ಐಸಿಯುನಲ್ಲೇ ಇಷ್ಟಲಿಂಗ ಪೂಜೆ

ತುಮಕೂರು: ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿ ಕೊಳ್ಳುತ್ತಿರುವ ಡಾ.ಶಿವಕುಮಾರ ಸ್ವಾಮೀಜಿ ಮಂಗಳವಾರ ಚೆನ್ನೈನ ಡಾ.ರೇಲಾ ಇನ್​ಸ್ಟಿಟ್ಯೂಟ್ ಆಂಡ್ ಮೆಡಿಕಲ್ ಸೆಂಟರ್​ನ ಐಸಿಯುನಲ್ಲೇ ಇಷ್ಟಲಿಂಗ ಪೂಜೆ ನೆರವೇರಿಸಿ, ದ್ರವರೂಪದ ಆಹಾರ ಸೇವಿಸಿದರು. ಕೆಲಕಾಲ ಶ್ರೀಗಳನ್ನು ಐಸಿಯುನಲ್ಲೇ ವಾಕ್ ಮಾಡಿಸಲಾಯಿತು.

ಪಿತ್ತನಾಳ ಶಸ್ತ್ರಚಿಕಿತ್ಸೆ ಬಳಿಕ 3 ದಿನಗಳು ಆಂಟಿಬಯೋಟಿಕ್ಸ್ ಹಾಗೂ ಫ್ಲೂಯಿಡ್ಸ್ ಗಳನ್ನಷ್ಟೇ ನೀಡಲಾಗಿದ್ದು, ಮಂಗಳವಾರ ಸ್ವಲ್ಪ ನೀರು ಕೊಡಲಾಯಿತು. ರಾತ್ರಿ ಗಂಜಿ ಕುಡಿಸಲಾಯಿತು. ಬುಧವಾರ ಬೆಳಗ್ಗೆ ಶ್ರೀಗಳನ್ನು ವಾರ್ಡ್​ಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ. ಮೂರು ದಿನದಿಂದ ಇಷ್ಟಲಿಂಗ ಪೂಜೆ ಮಾಡಬೇಕೆಂದು ಹಠ ಹಿಡಿದಿದ್ದ ಶ್ರೀಗಳಿಗೆ ಐಸಿಯುನಲ್ಲೇ ಕೆಲಹೊತ್ತು ಪೂಜೆ ನೆರವೇರಿಸಲು ಆಸ್ಪತ್ರೆ ಸಿಬ್ಬಂದಿ ಅನುವು ಮಾಡಿಕೊಟ್ಟರು. ಸ್ಪಾಂಜ್​ಬಾತ್ ಮಾಡಿಸಿ ಭಸ್ಮಧಾರಣೆ ಮಾಡಿ, ಕೈಯಲ್ಲಿ ಇಷ್ಟಲಿಂಗ ಇಟ್ಟು ಪೂಜೆ ಮಾಡಿಸಲಾಯಿತು.

ಜಿಎಸ್​ಬಿ ಭೇಟಿ: ಮಾಜಿ ಸಂಸದ ಜಿ.ಎಸ್.ಬಸವರಾಜು ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು.

ಚೆನ್ನೈಗೆ ಸಿದ್ದಲಿಂಗಶ್ರೀ

ಭಾನುವಾರ ರಾತ್ರಿ ಶ್ರೀಮಠಕ್ಕೆ ಮರಳಿದ್ದ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಮಂಗಳವಾರ ಮಧ್ಯಾಹ್ನ ಚೆನ್ನೈಗೆ ತೆರಳಿದರು. ಶ್ರೀಗಳ ಬಳಿ ಕೆಲಹೊತ್ತು ಇದ್ದು, ಆರೋಗ್ಯ ವಿಚಾರಿಸಿದರು. ಶ್ರೀಗಳ ಆರೋಗ್ಯ ಉಸ್ತುವಾರಿ ವಹಿಸಿಕೊಂಡಿರುವ ಸಿದ್ಧಗಂಗಾ ಆಸ್ಪತೆ ಎಂಡಿ ಡಾ.ಪರಮೇಶ್ ಚೆನ್ನೈಗೆ ತೆರಳಿದ್ದು, ಸೋಮವಾರ ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ ಎಂದು ವಿಜಯವಾಣಿಗೆ ಮಾಹಿತಿ ನೀಡಿದರು.

Leave a Reply

Your email address will not be published. Required fields are marked *