ಮತ ಎಣಿಕೆ ಕೇಂದ್ರ ಭದ್ರಕೋಟೆ

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಅಜ್ಜರಕಾಡು ಸೇಂಟ್ ಸಿಸಿಲಿ ಶಾಲೆಯಲ್ಲಿ ಮೇ 23ರಂದು ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗಲಿದ್ದು, ಸಾಯಂಕಾಲ ಸ್ಪಷ್ಟ ಫಲಿತಾಂಶ ಲಭಿಸುವ ನಿರೀಕ್ಷೆಗಳಿವೆ. ಕೇಂದ್ರದ ಸುತ್ತ ಬಿಗು ಭದ್ರತೆ ಏರ್ಪಡಿಸಲಾಗಿದೆ.
ಮೊದಲಿಗೆ ಅಂಚೆ ಮತ, 8.30ರಿಂದ ಇವಿಎಂ ಮತ ಎಣಿಕೆ ನಡೆಯಲಿದೆ. ಇದಕ್ಕಾಗಿ 540 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ 14 ಕೊಠಡಿಗಳನ್ನು ಸಜ್ಜುಗೊಳಿಸಲಾಗಿದೆ. ಆರು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ತಲಾ ಎರಡು ಕೊಠಡಿಗಳಲ್ಲಿ ಹಾಗೂ ಕಾರ್ಕಳ ಮತ್ತು ಕುಂದಾಪುರ ವಿಧಾನಸಭಾ ಕ್ಷೇತ್ರ ಮತ ಎಣಿಕೆ ತಲಾ ಒಂದು ಕೊಠಡಿಗಳಲ್ಲಿ ನಡೆಸಲಾಗುತ್ತದೆ. ಪ್ರತಿ ಕ್ಷೇತ್ರವಾರು ಮತ ಎಣಿಕೆ ಕೊಠಡಿಯಲ್ಲಿ ಓರ್ವ ಎಆರ್‌ಒ, 8 ಸಹಾಯಕ ಚುನಾವಣಾಧಿಕಾರಿ ಹಾಗೂ 6 ಮಂದಿ ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿಗಳಿರುತ್ತಾರೆ. 127 ಮತ ಎಣಿಕಾ ಮೇಲ್ವಿಚಾರಕರು, 131 ಮತ ಎಣಿಕೆ ಸಹಾಯಕರು, 127 ಮೈಕ್ರೋ ಅಬ್ಸರ್‌ವರ್‌ಗಳನ್ನು ಹಾಗೂ 127 ಡಿ ದರ್ಜೆ ಸಿಬ್ಬಂದಿ ನೇಮಿಸಲಾಗಿದೆ.
ಉಡುಪಿ ಜಿಲ್ಲೆಯ ಅಧಿಕಾರಿಗಳು ಉಡುಪಿ, ಕಾರ್ಕಳ, ಕಾಪು, ಕುಂದಾಪುರ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಜವಾಬ್ದಾರಿ ಹೊಂದಿದ್ದು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು, ತರೀಕೆರೆ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗಾಗಿ ಚಿಕ್ಕಮಗಳೂರಿನಿಂದ ಮಂಗಳವಾರ ರಾತ್ರಿ ಅಧಿಕಾರಿಗಳು ಉಡುಪಿಗೆ ಆಗಮಿಸಿದ್ದಾರೆ.

