ಮಹಾರಾಷ್ಟ್ರದಲ್ಲಿ ನಿರ್ಮಾಣವಾಗುತ್ತಿರುವ ಶಿವಾಜಿ ಪ್ರತಿಮೆಯ ನಿರ್ಮಾಣ ವೆಚ್ಚ 3,643 ಕೋಟಿ!

ಮುಂಬೈ: ಮಹಾರಾಷ್ಟ್ರದ ಕರಾವಳಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶಿವಾಜಿಯ ಎತ್ತರದ ಪ್ರತಿಮೆಗೆ ಬರೋಬ್ಬರಿ 3643.78 ಕೋಟಿ ರೂಪಾಯಿಗಳು ಖರ್ಚಾಗುತ್ತಿವೆ.

ಕಳೆದ ನವೆಂಬರ್​ 1ರಂದು ನಡೆದಿದ್ದ ಮಹಾರಾಷ್ಟ್ರದ ಸಚಿವ ಸಂಪುಟ ಸಭೆಯಲ್ಲಿ ಪ್ರತಿಮೆ ನಿರ್ಮಾಣಕ್ಕಾಗಿ 3700.84 ಕೋಟಿ ಅನುದಾನವನ್ನು ನಿಗದಿ ಮಾಡಲಾಗಿತ್ತು. ಆದರೆ, ಡಿ. 19ರಂದು ನಡೆದ ಸಂಪುಟ ಸಭೆಯಲ್ಲಿ ಪ್ರತಿಮೆಯ ಅನುದಾನವನ್ನು 56.70 ಕೋಟಿ. ರೂಪಾಯಿಗಳಷ್ಟು ಕಡಿತ ಮಾಡಿ 3643.78 ಕೋಟಿ ರೂಪಾಯಿಗಳಿಗೆ ನಿಗದಿ ಮಾಡಲಾಗಿದೆ.

ಅರಬ್ಬಿ ಸಮುದ್ರದಲ್ಲಿ ತಲೆ ಎತ್ತಲಿರುವ ಪ್ರತಿಮೆಯ ನಿರ್ಮಾಣ ವೆಚ್ಚ 2581 ಕೋಟಿ ರೂಪಾಯಿಗಳಾಗಿದ್ದು, 309.72 ರೂ. ಮೊತ್ತ ಜಿಎಸ್​ಟಿಗೆ ಹೋಗಲಿದೆ. ಇನ್ನು 236 ಕೋಟಿ ರೂಪಾಯಿಗಳನ್ನು ಭದ್ರತೆಗೆ ವಿನಿಯೋಗಿಸಲಾಗುತ್ತಿದೆ. 45 ಕೋಟಿಗಳನ್ನು ವಿದ್ಯುತ್​ಚ್ಛಕ್ತಿಗೆ ವ್ಯಯಿಸಲಾಗುತ್ತಿದೆ. ನಿರ್ವಹಣೆಗೆ ಒಂದು ಕೋಟಿ ರೂಪಾಯಿಗಳನ್ನು ನಿಗದಿ ಮಾಡಲಾಗಿದೆ. ಎರಡು ಕೋಟಿ ರೂ. ವೆಚ್ಚದಲ್ಲಿ ಯೋಜನೆಗೆ ಸಂಬಂಧಿಸಿದ ಅಧ್ಯಯನ ಪ್ರವಾಸಗಳನ್ನು ಕೈಗೊಳ್ಳಲಾಗುತ್ತಿದೆ.

ಸರ್ಕಾರದ ಮೂಲಗಳ ಪ್ರಕಾರ ಪ್ರತಿಮೆ ನಿರ್ಮಾಣ ಕಾರ್ಯ 2019-20ರಲ್ಲಿ ಆರಂಭವಾಗಲಿದ್ದು, 2022-23ರಲ್ಲಿ ಪೂರ್ಣಗೊಳ್ಳಲಿದೆ. ಪ್ರತಿಮೆ ನಿರ್ಮಾಣಕ್ಕಾಗಿ 2016ರಲ್ಲೇ ಅಡಿಗಲ್ಲು ಹಾಕಲಾಗಿತ್ತಾದರೂ, ಕಟ್ಟುವ ಕೆಲಸ ಆರಂಭವಾಗಿರಲಿಲ್ಲ. ಯಾವಾಗ ಗುಜರಾತ್​ನಲ್ಲಿ ಸರ್ದಾರ್​ ವಲ್ಲಭಭಾಯಿ ಪಟೇಲ್​ ಪ್ರತಿಮೆ ಅನಾವರಣಗೊಂಡಿತೋ, ಆಗಿನಿಂದ ಶಿವಾಜಿ ಪ್ರತಿಮೆ ಯೋಜನೆಯೂ ಚುರುಕುಗೊಂಡಿದೆ.

ಗುಜರಾತ್​ನಲ್ಲಿ ಪ್ರತಿಮೆ ಅನಾವರಣಗೊಳ್ಳುತ್ತಲೇ ಉತ್ತರ ಪ್ರದೇಶದಲ್ಲಿ ಪ್ರತಿಮೆ ಪರ್ವ ಆರಂಭವಾಗಿದೆ. ರಾಮ, ವಿವೇಕಾನಂದ, ಗೋರಖ್​ಪುರದ ನಾಥ ಪರಂಪರೆಯ ಸ್ವಾಮೀಜಿಗಳ ಪ್ರತಿಮೆಗಳು ಅಲ್ಲಿ ನಿರ್ಮಾಣವಾಗುತ್ತಿವೆ. ಕರ್ನಾಟಕದಲ್ಲೂ ಕಾವೇರಿ ಪ್ರತಿಮೆ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿದೆ.