ಶಾಂತಿಯುತ ಚುನಾವಣೆಗೆ ಜಿಲ್ಲಾಡಳಿತ ಸಿದ್ಧತೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಅನುಷ್ಠಾನಗೊಂಡ ದಿನದಿಂದ ಈವರೆಗೆ 52 ಲಕ್ಷ ರೂ. ಮೌಲ್ಯದ 14 ಸಾವಿರ ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಜಿಲ್ಲೆಯಲ್ಲಿ ಏ.18ರಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಮುಕ್ತ ಹಾಗೂ ಶಾಂತಿಯುತವಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ. ಇದಕ್ಕೆ ಪೂರಕವಾಗಿ ಚುನಾವಣಾ ಅಕ್ರಮ ತಡೆಯಲು ತೆರೆದಿರುವ ತನಿಖಾ ಠಾಣೆಗಳಿಗೆ ಪ್ರತಿದಿನ ಜಿಲ್ಲಾ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

ಪ್ರಾಣಭೀತಿ ಇರುವವರಿಗೆ ಠಾಣೆಗಳಲ್ಲಿ ಬಂದೂಕು ತಂದೊಪ್ಪಿಸುವ ಪ್ರಕ್ರಿಯೆಯಿಂದ ರಿಯಾಯಿತಿ ನೀಡಲು ನಿರ್ಧರಿಸಿರುವ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರದಿ ಆಧರಿಸಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದೆ.

ಅನೇಕ ಸಂದರ್ಭ ಆಭರಣ ವ್ಯಾಪಾರಿಗಳು ಸ್ವಯಂರಕ್ಷಣೆ ಕಲ್ಪಿಸಿಕೊಳ್ಳುವ ಅನಿವಾರ್ಯತೆಯಲ್ಲಿದ್ದರೆ, ಮಲೆನಾಡಿನ ಮೂಲೆಯಲ್ಲಿರುವ ಒಂಟಿ ಮನೆಗಳು ದರೋಡೆ ಭೀತಿಯಲ್ಲಿರುವುದು ಸಹಜ. ಜತೆಗೆ ರೈಫಲ್ ಕ್ಲಬ್ ಸದಸ್ಯರು ಹಾಗೂ ಸದಾ ಪ್ರಾಣ ಬೆದರಿಕೆ ಇರುವವರಿಗೂ ಎಸ್ಪಿ ನೀಡುವ ವರದಿ ಆಧರಿಸಿ ಬಂದೂಕು ಹೊಂದಲು ಜಿಲ್ಲಾಡಳಿತ ತೀರ್ವನಿಸಲಿದೆ.

ಚುನಾವಣಾ ಸಮಯದಲ್ಲಿ ಶಸ್ತ್ರಾಸ್ತ್ರಗಳನ್ನು ಆಯಾ ಠಾಣಾ ವ್ಯಾಪ್ತಿಯಲ್ಲಿ ಠೇವಣಿ ಇಡಬೇಕಿದೆ. ಅಧಿಕೃತವಾಗಿ ಶಸ್ತ್ರಾಸ್ತ್ರ ಹೊಂದಿರುವ 9,144 ಮಂದಿಯಲ್ಲಿ 9 ಸಾವಿರ ಮಂದಿ ಈಗಾಗಲೇ ಠೇವಣಿ ಇಟ್ಟಿದ್ದಾರೆ. ಉಳಿದವರು ಇಷ್ಟರಲ್ಲೇ ತಂದೊಪ್ಪಿಸಲಿದ್ದಾರೆ. ರೌಡಿಶೀಟರ್​ಗಳನ್ನು ಗುರುತಿಸಿ ಅವರ ವಿರುದ್ಧ ಐಪಿಸಿ 107 ಮತ್ತು 109ರನ್ವಯ ನಿಯಂತ್ರಣ ಹೇರಲಾಗಿದೆ.

341 ವಾಹನಗಳ ನಿಯೋಜನೆ: ಒಟ್ಟು 309 ಮಾರ್ಗಗಳಲ್ಲಿ 341 ವಾಹನಗಳನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇವಿಎಂ, ವಿವಿ ಪ್ಯಾಟ್ ಹಾಗೂ ಮತಗಟ್ಟೆ ಅಧಿಕಾರಿ, ಸಿಬ್ಬಂದಿ ನಿಯೋಜನೆ ಪ್ರಕ್ರಿಯೆ ಈಗಾಗಲೆ ಪೂರ್ಣಗೊಂಡಿದೆ.

ಜಿಲ್ಲೆಯಲ್ಲಿ 9,26,035 ಮತದಾರರು ಇದ್ದಾರೆ. ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಜಿಲ್ಲೆಗೆ ಸಂಬಂಧಿಸಿ 484 ಸೇವಾ ಮತದಾರರಿದ್ದು, ಅವರಿಗೆ ಇಟಿಪಿಬಿಎಸ್ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.

13,357 ಮಂದಿ ಫಸ್ಟ್ ವೋಟರ್ಸ್: ಈ ಬಾರಿ 13,357 ಮಂದಿ ಪ್ರಥಮ ಬಾರಿಗೆ ಮತ ಚಲಾಯಿಸುತ್ತಿದ್ದಾರೆ. 8,257 ಮಂದಿ ಅಂಗವಿಕಲರು ಸಹ ಬಂದು ಮತದಾನ ಮಾಡಲು ಅನುವಾಗುವಂತೆ ಜಿಲ್ಲಾಡಳಿತ ಅಗತ್ಯ ಸೌಲಭ್ಯ ಒದಗಿಸಿದೆ. ಕೆಲ ಅನಿವಾರ್ಯ ಸಂದರ್ಭಗಳಲ್ಲಿ ಆ ರೀತಿಯ ಮತದಾರರನ್ನು ಮತಗಟ್ಟೆಗೆ ಕರೆತರುವ ಹಾಗೂ ಮರಳಿ ಕರೆದೊಯ್ಯಲು ವಾಹನ ವ್ಯವಸ್ಥೆ ಮಾಡಲಾಗಿದೆ. ಎಲ್ಲ 1,222 ಮತಗಟ್ಟೆಗಳಲ್ಲಿ ಮತದಾನ ಸಮರ್ಪಕವಾಗಿ ನಡೆಯಲು ಮತಗಟ್ಟೆಗಳಿಗೆ ನಿಯೋಜಿಸಲಾದ 6,110 ಮಂದಿ ಅಧಿಕಾರಿ-ಸಿಬ್ಬಂದಿಯಲ್ಲಿ ಶೇ.25ರಷ್ಟು ಅಧಿಕಾರಿ, ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ನೇಮಿಸಿಕೊಳ್ಳಲಾಗಿದೆ. ತುರ್ತು ಸಂದರ್ಭ ಅವರನ್ನು ಚುನಾವಣಾ ಕರ್ತವ್ಯಕ್ಕೆ ಬಳಸಿಕೊಳ್ಳಲಾಗುವುದು. ಪ್ರತೀ ಮತಗಟ್ಟೆಯಲ್ಲಿ ನಾಲ್ವರು ಅಧಿಕಾರಿ, ಸಿಬ್ಬಂದಿ ಇದ್ದು, ಎಲ್ಲರಿಗೂ ಸಹ ಆಯಾ ತಾಲೂಕು ಕೇಂದ್ರಗಳಲ್ಲಿ ಮಾ.30ರಂದು ತರಬೇತಿ ನೀಡಲಾಗುವುದು.