ಭದ್ರತೆಗೆ 534 ಸಿಬ್ಬಂದಿ: ಮತ ಎಣಿಕೆ ಕೇಂದ್ರದ ಒಳಗೆ ಮತ್ತು ಹೊರಗೆ ಒಟ್ಟು 534 ಭದ್ರತಾ ಸಿಬ್ಬಂದಿ ನೇಮಿಸಲಾಗಿದೆ. ಇದರಲ್ಲಿ 1 ಸಿಆರ್‌ಪಿಎಫ್, 3 ಕೆಎಸ್‌ಆರ್‌ಪಿ ತುಕಡಿ, 90 ಗೃಹರಕ್ಷಕರು ಹಾಗೂ 335 ಪೊಲೀಸ್ ಸಿಬ್ಬಂದಿ ಸೇರಿದ್ದಾರೆ. ಚುನಾವಣಾ ಆಯೋಗದಿಂದ ಪಾಸ್ ಹೊಂದಿದವರಿಗೆ ಮಾತ್ರ ಒಳಗೆ ಪ್ರವೇಶವಿದೆ. ಶಾಲೆಯ ಸುತ್ತಲಿನ ನಿವಾಸಿಗಳಿಗೆ ಪಾಸ್ ವಿತರಿಸಲಾಗಿದ್ದು, ಭದ್ರತಾ ದೃಷ್ಟಿಯಿಂದ 130ಕ್ಕೂ ಹೆಚ್ಚು ಸಿಸಿಕ್ಯಾಮರಾ ಅಳವಡಿಸಲಾಗಿದೆ. ಬೆಳಗ್ಗೆ 4 ಗಂಟೆಯಿಂದ ಮತ ಎಣಿಕೆ ಕೇಂದ್ರ ಸುತ್ತಮುತ್ತಲಿನ ಪ್ರದೇಶದಲ್ಲಿ ಜಿಲ್ಲಾಧಿಕಾರಿ ಆದೇಶದಂತೆ ಹೊಸ ಸಂಚಾರ ನಿಯಮ ಅನುಷ್ಠಾನಗೊಳಿಸಲಾಗುತ್ತದೆ. ಮತ ಎಣಿಕೆ ಕೇಂದ್ರಕ್ಕೆ ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಬುಧವಾರ ಮಧ್ಯಾಹ್ನ ಭೇಟಿ ನೀಡಿ ಭದ್ರತಾ ಏರ್ಪಾಡುಗಳನ್ನು ಪರಿಶೀಲಿಸಿದರು. ಎಸ್‌ಪಿ ನಿಶಾ ಜೇಮ್ಸ್ ಅವರಿಂದ ಮಾಹಿತಿ ಪಡೆದು, ಸೂಕ್ತ ಮಾರ್ಗದರ್ಶನ ನೀಡಿದರು.

ಊಟದ ವ್ಯವಸ್ಥೆ: ಎಣಿಕೆ ಕೇಂದ್ರಕ್ಕೆ ಪ್ರವೇಶ ಪಡೆದವರು ಮತ ಎಣಿಕೆ ಮುಗಿಯುವವರೆಗೆ ಆವರಣದ ಹೊರಗೆ ಹೋಗುವಂತಿಲ್ಲ. ಹೀಗಾಗಿ ಪೊಲೀಸ್ ಸಿಬ್ಬಂದಿ, ಮತ ಎಣಿಕೆ ಅಧಿಕಾರಿ ಮತ್ತು ಸಿಬ್ಬಂದಿಗೆ ಶಾಲೆಯಲ್ಲೇ ಬೆಳಗ್ಗೆ ಉಪಹಾರ, ಮಧ್ಯಾಹ್ನ ಊಟ, ಸಾಯಂಕಾಲ ಕಾಫಿ-ಟೀ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜಕೀಯ ಪಕ್ಷಗಳ ಏಜೆಂಟರು ಪಾವತಿ ಆಧಾರದಲ್ಲಿ ಭೋಜನ ಸ್ವೀಕರಿಸಬಹುದಾಗಿದೆ.

ಒಂದು ತಿಂಗಳು ಕಾವಲು: ಏಪ್ರಿಲ್ 18ರಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ ನಡೆದಿದ್ದು, 35 ದಿನ ಭದ್ರತಾ ಸಿಬ್ಬಂದಿ ಪಾಳಿಯಲ್ಲಿ ಮತ ಯಂತ್ರಗಳಿಗೆ ಭದ್ರತೆ ಒದಗಿಸಿದ್ದಾರೆ. 34 ಮಂದಿ ಕೇಂದ್ರ ಮೀಸಲು ಪೊಲೀಸ್ ಸಿಬ್ಬಂದಿ, 1 ಕೆಎಸ್‌ಆರ್‌ಪಿ ತುಕಡಿ, ಓರ್ವ ಎಸ್‌ಐ, ಇಬ್ಬರು ಎಎಸ್‌ಐ, ಮೂವರು ಹೆಡ್ ಕಾನ್‌ಸ್ಟೆಬಲ್, 14 ಮಂದಿ ಪೊಲೀಸ್ ಸಿಬ್ಬಂದಿ, 24 ಸಿವಿಲ್ ಸಿಬ್ಬಂದಿ ಮೂರು ಪಾಳಿಯಲ್ಲಿ ನಿಗಾ ವಹಿಸಿದ್ದರು.

Leave a Reply

Your email address will not be published. Required fields are marked *