ಅಮಾಯಕರ ವಂಚಿಸಲು ಹೊಸ ಜಾಲ

ಮನೋಹರ್ ಬಳಂಜ ಬೆಳ್ತಂಗಡಿ

ಸಹಕಾರಿ ಸಂಘಗಳಲ್ಲಿ ಬಡ್ಡಿರಹಿತ ಸಾಲ ನೀಡುತ್ತೇವೆ, ಇದಕ್ಕೆ ಬೇಕಾದ ದಾಖಲೆ ನೀಡಿದರೆ ಸಾಕು. ಯಾವುದೇ ಕಮಿಷನ್ ಇಲ್ಲದೆ ಸಾಲ ನೀಡುತ್ತೇವೆ ಎಂಬ ಭರವಸೆ ನೀಡಿ ಅಮಾಯಕರನ್ನು ವಂಚಿಸುತ್ತಿರುವ ಜಾಲವೊಂದು ಬೆಳಕಿಗೆ ಬಂದಿದೆ.

ಬೆಳ್ತಂಗಡಿ ಮತ್ತು ಪುತ್ತೂರಿನಲ್ಲಿ ಈ ಜಾಲ ಕಾರ್ಯಾಚರಿಸುತ್ತಿದ್ದು, ಹತ್ತಾರು ಮಂದಿ ಇದರ ಬಲೆಗೆ ಈಗಾಗಲೇ ಬಿದ್ದು ಲಕ್ಷಾಂತರ ರೂ. ಕಳೆದುಕೊಂಡಿದ್ದಾರೆ. ಬೆಳ್ತಂಗಡಿಯಲ್ಲಿ ಸುಮಾರು 12 ಲಕ್ಷ ರೂ. ಮೋಸ ನಡೆದಿರುವುದು ಬೆಳಕಿಗೆ ಬಂದಿದೆ.

ಸಾಲದ ಸ್ಕೀಮ್: ನಾಲ್ಕೈದು ಮಂದಿಯ ಒಂದು ತಂಡ ಬೆಳ್ತಂಗಡಿಯಲ್ಲಿ ಅಪರಿಚಿತ, ಬಡವಂತೆ ಕಾಣುವ ಅಮಾಯಕರನ್ನು ನೇರವಾಗಿ ಸಂಪರ್ಕಿಸುತ್ತದೆ. ಸಹಕಾರಿ ಸಂಘಗಳಲ್ಲಿ 15 ಸಾವಿರ ರೂ. ತನಕ ಬಡ್ಡಿರಹಿತ ಸಾಲ ನೀಡುತ್ತೇವೆ. ಇದಕ್ಕೆ ನಿಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಪ್ರತಿ, ಒಂದು ಭಾವಚಿತ್ರ ನೀಡಿದರೆ ಸಾಕು ಎಂದು ಮರುಳು ಮಾಡಿ ಒಪ್ಪಿಸುತ್ತದೆ.

ಬಳಿಕ ಅಮಾಯಕರನ್ನು ಇಲೆಕ್ಟ್ರಾನಿಕ್ಸ್ ಸಾಮಗ್ರಿ ಮಾರಾಟ ಮಳಿಗೆಗಳಿಗೆ ಕರೆದುಕೊಂಡು ಹೋಗಿ, ಅವರಿಂದ ದಾಖಲೆ ಪಡೆದು, ಮೊಬೈಲ್ ನಂಬರಿನಿಂದ ಒಟಿಪಿ ಪಡೆದು, ದಾಖಲೆಗಳಿಗೆ ಸಹಿ ಹಾಕಿಸಿ ಕಳುಹಿಸುತ್ತಾರೆ. ಕೆಲದಿನಗಳ ನಂತರ ನಿಮಗೆ ಸಾಲ ಸಿಗುತ್ತದೆ ಎಂದು ನಂಬಿಸುತ್ತಾರೆ. ಹೀಗೆ ನಂಬಿದ ಹಲವರು ಈಗಾಗಲೇ ಮೋಸ ಹೋಗಿದ್ದು, ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದಾರೆ.

