ಇಷ್ಟಲಿಂಗ ಪೂಜೆಗೆ ಸಿದ್ಧಗಂಗಾಶ್ರೀ ಹಠ

ತುಮಕೂರು: ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿರುವ ಸಿದ್ಧಗಂಗೆಯ ಶತಾಯುಷಿ ಡಾ. ಶಿವಕುಮಾರ ಸ್ವಾಮೀಜಿ ಭಾನುವಾರ ಹೆಚ್ಚು ಲವಲವಿಕೆಯಿಂದ ಕಂಡುಬಂದರು.

ಚೆನ್ನೈನ ಡಾ.ರೇಲಾ ಇನ್​ಸ್ಟಿಟ್ಯೂಟ್ ಆಂಡ್ ಮೆಡಿಕಲ್ ಸೆಂಟರ್​ನಲ್ಲಿ ಶನಿವಾರ ಪಿತ್ತನಾಳ ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿರುವ ಶ್ರೀಗಳು ಭಾನುವಾರ ಇಷ್ಟಲಿಂಗ ಪೂಜೆಗೆ ಅನುವು ಮಾಡಿಕೊಡುವಂತೆ ಹಠ ಹಿಡಿದಿದ್ದರಿಂದ ಡಾ.ಮೊಹಮ್ಮದ್ ರೇಲಾ ಮನವೊಲಿಸಿದರು.

ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳನ್ನು ಹೊರತುಪಡಿಸಿ ಭಾನುವಾರ ಬೇರೆ ಯಾರಿಗೂ ದರ್ಶನಕ್ಕೆ ವೈದ್ಯರ ತಂಡ ಅವಕಾಶ ನೀಡಿಲ್ಲ. ಸಿದ್ದಲಿಂಗ ಶ್ರೀಗಳು ಭಾನುವಾರ ರಾತ್ರಿ ಮಠಕ್ಕೆ ಮರಳಿದರು.

ಶ್ರೀಗಳು ಚೇತರಿಸಿಕೊಳ್ಳುತ್ತಿದ್ದು, ಭಾನುವಾರ ಹೆಚ್ಚು ಲವಲವಿಕೆಯಿಂದ ಇದ್ದರು. ವೈದ್ಯರ ಸಲಹೆಯಂತೆ ಇನ್ನೂ 2 ದಿನ ಇಷ್ಟಲಿಂಗ ಪೂಜೆಗೆ ಅನುವು ಮಾಡಿಕೊಡಲಾಗುತ್ತಿಲ್ಲ. ಮಂಗಳವಾರ ವಾರ್ಡ್​ಗೆ ಸ್ಥಳಾಂತರವಾಗಲಿದ್ದು, ಭಕ್ತರು ಆತಂಕ ಪಡಬೇಕಿಲ್ಲ.

| ಸಿದ್ದಲಿಂಗ ಶ್ರೀಗಳು, ಮಠಾಧ್ಯಕ್ಷ

 

ಸಿದ್ಧಗಂಗಾ ಶ್ರೀಗಳು ಆರೋಗ್ಯದಿಂದ ಇದ್ದಾರೆ. ಭಕ್ತರು ಆತಂಕ ಪಡುವ ಅಗತ್ಯವಿಲ್ಲ. ಚೆನ್ನೈ ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದ್ದೇನೆ. ಅವರಿಗೆ ಸ್ವಲ್ಪ ಸಮಯ ವಿಶ್ರಾಂತಿ ಅವಶ್ಯಕತೆ ಇದೆ.

| ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸುತ್ತೂರು ಮಠ

 

ಶ್ರೀಗಳ ಆರೋಗ್ಯ ವಿಚಾರಿಸಿದ ಸಚಿವ ಡಿಕೆಶಿ

ಸಚಿವ ಡಿ.ಕೆ.ಶಿವಕುಮಾರ್ ಶನಿವಾರ ರಾತ್ರಿ ಚೆನ್ನೈನ ಡಾ.ರೇಲಾ ಆಸ್ಪತ್ರೆ ಐಸಿಯುನಲ್ಲಿರುವ ಸಿದ್ಧಗಂಗಾ ಶ್ರೀಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಈ ವೇಳೆ ‘ಶಿವ ಒಳ್ಳೆಯದು ಮಾಡಿದ್ದಾನೆ, ನನ್ನ ಆಯುಷ್ಯವೂ ನಿಮಗೆ ಸಿಗಲಿ’ ಎಂದು ಶ್ರೀಗಳಲ್ಲಿ ಅರಿಕೆ ಮಾಡಿಕೊಂಡರು.

Leave a Reply

Your email address will not be published. Required fields are marked *