ಎದೆ ನಡುಗಿಸುವ ಕುಶಾಲತೋಪು!

ಎಂ.ರವಿ ಮೈಸೂರು
ವಿಜಯದಶಮಿಯಂದು 21 ಬಾರಿ ಕುಶಾಲ ತೋಪುಗಳು ಸಿಡಿಯುತ್ತಿದ್ದಂತೆಯೇ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ತಾಯಿ ಚಾಮುಂಡೇಶ್ವರಿಗೆ ಗಣ್ಯರು ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡುತ್ತಾರೆ. ಒಂದರ ನಂತರ ಮತ್ತೊಂದು ಸಿಡಿಮದ್ದು ಸಿಡಿಯುತ್ತಿದ್ದಂತೆ ನೆರೆದಿದ್ದ ಲಕ್ಷಾಂತರ ಜನರ ಎದೆ ಝಲ್ಲೆನ್ನುತ್ತದೆ. ಆದರೆ, ಈ ಶಬ್ದಕ್ಕೆ ಅಂಜದೆ ಗಜಪಡೆ ರಾಜಗಾಂಭೀರ್ಯದಿಂದ ನಿಂತಿರುತ್ತವೆ.

ಗಜಪಡೆ ಹೆದರದೆ ಮೆರವಣಿಗೆಯಲ್ಲಿ ಸಾಗಲು ದಸರಾ ಆರಂಭಕ್ಕೂ ಮೊದಲೇ ಕುಶಾಲತೋಪುಗಳನ್ನು ಸಿಡಿಸಿ ಶಬ್ದಕ್ಕೆ ಒಗ್ಗಿಕೊಳ್ಳುವಂತೆ ತಯಾರಿ ಮಾಡಲಾಗುತ್ತದೆ. ಸಿಡಿಮದ್ದನ್ನು ಗಜಪಡೆ ಮುಂದೆ ಸಿಡಿಸುವ ತಾಲೀಮನ್ನು ಹಿಂದಿನಿಂದಲೂ ನಡೆಸಿಕೊಂಡು ಬರಲಾಗಿದೆ. ಇದರ ಹಿಂದೆ ನಗರ ಸಶಸ್ತ್ರ ಪಡೆ (ಸಿಎಆರ್)ಯ ಸಿಬ್ಬಂದಿಯ ಶ್ರಮವೂ ಅಡಗಿದೆ.

ದಸರಾ ಮಹೋತ್ಸವದಲ್ಲಿ ಕುಶಾಲ ತೋಪು ಸಿಡಿಸಲೆಂದೇ ಬಳಸಲಾಗುವ ಪಿರಂಗಿ ಗಾಡಿಗಳನ್ನು ಅರಮನೆ ಆವರಣದಲ್ಲಿ ರಾಜರ ಕಾಲದಿಂದಲೂ ಇರಿಸಲಾಗಿದೆ. ಒಟ್ಟು 11 ಪಿರಂಗಿ ಗಾಡಿಗಳಿದ್ದು, ಇವುಗಳಲ್ಲಿ 7 ಪಿರಂಗಿಗಳಿಂದ ಕುಶಾಲ ತೋಪುಗಳನ್ನು ಹಾರಿಸಲಾಗುತ್ತದೆ. ಉಳಿದ ನಾಲ್ಕರಲ್ಲಿ ಕುಶಾಲ ತೋಪು ಸಿಡಿಸಲು ಬೇಕಾದ ಪರಿಕರಗಳನ್ನು ಇಡಲಾಗುತ್ತದೆ. ಅಂಬಾವಿಲಾಸ ಅರಮನೆ ಆವರಣದ ಮುಂಭಾಗ ಪ್ರವಾಸಿಗರು ನೋಡಲೆಂದೇ ಇವುಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ.

ಸಿಡಿಮದ್ದು ಸಿಡಿಸಲು ನಗರ ಸಶಸ್ತ್ರ ಪಡೆ (ಸಿಎಆರ್) ಸಿಬ್ಬಂದಿಯನ್ನು ಬಳಸಲಾಗುತ್ತದೆ. ಇವರು ಉತ್ತಮ ದೇಹದಾರ್ಢ್ಯ ಹೊಂದಿದ್ದು, ಚಾಕಚಕ್ಯತೆಯಿಂದ ಕೆಲಸ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಪಿರಂಗಿ ನಳಿಕೆಗಳನ್ನು ಶುದ್ಧ ಮಾಡುವುದರಿಂದ ಹಿಡಿದು ಕುಶಾಲತೋಪು ಹಾರಿಸುವವರೆಗೂ ಇವರಿಗೆ ತರಬೇತಿ ನೀಡಲಾಗಿರುತ್ತದೆ.

