ನವದೆಹಲಿ: ನೆಚ್ಚಿನ ಪಕ್ಷಗಳು, ನಾಯಕರ ಗೆಲುವಿಗೆ ನೂರಾರು ಕಾರ್ಯಕರ್ತರು, ಬೆಂಬಲಿಗರು ಹಂಬಲಿಸೋದು ಸಹಜ. ಆದರೆ ಇಲ್ಲೊಬ್ಬ ವ್ಯಕ್ತಿ ಎನ್‌ಡಿಎ ಬಹುಮತದೊಂದಿಗೆ ಗೆಲವು ಸಾಧಿಸಿರುವ ಹಿನ್ನೆಲೆ ತನ್ನ ಬೆರಳು ಕತ್ತರಿಸಿ ಕಾಳಿ ದೇವಿಗೆ ಅರ್ಪಿಸಿದ್ದಾನೆ. ಈ ಘಟನೆ ಛತ್ತೀಸ್‌ಗಡದಲ್ಲಿ ನಡೆದಿದೆ.
ದುರ್ಗೇಶ್ ಪಾಂಡೆ ಎಂಬಾತನೇ ಬಿಜೆಪಿ ಬೆಂಬಲಿಗ. ಜೂ.4ರಂದು ಚನಾವಣಾ ಫಲಿತಾಂಶ ಹೊರಬಿದ್ದಾಗ ಆರಂಭದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸುತ್ತಿದ್ದಂತೆ ತೀವ್ರ ಬೇಸರಗೊಂಡಿದ್ದ. ಈ ಬಾರಿ ಅಧಿಕಾರ ಎನ್‌ಡಿಎ ಕೈ ತಪ್ಪಿ ಹೋಗುತ್ತದೆ ಎಂಬ ಆತಂಕಕ್ಕೆ ಬಿದ್ದ ದುರ್ಗೇಶ್, ಕಾಳಿ ಮಂದಿರಕ್ಕೆ ತೆರಳಿ ಬಿಜೆಪಿ ಗೆಲುವಿಗೆ ಪ್ರಾರ್ಥಿಸಿದ್ದಾನೆ. ಅಲ್ಲದೇ ತನ್ನ ಒಂದು ಬೆರಳನ್ನೇ ಕತ್ತರಿಸಿ ದೇವಿಗೆ ಅರ್ಪಿಸಿದ್ದಾನೆ.
ಇನ್ನು ಬೆರಳು ಕತ್ತರಿಸಿಕೊಂಡ ದುರ್ಗೇಶ್ ಪಾಂಡೆ, ಕುಟುಂಬಸ್ಥರು ಆತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಆತನನ್ನು ಅಂಬಿಕಾಪುರದ ಮೆಡಿಕಲ್ ಕಾಲೇಜಿಗೆ ರವಾನಿಸಲಾಗಿತ್ತು. ಬಹಳ ಹೊತ್ತಾದ ಕಾರಣ ನಜ್ಜುಗುಜ್ಜಾಗಿದ್ದ ಆತನ ಬೆರಳನ್ನು ಮತ್ತೆಜೋಡಿಸಲು ಸಾಧ್ಯವಾಗಿಲ್ಲ. ಅದ್ಯ ಚಿಕಿತ್ಸೆ ಮುಂದುವರೆದಿದ್ದು, ಆತನ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ.