ದೇಶದ 5 ಹೈಕೋರ್ಟ್​ಗಳಿಗೆ ಮುಖ್ಯ ನ್ಯಾಯಾಧೀಶರ ನೇಮಕ

ನವದೆಹಲಿ: ದೇಶದ ಐದು ಹೈಕೋರ್ಟ್​ಗಳಿಗೆ ಬುಧವಾರ ಹೊಸ ಮುಖ್ಯ ನ್ಯಾಯಾಧೀಶರನ್ನು ನೇಮಕ ಮಾಡಲಾಗಿದೆ ಎಂದು ಕಾನೂನು ಸಚಿವಾಲಯ ತಿಳಿಸಿದೆ.

ಉತ್ತರಖಾಂಡ, ಸಿಕ್ಕಿಂ, ಕೋಲ್ಕತಾ, ಗುವಾಹಟಿ ಮತ್ತು ಬಾಂಬೆ ಹೈಕೋರ್ಟ್​ಗಳಿಗೆ ನೂತನ ನ್ಯಾಯಮೂರ್ತಿಗಳನ್ನು ನೇಮಿಸಲಾಗಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ಹೈಕೋರ್ಟ್​ ನ್ಯಾಯಾಧೀಶ ರಮೇಶ್ ರಂಗನಾಥ್​ ಉತ್ತರಖಾಂಡ ಹೈಕೋರ್ಟ್​ಗೆ, ಉತ್ತರಖಾಂಡ ಹೈಕೋರ್ಟ್​ ಜಜ್​ ವಿಜಯ್​ಕುಮಾರ್​ ಬಿಸ್ಟ್​ ಸಿಕ್ಕಿಂ ಮತ್ತು ಕರ್ನಾಟಕ ಹೈಕೋರ್ಟ್​ನ ನ್ಯಾಯಾಧೀಶ ಅಜ್ಜಿಕುಟ್ಟೀರ ಸೋಮಯ್ಯ ಬೋಪಣ್ಣ ಅವರು ಗುವಾಹಟಿ ಹೈಕೋರ್ಟ್​ಗೆ ಮುಖ್ಯನ್ಯಾಯಾಧೀಶರಾಗಿ ವರ್ಗಾವಣೆಯಾಗಿದ್ದಾರೆ.

ಹಾಗೇ ಕೋಲ್ಕತಾ ಹೈಕೋರ್ಟ್​ನ ದೇಬಾಸಿಸ್​ ಕರ್​ಗುಪ್ತಾ ಮತ್ತು ಬಾಂಬೆ ಹೈಕೋರ್ಟ್​ನ ಜಜ್ ನರೇಶ್​ ಹರಿಶ್ಚಂದ್ರ ಪಾಟೀಲ್​ ಅದೇ ನ್ಯಾಯಾಲಯಗಳ ಮುಖ್ಯನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ.

ನೈನಿತಾಲ್​ ಹೈಕೋರ್ಟ್​ನ ನ್ಯಾಯಾಧೀಶ ಕೆ.ಎಂ.ಜೋಸೆಫ್​ ಅವರು ಆಗಸ್ಟ್​ನಲ್ಲಿ ಸುಪ್ರೀಕೋರ್ಟ್​ ನ್ಯಾಯಾಧೀಶರಾಗಿ ಬಡ್ತಿ ಪಡೆದಿದ್ದರು.
ಈ ನೇಮಕಗಳಿಂದ ದೇಶದ ಎಲ್ಲ 24 ಹೈಕೋರ್ಟ್​ಗಳು ಮುಖ್ಯನ್ಯಾಯಾಧೀಶರನ್ನು ಹೊಂದಿದಂತಾಗಿದೆ.