ಗಜಪಡೆಗೆ ತರಬೇತಿ: ಭಾರಿ ಶಬ್ದಕ್ಕೆ ಆನೆ ಬೆಚ್ಚಿದ್ದೇ ಆದಲ್ಲಿ ಲಕ್ಷಾಂತರ ಜನ ಸೇರುವ ಸ್ಥಳದಲ್ಲಿ ಏನಾದರೂ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚು. ಹೀಗಾಗಿ ಆನೆಗಳ ಮುಂದೆ ಸಿಡಿಮದ್ದುಗಳನ್ನು ಸಿಡಿಸಿ ತರಬೇತಿ ನೀಡಲಾಗುತ್ತದೆ.

ಈ ವರ್ಷ ದಸರಾ ಮಹೋತ್ಸವಕ್ಕೆ ಅರಮನೆಯಲ್ಲಿ ಬೀಡು ಬಿಟ್ಟಿರುವ ಗಜಪಡೆಗೆ ಈಗಾಗಲೇ ಎರಡು ಬಾರಿ ಕುಶಾಲ ತೋಪು ಸಿಡಿಸುವ ಮೂಲಕ ತರಬೇತಿ ನೀಡಲಾಗಿದೆ. ಮೊದಲ ಬಾರಿ ಕುಶಾಲ ತೋಪು ಸಿಡಿಸುವ ತರಬೇತಿ ನೀಡುವ ವೇಳೆ ಭಾರಿ ಶಬ್ದಕ್ಕೆ ‘ಧನಂಜಯ’ ಬೆಚ್ಚಿ ಬಿದ್ದ. ಸ್ಥಳದಿಂದ ಓಡಿ ಹೋಗಲು ಯತ್ನಿಸಿದ. ಈ ವೇಳೆ ಮಾವುತ ಧನಂಜಯನನ್ನು ನಿಯಂತ್ರಿಸಿದ. ಧನಂಜಯನಂತೆ ಈಶ್ವರನೂ ಮೊದಲ ಬಾರಿ ಬೆಚ್ಚಿಬಿದ್ದ. ಈಶ್ವರ ಎರಡನೇ ಬಾರಿ ಶಬ್ದ ಕೇಳಿದಾಗ ಭೇದಿ ಕಾಣಿಸಿಕೊಂಡಿತು. ಈಶ್ವರ, ಜಯಪ್ರಕಾಶ ಮತ್ತು ಲಕ್ಷ್ಮೀ ಮೊದಲ ಬಾರಿಗೆ ದಸರಾದಲ್ಲಿ ಭಾಗವಹಿಸುತ್ತಿರುವುದರಿಂದ ಭಾರಿ ಶಬ್ದಕ್ಕೆ ಬೆಚ್ಚಿ ಬಿದ್ದವು.

ಕುಶಾಲತೋಪು ಸಿಡಿಸಿದಾಗ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಒಟ್ಟು ಮೂರು ಬಾರಿ ಗಜಪಡೆಗೆ ತಾಲೀಮು ಮಾಡಿಸಲಾಗುತ್ತದೆ. ಶಬ್ದ, ವಾಸನೆಗೆ ಒಗ್ಗಿಕೊಳ್ಳಲೆಂದೇ ಸಿಡಿಮದ್ದು ಸಿಡಿಸಲು ಬಳಸುವ ಪುಡಿಯನ್ನು ಗಜಪಡೆಗೆ ಆಘ್ರಾಣಿಸಲಾಗುತ್ತದೆ. ತಾಲೀಮು ನಡೆಸಲು 1.25 ಕೆ.ಜಿ.ಯಷ್ಟು ಸಿಡಿಮದ್ದನ್ನು ಬಳಸಲಾಗುತ್ತದೆ.

ಸಿಎಆರ್ ಸಿಬ್ಬಂದಿ ಶ್ರಮ: ಕುಶಾಲ ತೋಪು ಸಿಡಿಸುವುದು ಸಾಮಾನ್ಯದ ಕೆಲಸವಲ್ಲ. ಎಲ್ಲರಿಗೂ ಇದರ ಭಾರಿ ಶಬ್ದ ಮಾತ್ರ ಕೇಳುತ್ತದೆ. ಆದರೆ ಇದಕ್ಕಾಗಿ ಶ್ರಮಿಸುವ ನಗರ ಸಶಸ್ತ್ರ ಪಡೆ(ಸಿಎಆರ್) ಸಿಬ್ಬಂದಿ ಶ್ರಮ ಮಾತ್ರ ಯಾರಿಗೂ ಗೊತ್ತಾಗುವುದಿಲ್ಲ. 90 ಸೆಕೆಂಡ್‌ಗಳಲ್ಲಿ 21 ಕುಶಾಲ ತೋಪುಗಳನ್ನು ಸಿಡಿಸಲಾಗುತ್ತದೆ. ಕುಶಾಲತೋಪು ಸಿಡಿಯುವುದರಲ್ಲಿ ಸ್ವಲ್ಪವೂ ವ್ಯತ್ಯಾಸವಾಗದಂತೆ ಸಿಬ್ಬಂದಿ ಎಚ್ಚರ ವಹಿಸುತ್ತಾರೆ. ನಿಗದಿತ ಸಮಯದೊಳಗೆ ಕುಶಾಲ ತೋಪು ಸಿಡಿಸುವಷ್ಟರಲ್ಲಿ ಪೊಲೀಸ್ ಸಿಬ್ಬಂದಿಯ ಎದೆಬಡಿತ ಹೆಚ್ಚಾಗಿರುತ್ತದೆ. ಎಲ್ಲವೂ ನಿಗದಿತ ಸಮಯದೊಳಗೆ ಮುಗಿದು ಮೆರವಣಿಗೆ ಹೊರಟಿತೆಂದರೆ ಸಿಎಆರ್ ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ.

