ಬಾವಿಗೆ ಬಿದ್ದ ಚಿರತೆ ರಕ್ಷಣೆ

ಶಿರ್ವ: ಇಲ್ಲಿನ ಪಾಲಮೆ ಎಂಬಲ್ಲಿ ಪಿಯುಸ್ ಮೋನಿಸ್ ಅವರಿಗೆ ಸೇರಿದ ಬಾವಿಗೆ ಬಿದ್ದಿದ್ದ 5 ವರ್ಷ ಪ್ರಾಯದ ಹೆಣ್ಣು ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ರಕ್ಷಿಸಿ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.
ಚಿರತೆ ಬುಧವಾರ ರಾತ್ರಿ ಬಾವಿಗೆ ಬಿದ್ದಿದ್ದು ಗುಟುರು ಹಾಕುತ್ತಿತ್ತು. ಗುರುವಾರ ಬೆಳಗ್ಗೆ ಮನೆಯವರು ಬಂದು ನೋಡಿದ್ದು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ನಾಯಿ ಮರಿ ಹೊತ್ತೊಯ್ಯುವ ಭರದಲ್ಲಿ ಚಿರತೆ ಬಾವಿಗೆ ಬಿದ್ದಿರುವ ಸಾಧ್ಯತೆ ಇದೆ. ಕಳೆದ ಕೆಲವು ಸಮಯದಿಂದ ಈ ಪ್ರದೇಶದಲ್ಲಿ ನಾಯಿಗಳು ಚಿರತೆಗೆ ಆಹಾರವಾಗುತ್ತಿವೆ.
ಬಾವಿಗೆ ಗೂಡು ಇಳಿಸಿದ್ದು ಚಿರತೆ ಅದರೊಳಗೆ ಬಂದ ಬಳಿಕ ಅದನ್ನು ರಕ್ಷಿಸಿ, ವೈದ್ಯಕೀಯ ಪರೀಕ್ಷೆ ನಡೆಸಿ ಕೊಲ್ಲೂರು ಮೂಕಾಂಬಿಕಾ ಅಭಯಾರಣ್ಯಕ್ಕೆ ಬಿಡಲಾಗಿದೆ ಎಂದು ಅರಣ್ಯಾಧಿಕಾರಿ ನಾಗೇಶ್ ಬಿಲ್ಲವ ತಿಳಿಸಿದ್ದಾರೆ.
ಸೆಕ್ಷನ್ ಅಧಿಕಾರಿಗಳಾದ ನಾಗೇಶ್ ಬಿಲ್ಲವ, ಸುರೇಶ್ ಗಾಣಿಗ, ಜಯರಾಮ್, ಅರಣ್ಯ ರಕ್ಷಕರಾದ ಜಯರಾಮ್ ಶೆಟ್ಟಿ, ಗಣಪತಿ, ಅಭಿಲಾಷ್, ಮಂಜುನಾಥ್, ಚಾಲಕ ಜಾಯ್ ಕಾರ‌್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆರ್‌ಎಫ್‌ಒ ಕ್ಲಿಫರ್ಡ್ ಲೋಬೊ ಮಾರ್ಗದರ್ಶನ ನೀಡಿದ್ದರು. ಗ್ರಾಮಸ್ಥರು ಕಾರ‌್ಯಾಚರಣೆಯಲ್ಲಿ ಸಹಕರಿಸಿದರು.

ಚಿರತೆ/ಕಾಟಿ ಹಾವಳಿ: ಶಿರ್ವ ಪಾಲಮೆ, ಪಾಂಬೂರು, ಪೆರ್ಣಂಕಿಲ, ಕುಕ್ಕುಪಲ್ಕೆ ಭಾಗದಲ್ಲಿ ನಿರಂತರ ಚಿರತೆ ಹಾವಳಿ ಕಂಡುಬರುತ್ತಿದೆ. ಕಾಡಿನಲ್ಲಿ ಆಹಾರ ಸಿಗದೆ ಚಿರತೆಗಳು ಊರಿಗೆ ಬಂದು ಸಾಕು ಪ್ರಾಣಿಗಳನ್ನು ಹೊತ್ತೊಯ್ಯುತ್ತಿವೆ. ನಾಯಿಗಳು ಸುಲಭವಾಗಿ ಅವುಗಳಿಗೆ ಆಹಾರವಾಗುತ್ತಿವೆ. ಕೆಲವು ತಿಂಗಳ ಹಿಂದೆ ಅರಣ್ಯ ಇಲಾಖೆಯವರು ಪಾಂಬೂರು ಬಳಿ ಬೋನು ಇರಿಸಿ ಎರಡು ಚಿರತೆಗಳನ್ನು ಹಿಡಿದಿದ್ದರು. ಪೆರ್ಣಂಕಿಲ ಬಳಿ ಉರುಳಿಗೆ ಸಿಲುಕಿದ್ದ ಚಿರತೆಯನ್ನು ರಕ್ಷಿಸುವಾಗ ಅದು ಸಾವನ್ನಪ್ಪಿತ್ತು. ಈ ಪ್ರದೇಶಗಳಲ್ಲಿ ಕಾಡು ಕೋಣ ಹಾವಳಿಯೂ ಇದ್ದು ಬೊಮ್ಮರಬೆಟ್ಟು ಗ್ರಾಪಂನ ಪಂಚನಬೆಟ್ಟು ಕುಳೇದು ಪರಿಸರದಲ್ಲಿ ಇತ್ತೀಚೆಗೆ ಕಾಡು ಕೋಣ ದನವೊಂದನ್ನು ಘಾಸಿಗೊಳಿಸಿತ್ತು.