ಮುಂದುವರಿದ ಚಿರತೆ ದಾಳಿ, ಹೆಚ್ಚಿದ ಆತಂಕ

ಹೊಸಪೇಟೆ: ತಾಲೂಕಿನ ಗುಡ್ಲವದ್ದಿಗೇರಿ ಗ್ರಾಮದ ರೈತ ರುದ್ರೇಶ ಜಮೀನಿನಿಂದ ಮನೆಗೆ ಬೈಕ್ ನಲ್ಲಿ ಬರುವಾಗ ರಸ್ತೆಯ ಬದಿಯಲ್ಲಿ ಕುಳಿತ ಚಿರತೆ ಏಕಾಏಕಿ ದಾಳಿ ಮಾಡಿದೆ. ಈ ಸಂದರ್ಭ ಭಯಗೊಂಡ ವ್ಯಕ್ತಿ ಬೈಕ್ ನಿಂದ ಬಿದ್ದ ಹಿನ್ನೆಲೆಯಲ್ಲಿ ರುದ್ರೇಶರ ಕೈಗೆ ಮತ್ತು ಕಾಲಿಗೆ ಗಾಯಗಳಾಗಿವೆ. ಚಿರತೆ ದಾಳಿ ನಡೆಸುತ್ತಿದ್ದಂತೆ ಅಕ್ಕಪಕ್ಕದವರು ಕೂಗಾಟ ಚೀರಾಟ ನಡೆಸುತ್ತಿದ್ದಂತೆ ಚಿರತೆ ಅಲ್ಲಿಂದ ಓಡಿ ಹೋಗಿದೆ. ಗಾಯಗೊಂಡ ರುದ್ರೇಶರನ್ನ ಹೊಸಪೇಟೆ ಸರ್ಕಾರಿ‌ ನೂರು ಹಾಸಿಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇ‌ನ್ನು ಅರಣ್ಯದ ಅಂಚಿನ ಗ್ರಾಮಗಳಾದ ಬೈಲುದ್ದಿಗೇರಿ ಮತ್ತು ಗುಂಡ್ಲವದಿಗೇರಿ ಗ್ರಾಮಗಳಿಗೆ ಹಲವು ವರ್ಷಗಳಿಂದ ಚಿರತೆ ಹಾವಳಿ ಭೀತಿ ತಪ್ಪುತ್ತಿಲ್ಲ. ಈ ಹಿಂದೆ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆ ಇದೀಗ ಮನುಷ್ಯರ ಮೇಲೆ ಕೂಡ ದಾಳಿ ಮಾಡಲು ಮುಂದಾಗಿದೆ, ಇದರಿಂದ ಈ ಭಾಗದ ಜನರು ಭಯ ಭೀತರಾಗಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.