥ್ ಇತರರು ಇದ್ದರು.