ಚಿದಂಬರನಗರದ ಸಮಗ್ರ ಅಭಿವೃದ್ಧಿಗೆ ಬದ್ಧ

ಶಾಸಕ ಅಭಯ ಪಾಟೀಲ ಭರವಸೆ

 ಬೆಳಗಾವಿ: ಚಿದಂಬರನಗರ ವಾರ್ಡ್ ನಲ್ಲಿನ  ಸಮಸ್ಯೆಗಳಿಗೆ ಸ್ಪಂದಿಸಿರುವ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಶೀಘ್ರದಲ್ಲೇ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದರು. ಜತೆಗೆ, ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವುದಾಗಿ ಹೇಳಿದರು.

ಮಹಾನಗರ ಪಾಲಿಕೆಯ ನೂತನ ವಾರ್ಡ್ 43ರ ಚಿದಂಬರನಗರದ ಚಿದಂಬರೇಶ್ವರ ದೇವಸ್ಥಾನದಲ್ಲಿ ಶನಿವಾರ ಆಯೋಜನೆಗೊಂಡಿದ್ದ  ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.
 
ಗುಣಮಟ್ಟದ ರಸ್ತೆ, ವಿದ್ಯುತ್, ಕಸ ವಿಲೇವಾರಿ, ಹಿರಿಯರ ಸೇವಾ ಕೇಂದ್ರ, ಓಪನ್ ಜಿಮ್ ಸೇರಿ ಹಲವು ವಿಷಯಗಳ ಕುರಿತು ಜನರು ಪ್ರಸ್ತಾಪಿಸಿದ್ದಾರೆ. ಇದೆಲ್ಲವೂ ಗಮನಕ್ಕೆ ಬಂದಿದ್ದು ಅವೆಲ್ಲವನ್ನೂ  ಹಂತವಾಗಿ ಆದ್ಯತೆ ಮೇರೆಗೆ ಆರಂಭಿಸಲಾಗುವುದು ಎಂದರು.
 
ಬೇರೆಯವರಂತೆ ನಾನು ಕೇವಲ ಭರವಸೆ ಕೊಟ್ಟು ಹೋಗುವ ವ್ಯಕ್ತಿಯಲ್ಲ. ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದೇನೆ. ಇಲ್ಲಿನ ಸಮಸ್ಯೆಗಳ ಕುರಿತು ಸ್ವತಃ ಹೆಸ್ಕಾಂ, ನಗರ ನೀರು ಸರಬರಾಜು ಮಂಡಳಿ ಸೇರಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಸಭೆ ನಡೆಸುವೆ. ಸಮಸ್ಯೆಗಳನ್ನು ಆಲಿಸಲು ಅವರನ್ನೇ ವಾರ್ಡಿಗೆ ಕಳಿಸುವುದಾಗಿ ಹೇಳಿದರು.
 
ಬೆಳಗಾವಿ ಕಸ ವಿಲೇವಾರಿ, ಬೀದಿದೀಪದ ನಿರ್ವಹಣೆ ವ್ಯವಸ್ಥೆ ಪಾಲಿಕೆಗೆ ಬರುತ್ತದೆ. ಹೀಗಾಗಿ ಕಾರ್ಪೋರೇಟರ್​ಗಳು ತಮ್ಮ ವಾರ್ಡಿನಲ್ಲಿ  ಕೆಲಸ ಸರಿಯಾಗಿ ಆಗುತ್ತಿಲ್ಲ ಎಂದಾದರೆ ಅವರು ಆಯುಕ್ತರಿಗೆ ಲಿಖಿತ ಪತ್ರ ನೀಡಬೇಕಾಗಿತ್ತು. ನೀಡಿಲ್ಲವೆಂದರೆ, ಅದರ ಹಿಂದೆ ಬಲವಾದ ಕಾರಣವಿರುತ್ತದೆ. ನಮ್ಮ ಕಾರ್ಪೋರೇಟರ್​ಗಳು ಕಸದಲ್ಲಿ ‘ರಸ’ ಹೀರುತ್ತಿದ್ದಾರೆ ಎಂದೇ ಅರ್ಥ ಎಂದು ವ್ಯಂಗ್ಯವಾಡಿದರು.
 
ಪಾಲಿಕೆಯು ಕಸವಿಲೇವಾರಿಗೆ ಅಂದಾಜು 24 ಕೋಟಿ ರೂ. ವೆಚ್ಚ ಮಾಡಲಾಗುತ್ತದೆ. ಆದರೆ ಎಲ್ಲಿಯಾದರೂ ಸ್ವಚ್ಥತೆ ಕಾಣುತ್ತಿದೆಯೇ ಎಂದು ಪ್ರಶ್ನಿಸಿದಾಗ ಸಭೆಯಲ್ಲಿ ‘ಇಲ್ಲ’ ಎಂಬ ಉತ್ತರ ಬಂದಿತು. ಜನರ ತೆರಿಗೆ ಮಹಾನಗರಪಾಲಿಕೆಗೆ ಸಂದಾಯವಾಗುತ್ತದೆ. ಹೀಗಾಗಿ ಇಲ್ಲಿ ನಗರ ಸೇವಕರ ಪಾತ್ರ ಹೆಚ್ಚಿಗಿದೆ. ಆದರೆ ಬಹುತೇಕ ಕಡೆಗೆ ನಗರಸೇವಕರು ತಮ್ಮ ವಾರ್ಡ್ ಭೆಟ್ಟಿ ಕಾರ್ಯಕ್ರಮವನ್ನೇ ಮರೆತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
 
ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಒಟ್ಟು 22 ಉದ್ಯಾನಗಳ ಪೈಕಿ 18 ಉದ್ಯಾನಗಳನ್ನು ಅಭಿವದ್ಧಿಪಡಿಸಲು ನಿರ್ಧರಿಸಲಾಗಿದೆ. ಚಿದಂಬರನಗರ ಸೇರಿ ಸುತ್ತಮುತ್ತಲ ಪ್ರದೇಶದಲ್ಲಿ ಹೆಚ್ಚುತ್ತಿರುವ ಕಳ್ಳತನವನ್ನು ತಡೆಗಟ್ಟಲು ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ. ಇವುಗಳಲ್ಲಿ ದಾಖಲಾಗುವ ದೃಶ್ಯಗಳನ್ನು ಪೊಲೀಸರು ಆರಂಭಿಸಿರುವ ನಿಯಂತ್ರಣ ಕೊಠಡಿಯಲ್ಲಿ ನೇರವಾಗಿ ವೀಕ್ಷಿಸಬಹುದಾಗಿದೆ ಎಂದರು.
 
ಹಿರಿಯ ನ್ಯಾಯವಾದಿ ಮತ್ತು ಬ್ರಾಹ್ಮಣ ಸಮಾಜದ ಮುಖಂಡರಾದ ಎಸ್.ಎಂ. ಕುಲಕರ್ಣಿ ಮಾತನಾಡಿ, ಸುಸಜ್ಜಿತ ಉದ್ಯಾನವನ ನಿರ್ಮಿಸಿದರೆ ಅನುಕೂಲವಾಗುತ್ತದೆ ಎಂದರು.
 
ಬಿಜೆಪಿ ಮುಖಂಡ ಆರ್.ಎಸ್. ಮುತಾಲಿಕ ದೇಸಾಯಿ, ವಿ.ಎನ್. ಜೋಶಿ, ಅರವಿಂದ ಹುನಗುಂದ, ಸಂಜೀವ ಕುಲಕರ್ಣಿ, ಮಹೇಶ್ ಮುಳಗುಂದ, ಪ್ರಶಾಂತ ಕುಲಕರ್ಣಿ, ಅನಂತರಾಮ ಕಲ್ಲೂರಾಯ, ಸ್ನೇಹಾ ಜೋಶಿ, ಅರುಣ ಮತ್ತಿತರರು ಮಾತನಾಡಿದರು. ಸಂಘಟಕಿ ವಾಣಿ ವಿಲಾಸ ಜೋಶಿ ಮತ್ತಿತರರು ಇದ್ದರು.

 

ಬೆಳಗಾವಿಯ ಚಿದಂಬರೇಶ್ವರ ದೇವಸ್ಥಾನದ ಇನ್ನಷ್ಟು ಅಭಿವದ್ಧಿಗೆ ಶಾಸಕರ ನಿಧಿಯಂದ 5 ಲಕ್ಷ ರೂ. ನೀಡುತ್ತೇನೆ. ಅದಕ್ಕೆ ಸಂಬಂಧಿಸಿದಂತೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಕೊಟ್ಟರೆ ತಕ್ಷಣ ಹಣ ಬಿಡುಗಡೆ ಮಾಡಿಸುವೆ.
ಅಭಯ ಪಾಟೀಲ,ಶಾಸಕರು ಬೆಳಗಾವಿ(ದಕ್ಷಿಣ)