ದಾಖಲೆವೀರ ಚೆನ್ನ ತುಳುನಾಡಿನ ಕಂಬಳ ಕ್ಷೇತ್ರದ ಚಿನ್ನ

<ನಿರಂತರ 13 ವರ್ಷಗಳಿಂದ ಬಹುಮಾನ * ಯಾವ ಕೋಣ ಜತೆಯಾದರೂ ಓಡುವುದರಲ್ಲಿ ನಿಸ್ಸೀಮ>

ವಿಜಯಕುಮಾರ್ ಕಂಗಿನಮನೆ
ಕಂಬಳ ಕ್ಷೇತ್ರದಲ್ಲೇ ದೊಡ್ಡ ಹೆಸರು ಮಾಡಿದ ಕೋಣವೆಂದರೆ ಅದು ಚೆನ್ನ ಅಲ್ಲದೆ ಬೇರೆ ಕೋಣಗಳ ಹೆಸರನ್ನು ಕಂಬಳಾಭಿಮಾನಿಗಳು ಹೇಳಲಾರರು.
2004ರಿಂದ ಬಹುಮಾನ ಪಡೆಯಲಾರಂಭಿಸಿ ಎರಡು ಬಾರಿ ಜೂನಿಯರ್ ಹಗ್ಗ ವಿಭಾಗದಲ್ಲಿ ಬಹುಮಾನ ಪಡೆದು ಬಾರ್ಕೂರು ಶಾಂತಾರಾಮ ಶೆಟ್ಟಿಯವರಿಗೆ ಹೆಸರು ತಂದುಕೊಟ್ಟಿತ್ತು. ಅನಂತರ 12 ವರ್ಷಗಳಿಂದ ಕೊಳೆಚ್ಚೂರು ಕೊಂಡ್ಯೊಟ್ಟು ಸುಕುಮಾರ ಶೆಟ್ಟರಲ್ಲಿರುವ ಚೆನ್ನ ಅವರ ಹೆಸರಿಗೆ ಎರಡು ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಗಳಿಸಿಕೊಟ್ಟಿದೆ. 2018ರವರೆಗೆ ನಿರಂತರ 13 ವರ್ಷ (ಒಂದು ವರ್ಷ ಕಂಬಳ ನಡೆದಿಲ್ಲ) ಬಹುಮಾನ ಪಡೆದು ಮಿಂಚಿರುವುದು ವಿಶೇಷ.

ಇವನ ಜತೆಗೂಡಿದ ಶಂಕರ, ಮಣೇಲು, ಬಜಪೆ, ಮೋಡ ನಿವೃತ್ತಿಯಾದರೂ ಚೆನ್ನ ಈಗಲೂ ಓಡಿ ಸೆಮಿಫೈನಲ್ ಹಂತಕ್ಕೆ ತಲುಪಿ ಕೂದಲೆಳೆ ಅಂತರದಲ್ಲಿ ಸೋತರೂ ಫೈನಲ್ ಓಟದ ಶಕ್ತಿ ಇದೆ ಎಂದು ತೋರ್ಪಡಿಸುತ್ತದೆ. ಕಳೆದ ಬಾರಿ 17 ವರ್ಷ ಪ್ರಾಯದ ಚೆನ್ನ ಏಳು ವರ್ಷ ಪ್ರಾಯದ ಬೋಳದಗುತ್ತು ಕಾಳನ ಜೊತೆಗೂಡಿ ನೇಗಿಲು ಹಿರಿಯ ವಿಭಾಗದಲ್ಲಿ ಪ್ರಶಸ್ತಿ ಗಳಿಸಿತ್ತು. ಯಾರೇ ಜೊತೆಯಾದರೂ ಜೊತೆಗಾರನಿಗೆ ಸಾಥ್ ಕೊಡುವ ಚೆನ್ನ ಸಾಧು ಸ್ವಭಾವದ ಕೋಣ. ಓಡಲು ಗಂತಿನಲ್ಲಿ ಹಿಡಿತ ಸಡಿಲಿಸುವುದನ್ನೇ ಕಾಯುತ್ತಿರುತ್ತಾನೆ.

ಮನೆಯಲ್ಲಿ ಕಂಬಳದ ದಿನ ಹಟ್ಟಿಯಿಂದ ಹೊರಬಂದೊಡನೆ ತುಳಸಿಕಟ್ಟೆಗೆ ಸುತ್ತು ಬಂದು ಅಡ್ಡ ಬಿದ್ದು ಹೊರಡುವ ಚೆನ್ನ ಟೆಂಪೋದತ್ತ ಓಡಿ ಓಟಕ್ಕೆ ಸಿದ್ಧ ಎಂದು ಸಾರುತ್ತಾನೆ. ತನ್ನನ್ನು ಸಾಕಿದ ಸುಕುಮಾರಣ್ಣನ ಅಕ್ಕ ವಿಧಿವಶರಾದ ಸಂದರ್ಭ ಚೆನ್ನ ಕರೆಯಲ್ಲಿ ಓಡಲು ತಕರಾರು ಮಾಡಿದಾಗ ಹಿಡಿದಿಡಲು ಸಾಧ್ಯವಾಗಲೇ ಇಲ್ಲ. ಕೋಣಗಳಿಗೂ ಸಾಕಿದವನ ಅಗಲಿಕೆ ಗೊತ್ತಾಗುತ್ತದೆ ಎನ್ನುವುದು ಇದರಲ್ಲಿ ತಿಳಿಯಿತು.

