ನವದೆಹಲಿ: ಜೆಎನ್ಯು ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ನೀಡಿದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಇದರ ನಡುವೆ ಅವರ ಚಪಾಕ್ ಚಿತ್ರವನ್ನು ಬಹಿಷ್ಕರಿಸಲು ಟ್ವಿಟರ್ನಲ್ಲಿ “#Boycott Chhapaak” ಹ್ಯಾಶ್ಟ್ಯಾಗ್ ಟ್ರೆಂಡ್ ಮಾಡಿದ್ದಾರೆ. ಇದರೊಟ್ಟಿಗೆ ಚಪಾಕ್ ಚಿತ್ರದ ವಿಲನ್ ಹೆಸರಿನ ವಿಚಾರವಾಗಿ ಆರಂಭವಾಗಿದ್ದ ವಾಗ್ವಾದಕ್ಕೆ ಚಿತ್ರತಂಡ ತೆರೆ ಎಳೆದಿದೆ.
ಚಪಾಕ್ ಚಿತ್ರದಲ್ಲಿ ಆ್ಯಸಿಡ್ ದಾಳಿ ಮಾಡಿರುವ ವಿಲನ್ ಹೆಸರನ್ನು ನದೀಮ್ ಖಾನ್ ನಿಂದ ರಾಜೇಶ್ ಎಂದು ಬದಲಾಯಿಸಲಾಗಿದೆ. ಸಿನಿಮಾ ನಿರ್ಮಾಪಕರು ಹೆಸರನ್ನು ಬದಲಾಯಿಸುವ ಮೂಲಕ ತಮ್ಮ ಹಿಂದಿನ ಅಜೆಂಡಾವನ್ನು ತೋರಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ವಿರುದ್ಧ ಹಲವರು ಆಕ್ರೋಶ ಹೊರಹಾಕಿದ್ದಾರೆ.
ಆದರೆ ಇದು ತಪ್ಪು ಗ್ರಹಿಕೆಯಾಗಿದ್ದು, ಚಿತ್ರದಲ್ಲಿ ವಿಲನ್ ಹೆಸರನ್ನು ಬಶೀರ್ ಖಾನ್ ಎಂದು ಬದಲಾಯಿಸಲಾಗಿದೆ. ರಾಜೇಶ್ ಎಂಬುದು ದೀಪಿಕಾ ಪಡುಕೋಣೆ ಅವರ ಗೆಳೆಯನ ಪಾತ್ರದ ಹೆಸರು ಎಂದು ಚಿತ್ರತಂಡ ಸ್ಪಷ್ಟನೆ ನೀಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಮ್ಯಾಗಜಿನ್ ಒಂದು ಚಿತ್ರದಲ್ಲಿ ವಿಲನ್ ಹೆಸರು ಬದಲಾಯಿಸಲಾಗಿದೆ ಎಂದು ವಾದಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಎಷ್ಟರಮಟ್ಟಿಗೆ ಅಂದರೆ ನದೀಮ್ ಹೆಸರಿನಲ್ಲಿ 60 ಸಾವಿರ ಟ್ವೀಟ್ಸ್ ಮತ್ತು ರಾಜೇಶ್ ಹೆಸರಿನಲ್ಲಿ 50 ಸಾವಿರ ಟ್ವೀಟ್ಗಳು ಹರಿದಾಡಿದ್ದವು. ಜಾಲತಾಣದಲ್ಲಿ ಚಿತ್ರದ ವಿಚಾರ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಚಿತ್ರತಂಡ ಸ್ಪಷ್ಟನೆ ನೀಡಿದೆ.
ಅಂದಹಾಗೆ ಚಪಾಕ್ ಚಿತ್ರವು ನೈಜ ಘಟನೆ ಆಧಾರಿತ ಚಿತ್ರವಾಗಿದೆ. 2005ರಲ್ಲಿ ಲಕ್ಷ್ಮೀ ಅಗರ್ವಾಲ್ ಎಂಬಾಕೆಯ ಮೇಲೆ ನದೀಮ್ ಖಾನ್, ತನ್ನ ಮೂವರು ಬೆಂಬಲಿಗರೊಂದಿಗೆ ದೆಹಲಿಯ ಮಾರುಕಟ್ಟೆಯೊಂದರ ಬಳಿ ಆ್ಯಸಿಡ್ ದಾಳಿ ಮಾಡಿದ್ದರು. ಚಿತ್ರದಲ್ಲಿ ಲಕ್ಷ್ಮೀ ಅಗರ್ವಾಲ್ ಪಾತ್ರದಲ್ಲಿ ದೀಪಿಕಾ ಕಾಣಿಸಿಕೊಂಡಿದ್ದು, ನಾಳೆ ತೆರೆಕಾಣಲಿದೆ. (ಏಜೆನ್ಸೀಸ್)