ಕೊನೆಗೂ ನೆರಳಿನ ವ್ಯವಸ್ಥೆ ಮಾಡಿದ ಅಧಿಕಾರಿಗಳು

ಚಿಕ್ಕಪಡಸಲಗಿ: ಸಮೀಪದ ಚಿಕ್ಕಲಕಿ ಕ್ರಾಸ್‌ನಲ್ಲಿರುವ ಅಟಲ್‌ಜಿ ಜನಸ್ನೇಹಿ ಕೇಂದ್ರದಲ್ಲಿ ಸಾರ್ವಜನಿಕರಿಗಾಗಿ ನೆರಳು ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಿದ್ದಾರೆ.

ಜಮಖಂಡಿ ತಾಲೂಕಿನಲ್ಲೇ ಹೆಚ್ಚು ಕಂದಾಯ ಗ್ರಾಮಗಳನ್ನು ಹೊಂದಿರುವ ಈ ಕೇಂದ್ರ, ಸಾವಳಗಿ ಉಪ ತಹಸೀಲ್ದಾರ್ ಕಚೇರಿ ವ್ಯಾಪ್ತಿಯಲ್ಲಿ ಬರುತ್ತದೆ. ಚಿಕ್ಕಪಡಸಲಗಿ, ಕವಟಗಿ, ಬಿದರಿ, ತೊದಲಬಾಗಿ, ನಾಗನೂರ ಸೇರಿ 20ಕ್ಕೂ ಅಧಿಕ ಗ್ರಾಮಗಳನ್ನು ಹೊಂದಿದೆ.

ನಿತ್ಯವೂ ಸಾರ್ವಜನಿಕರು ಜಾತಿ, ಆದಾಯ, ಇ-ಸ್ವತ್ತು, ಸಂಧ್ಯಾ ಸುರಕ್ಷಾ ಸೇರಿ ಸರ್ಕಾರದ ವಿವಿಧ ಸೌಲಭ್ಯಗಳ ಪ್ರಯೋಜನ ಪಡೆಯಲು ಕೇಂದ್ರಕ್ಕೆ ಭೇಟಿ ನೀಡುತ್ತಾರೆ. ಆದರೆ, ಅವರಿಗೆ ನೆರಳು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಸೇರಿ ಮೂಲ ಸೌಕರ್ಯಗಳಿರಲಿಲ್ಲ.

ಈ ಕುರಿತು ವಿಜಯವಾಣಿ ಮೇ 9 ರಂದು ‘ಜನಸ್ನೇಹಿಯಾಗದ ಚಿಕ್ಕಲಕಿ ಅಟಲ್‌ಜಿ ಕೇಂದ್ರ’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ನೆರಳಿಗಾಗಿ ಪತ್ರಾಸ್‌ಗಳನ್ನು ಅಳವಡಿಸಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ವರದಿ ಪ್ರಕಟಿಸಿ ಅಧಿಕಾರಿಗಳ ಗಮನಸೆಳೆದ ಪತ್ರಿಕೆ ಕಾರ್ಯಕ್ಕೆ ಜನತೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.