ತಂತ್ರಜ್ಞಾನದಿಂದ ಮಾಹಿತಿ ಹರಿವು ಹೆಚ್ಚಳ

ಮೈಸೂರು: ತಂತ್ರಜ್ಞಾನ ಅಭಿವೃದ್ಧಿ ಮತ್ತು ಅಂತರ್ಜಾಲವು ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ತರುವುದಲ್ಲದೇ, ಮಾಹಿತಿ ಹರಿವಿನ ವೇಗವನ್ನು ಹೆಚ್ಚಿಸಿದ್ದು, ಮಾಧ್ಯಮ ಕ್ಷೇತ್ರದಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಎಕ್ಸೆಲ್‌ಸಾಫ್ಟ್ ಟೆಕ್ನಾಲಜೀಸ್ ಪ್ರೈ.ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಡಿ.ಸುಧನ್ವ ಹೇಳಿದರು.

ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಮೈಸೂರು ಮಿಡ್‌ಟೌನ್, ಸಿಲಿಕಾನ್ ಕಂಟ್ರೋಲ್ಸ್ (ಇಂಡಿಯಾ)ಪ್ರೈ.ಲಿಮಿಟೆಡ್ ಸಹಯೋಗದಲ್ಲಿ ಆಯೋಜಿಸಿದ್ದ ಪತ್ರಿಕೋದ್ಯಮದಲ್ಲಿಯ ಶ್ರೇಷ್ಠತೆಗಾಗಿ ರೋಟರಿ-ಸಿಲಿಕಾನ್ ಪ್ರತಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಜಯವಾಣಿ ಮುಖ್ಯ ಉಪಸಂಪಾದಕ ಬಿ.ಎಸ್.ಹರೀಶ್ ಮತ್ತು ಪತ್ರಿಕಾ ಛಾಯಾಗ್ರಾಹಕಿ ಬಿ.ಆರ್.ಸವಿತಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ನಾನು ಇಂಜಿನಿಯರಿಂಗ್ ವ್ಯಾಸಂಗ ಮಾಡುವಾಗ ಹೆಚ್ಚು ಟೆಲಿವಿಷನ್ ನೋಡುತ್ತಿರಲಿಲ್ಲ. ಪತ್ರಿಕೆಗಳನ್ನು ಓದುತ್ತಿದ್ದೆ. ಆದರೆ, ಸ್ಮಾರ್ಟ್‌ಫೋನ್, ಇಮೇಲ್, ಇಂಟರ್ನೆಟ್, ಡಿಜಿಟಲ್ ಮಾಧ್ಯಮ, ಸಾಮಾಜಿಕ ಜಾಲತಾಣಗಳಿಂದ ಕೂಡಿರುವ ಅಂತರ್ಜಾಲ ಯುಗದ ಪ್ರಭಾವ ಹೆಚ್ಚಿರುವ ಪ್ರಸ್ತುತ ದಿನಗಳಲ್ಲಿ ನನ್ನ ಜೀವಿತಾವಧಿಯಲ್ಲಿಯೇ ಪಡೆಯದಷ್ಟು ಶೀಘ್ರವಾಗಿ ಜಗತ್ತಿನ ಮೂಲೆ ಮೂಲೆಗಳಲ್ಲಿ ನಡೆಯುವ ಘಟನೆಗಳ ಮಾಹಿತಿ ಪಡೆಯುತ್ತಿದ್ದೇನೆ ಎಂದರು.

2000 ಇಸವಿಯಲ್ಲಿ ಪತ್ರಿಕೆಗಳು ಹೆಚ್ಚು ಶಾಲಾ ಕಾಲೇಜು ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿಕೊಂಡಿದ್ದವು. ಪತ್ರಿಕೆಗಳು ಪ್ರಕಟಗೊಳ್ಳುವ ಹಂತದವರೆಗಿನ ಎಲ್ಲ ವಿಧಾನಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಲಾಗುತ್ತಿತ್ತು. ಇದರ ಬಗ್ಗೆ ವಿದ್ಯಾರ್ಥಿಗಳು ಚರ್ಚಿಸುತ್ತಿದ್ದರು. ಅಲ್ಲದೆ, ಪ್ರಾಯೋಗಿಕವಾಗಿ ವಿದ್ಯಾರ್ಥಿಗಳೇ ಸ್ವಂತ ಪತ್ರಿಕಾ ಮಾದರಿಗಳನ್ನು ತಯಾರಿಸಿ ಶಾಲೆಗಳಲ್ಲಿ ಪ್ರಕಟಿಸುತ್ತಿದ್ದರು. ಈ ಮೂಲಕ ವಿದ್ಯಾರ್ಥಿಗಳು ಸುದ್ದಿ ಮನೆಯ ಅನುಭವವನ್ನು ಪಡೆಯುತ್ತಿದ್ದರು ಎಂದು ತಿಳಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಿ.ಎಸ್.ಹರೀಶ್ ಅವರು, ಪತ್ರಿಕೋದ್ಯಮ ನಿತ್ಯ ಬದಲಾವಣೆಯತ್ತ ಸಾಗುತ್ತಿದ್ದು, ಇಂದು ತಾಂತ್ರಿಕತೆಯ ಪ್ರಭಾವದಿಂದ ಸುದ್ದಿಗಳ ಹರಿವಿನ ವೇಗ ಹೆಚ್ಚಿದ್ದರೂ, ದೃಶ್ಯ ಮತ್ತು ಅಂತರ್ಜಾಲ ಸುದ್ದಿ ಮಾಧ್ಯಮಗಳು ಸಾಗುತ್ತಿರುವ ರೀತಿ ಆತಂಕ ಉಂಟು ಮಾಡಿದೆ. ಪತ್ರಕರ್ತರಿಗೆ ಜಾತಿ, ಧರ್ಮ, ಪಕ್ಷದ ಹಂಗಿರಬಾರದು. ವೈಯಕ್ತಿಕ ನಿಲುವು ಏನೇ ಇದ್ದರೂ, ವೃತ್ತಿಯಲ್ಲಿ ನಿಷ್ಪಕ್ಷಪಾತವಾಗಿರಬೇಕು ಎಂದು ಹೇಳಿದರಲ್ಲದೇ, ತಮ್ಮ 40 ವರ್ಷದ ವೃತ್ತಿ ಬದುಕು ಸಾಗಿದ ಪರಿಯನ್ನು ವಿವರಿಸಿದರು.

ಪತ್ರಿಕಾ ಛಾಯಾಗ್ರಾಹಕಿ ಬಿ.ಆರ್.ಸವಿತಾ ಮಾತನಾಡಿದರು. ರೋ.ಭೀಮೇಶ್ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಮೈಸೂರು ಮಿಡ್‌ಟೌನ್ ಅಧ್ಯಕ್ಷ ಡಾ.ಕೆ.ಎ.ಪ್ರಹ್ಲಾದ್, ಕಾರ್ಯದರ್ಶಿ ಎಂ.ಪಿ.ಗೋಪಾಲಕೃಷ್ಣ, ಸಿಲಿಕಾನ್ ಕಂಟ್ರೋಲ್ಸ್ (ಇಂಡಿಯಾ)ಪ್ರೈ.ಲಿಮಿಟೆಡ್ ನಿರ್ದೇಶಕರಾದ ಎಸ್.ರಾಘವೇಂದ್ರ, ಎಂ.ಎಸ್.ನವೀನ್ ಚಂದ್ರ ಮತ್ತಿತರರಿದ್ದರು.

Leave a Reply

Your email address will not be published. Required fields are marked *