ಶಬ್ದಕ್ಕೆ ಬೆಚ್ಚಿ ಓಡಿ ಹೋಗಿದ್ದ ಬಲರಾಮ: ಅಂಬಾರಿ ಹೊತ್ತ ಆನೆಗೆ ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ ಮಾಡಲು 2005ನೇ ಸಾಲಿನಲ್ಲಿ ತಾಲೀಮು ನಡೆಸುವಾಗ ಅರಮನೆ ಆವರಣದಲ್ಲಿ ಕೆಳ ಮಟ್ಟದಲ್ಲಿ ಹೆಲಿಕಾಪ್ಟರ್ ಬಂದಿದ್ದರಿಂದ ಬಲರಾಮ ಬೆಚ್ಚಿ ಓಡಿದ್ದ. ಅಲ್ಲದೆ ಈ ಹಿಂದೆ ದಸರಾ ಮಹೋತ್ಸವದ ಸಂದರ್ಭದಲ್ಲಿ ಗಜಪಡೆಗೆ ಸಿಡಿಮದ್ದನ್ನು ಸಿಡಿಸುವಾಗ ಇಬ್ಬರು ಸಿಎಆರ್ ಸಿಬ್ಬಂದಿ ಸಹ ಗಾಯಗೊಂಡಿದ್ದರು.

ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಜಗಪಡೆ ಮತ್ತು ಅಶ್ವಪಡೆ ಮುಂದೆ ಸಿಡಿಮದ್ದನ್ನು ಸಿಡಿಸುವ ಮೂಲಕ ಪ್ರತಿವರ್ಷ ತಾಲೀಮು ನಡೆಸಲಾಗುತ್ತದೆ. ವಿಜಯದಶಮಿಯಂದು ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ತರಬೇತಿ ನೀಡಲಾಗುತ್ತದೆ. ತರಬೇತಿ ನೀಡಲೆಂದೇ ನುರಿತ ಸಿಎಆರ್ ಸಿಬ್ಬಂದಿ ಇದ್ದಾರೆ. ಈಗಾಗಲೇ ಗಜಪಡೆಗೆ ಸಿಡಿಮದ್ದು ಸಿಡಿಸುವ ತಾಲೀಮು ನಡೆಸಲಾಗಿದೆ.
> ಕೆ.ಟಿ.ಬಾಲಕೃಷ್ಣ, ನಗರ ಪೊಲೀಸ್ ಆಯುಕ್ತ

ಭಾರಿ ಶಬ್ದಕ್ಕೆ ಜನರೇ ಬೆಚ್ಚುತ್ತಾರೆ. ಅಂತಹದ್ದರಲ್ಲಿ ಕಾಡಿನಿಂದ ನಾಡಿಗೆ ಬಂದ ಗಜಪಡೆ ಮುಂದೆ ಸಿಡಿಮದ್ದು ಸಿಡಿಸಿದಾಗ ಬೆಚ್ಚುವುದು ಸಹಜ. ಶಬ್ದಕ್ಕೆ ಒಗ್ಗಿಕೊಳ್ಳಲೆಂದೇ ಗಜಪಡೆ ಮುಂದೆ ಸಿಡಿಮದ್ದು ಸಿಡಿಸಿ ತಾಲೀಮು ನಡೆಸಲಾಗುತ್ತದೆ. ಮೊದಲ ಬಾರಿ ನಡೆಸಿದ ತಾಲೀಮಿಗೆ ಜನರಲ್ಲಿ ಆತಂಕ ಸೃಷ್ಟಿಯಾಗುವ ರೀತಿಯಲ್ಲಿ ಗಜಪಡೆ ಶಬ್ದಕ್ಕೆ ಬೆಚ್ಚಿಲ್ಲ. ತರಬೇತಿ ಮುಗಿಯುವಷ್ಟರಲ್ಲಿ ಅವು ಒಗ್ಗಿಕೊಳ್ಳಲಿವೆ.
> ಡಾ.ಡಿ.ಎನ್.ನಾಗರಾಜ್, ಪಶುವೈದ್ಯ

Leave a Reply

Your email address will not be published. Required fields are marked *