ಅಪೂರ್ವ ಕೋಡು ವಿಶೇಷ: ಚೆನ್ನ ಯಾವತ್ತೂ ಯಾರಿಗೂ ಗಾಯ ಮಾಡಿದವನಲ್ಲ. ಕಂಬಳದ ಕೋಣಗಳಲ್ಲೇ ಅಪೂರ್ವ ಕೋಡು (ನೆತ್ತಿಯ ಮೇಲ್ಮುಖ), ತುಂಬಿದ ಮೈಸಿರಿ, ವಿಶಾಲ ಎದೆ, ಗಿಡ್ಡ ಕಾಲು, ಉದ್ದ ದೇಹ ಚೆನ್ನನದ್ದು. ಕಂಬಳದ ಕೋಣ ಹೇಗಿರಬೇಕು ಎಂದರೆ ಚೆನ್ನನಂತಿರಬೇಕು ಅನ್ನುವಷ್ಟರ ಮಟ್ಟಿಗೆ ಪ್ರಸಿದ್ಧಿ. ಚೆನ್ನನಿಗೆ ಹಗ್ಗ ಕಿರಿಯ, ಹಿರಿಯ, ನೇಗಿಲು ಓಟ ಯಾವುದಾದರೂ, ಜೊತೆ ಯಾರಾದರೂ ಓಟಕ್ಕೆ ಅಡ್ಡಿಯಾಗುವುದಿಲ್ಲ. ಚೆನ್ನನ ಓಟದ ರಭಸ ನೋಡುವ ಪಕ್ಕದ ಕೋಣವೂ ವೇಗವಾಗಿ ಓಡುತ್ತದೆ. ಜೊತೆಯಾಗುವ ಕೋಣವನ್ನು ಹೊಂದಿಸಿಕೊಂಡು ಓಡುವುದು ವಿಶೇಷ.

ಚೆನ್ನ ಎಂದರೆ ಕೊಂಡ್ಯೊಟ್ಟು ಸುಕುಮಾರಣ್ಣನ ಅಪರಿಮಿತ ಪ್ರೀತಿಯ ಕೋಣ. ಕ್ರೀಡಾರತ್ನ ಪ್ರಶಸ್ತಿ ಪಡೆದ ಮೂವರಿಗೂ (ಕೊಳೆಚ್ಚೂರು ಕೊಂಡ್ಯೊಟ್ಟು ಸುಕುಮಾರ ಶೆಟ್ಟಿ, ಪಲಿಮಾರು ದೇವೇಂದ್ರ ಕೋಟ್ಯಾನ್, ನಕ್ರೆ ಜಯಕರ ಮಡಿವಾಳ) ಪ್ರಶಸ್ತಿ ಬರಲು ಚೆನ್ನನಿಂದಾಗಿಯೇ ಸಾಧ್ಯವಾಯಿತೇನೋ ಅನ್ನುವಷ್ಟರ ಮಟ್ಟಿಗೆ ಜನಮನ್ನಣೆ ಪಡೆದಿರುವ ಚೆನ್ನ ಕಂಬಳದ ಚಿನ್ನ.

ಇಂದು ಐಕಳಬಾವ ಕಂಬಳ: ಸ್ವತಃ ಕಾಂತಬಾರೆ ಬೂದಬಾರೆಯರೇ ಕರೆ ನಿರ್ಮಿಸಿ ಕೋಣಗಳನ್ನು ಓಡಿಸಿದ ಕಂಬಳವೆಂಬ ಖ್ಯಾತಿಯ ಐಕಳಬಾವ ಕಾಂತಬಾರೆ-ಬೂದಬಾರೆ ಜೋಡುಕರೆ ಕಂಬಳ ಜ.26ರಂದು ನಡೆಯಲಿದೆ. ನೂರಾರು ವರ್ಷಗಳ ಇತಿಹಾಸದ ಈ ಕಂಬಳ ಸಾಂಪ್ರದಾಯಿಕವಾಗಿ ನಡೆಯುತ್ತಿತ್ತು. ಈಗ ಆಧುನಿಕ ಶೈಲಿಗೆ (ಜೋಡುಕರೆ) ಜತೆಗೂಡಿ ಸಂಪ್ರದಾಯವನ್ನೂ ಉಳಿಸಿಕೊಂಡು ಜನಪ್ರಿಯವಾಗಿದೆ. ಬೆಳಪು ದೇವಿಪ್ರಸಾದ್ ಶೆಟ್ಟಿ ಗೌರವಾಧ್ಯಕ್ಷತೆಯಲ್ಲಿ ನಡೆಯುವ ಈ ಕಂಬಳದಲ್ಲಿ ಬಾವ ಕುಟುಂಬದ ನೂರಾರು ಮಂದಿ ದೇಶ-ವಿದೇಶಗಳಿಂದ ಆಗಮಿಸಿ ಕಂಬಳದಲ್ಲಿ ಪಾಲು ಪಡೆಯುತ್ತಾರೆ.