ಮೋಸ ಹೇಗೆ?: ಫೈನಾನ್ಸ್ ಸಂಸ್ಥೆಯೊಂದರ ಮೂಲಕ ಅಮಾಯಕರ ಹೆಸರಿನಲ್ಲಿ ಗೃಹೋಪಯೋಗಿ ಉಪಕರಣಗಳನ್ನು ಖರೀದಿಸುವುದು ಈ ವಂಚನೆಯ ರೀತಿ. ಸಹಿ, ದಾಖಲೆ ನೀಡಿದ ಅಮಾಯಕರಿಗೆ ಇದು ಸಹಕಾರಿ ಸಂಘದ ಸಾಲದ ಪ್ರಕ್ರಿಯೆ ಎಂದಷ್ಟೇ ತಿಳಿದಿದೆ. ಆದರೆ ವಂಚಕರು, ಅಮಾಯಕರ ಹೆಸರಿನಲ್ಲಿ ಇಲೆಕ್ಟ್ರಾನಿಕ್ಸ್ ಮಳಿಗೆಗಳಲ್ಲಿ ಎಸಿ, ಫ್ರಿಜ್, ಟಿವಿ ಸಹಿತ ಗೃಹೋಪಯೋಗಿ ಉಪಕರಣಗಳನ್ನು ಖರೀದಿಸಿದ್ದಾರೆ. ಬೆಳ್ತಂಗಡಿಯಲ್ಲೇ 53 ವಸ್ತುಗಳನ್ನು ಹೀಗೆ ಮೋಸ ಮಾಡಿ ಖರೀದಿಸಲಾಗಿದೆ. ಇಎಂಐ (ತಿಂಗಳ ಕಂತು) ಪಾವತಿಗೆ ಇಸಿಎಸ್ ಫಾರ್ಮಿಗೂ ವಂಚಕರು ಸಹಿ ಮಾಡಿಸಿಕೊಂಡಿದ್ದು, ಬ್ಯಾಂಕ್ ಖಾತೆಯಿಂದ ಇಎಂಐ ಕಡಿತವಾದಾಗ ಅಮಾಯಕರ ಗಮನಕ್ಕೆ ಬಂದಿದೆ. ಖಾತೆಯಲ್ಲಿ ಹಣ ಇಲ್ಲದವರಿಗೆ ಬ್ಯಾಂಕ್ ಮತ್ತು ಫೈನಾನ್ಸ್ ಎರಡೂ ಕಡೆಯಿಂದ ದಂಡ ಕೂಡ ಹಾಕಲಾಗಿದೆ. ಹೀಗೆ ಲಕ್ಷಾಂತರ ರೂ. ಮೌಲ್ಯದ ಸ್ವತ್ತುಗಳನ್ನು ಖರೀದಿಸಲಾಗಿದ್ದು, ಅದನ್ನು ಅಮಾಯಕರು ಪಾವತಿಸಬೇಕಿದೆ. ಮುರುಕು ಮನೆ ಹೊಂದಿದವರ ಹೆಸರಿನಲ್ಲಿ ಎಸಿ, ಫ್ರಿಜ್ ಖರೀದಿಯಾಗಿದ್ದು, ಆ ಬಡವರೀಗ ತಲೆ ಮೇಲೆ ಕೈಇಟ್ಟುಕೊಂಡಿದ್ದಾರೆ.

ಮಳಿಗೆಗಳ ಸಿಬ್ಬಂದಿ ಭಾಗಿ: ಮೋಸ ಮಾಡಿದವರು ನಾಪತ್ತೆಯಾಗಿದ್ದಾರೆ. ಈ ಜಾಲದಲ್ಲಿ ಇಲೆಕ್ಟ್ರಾನಿಕ್ಸ್ ಮಳಿಗೆಗಳ ಸಿಬ್ಬಂದಿಯೂ ಭಾಗವಹಿಸಿರುವುದು ಸ್ಪಷ್ಟ. ಫೈನಾನ್ಸ್ ಮೂಲಕ ಯಾವುದೇ ಖರೀದಿ ಸಂದರ್ಭ ಸ್ವತಃ ದಾಖಲೆ ನೀಡಿದವರೇ ಹಾಜರಿರಬೇಕು ಮತ್ತು ಫೋಟೋ ದಾಖಲೆ ತೋರಿಸಬೇಕೆಂಬ ನಿಯಮ ಇದೆ. ಇದನ್ನು ವಂಚನಾ ಜಾಲ ಅಂಗಡಿಯ ಸಿಬ್ಬಂದಿಯನ್ನು ಬಳಸಿ ಮೋಸ ಮಾಡಿದೆ ಎಂದು ಸಂತ್ರಸ್ತರು ಹೇಳುತ್ತಾರೆ.

ಅರ್ಧ ಬೆಲೆಗೆ ಮಾರಾಟ!: ಇಲೆಕ್ಟ್ರಾನಿಕ್ಸ್ ಮಳಿಗೆಗಳ ಸಿಬ್ಬಂದಿ ಶಾಮೀಲಾಗಿರುವ ವಂಚನಾ ಜಾಲವು ಖರೀದಿಸಿದ ಉತ್ಪನ್ನಗಳನ್ನು ಕಡಿಮೆ ದರಕ್ಕೆ ಮಾರಾಟ ಮಾಡಿ ಲಾಭ ಮಾಡುತ್ತಿದೆ. ಇದಕ್ಕಾಗಿ ಕೆಲವು ಮಧ್ಯವರ್ತಿ ಕಮಿಷನ್ ಏಜೆಂಟರನ್ನೂ ನೇಮಿಸಿದೆ ಎಂಬ ಮಾಹಿತಿ ಲಭಿಸಿದೆ.

ಆತಂಕದಲ್ಲಿ ಫೈನಾನ್ಸ್ ಸಿಬ್ಬಂದಿ: ಸಾಮಾನ್ಯವಾಗಿ ಗೃಹೋಪಕರಣ, ಇಲೆಕ್ಟ್ರಾನಿಕ್ಸ್ ಉಪಕರಣಗಳ ಮಳಿಗೆಗಳೊಂದಿಗೆ ಫೈನಾನ್ಸ್‌ಗಳು ಒಪ್ಪಂದ ಮಾಡಿಕೊಂಡಿರುತ್ತವೆ. ಅದರಂತೆ ಬಂದ ಗ್ರಾಹಕರಿಗೆ ಸಾಲ ಬೇಕಾದವರಿಗೆ ದಾಖಲೆ ಪಡೆದುಕೊಂಡು ಮಳಿಗೆಯವರೇ ವಸ್ತುಗಳನ್ನು ನೀಡುತ್ತಾರೆ. ಹಾಗಾಗಿ ಈ ವಂಚನಾ ಜಾಲ ಫೈನಾನ್ಸ್ ಕಂಪನಿ ಗಮನಕ್ಕೆ ಬಂದಿರಲಿಲ್ಲ. ಈಗ ಮೋಸ ನಡೆದಿರುವುದು ಬೆಳಕಿಗೆ ಬರುತ್ತಿದ್ದಂತೆ ಫೈನಾನ್ಸ್ ಕಂಪನಿ ಚುರುಕಾಗಿದ್ದು, ಸಾಲ ವ್ಯವಸ್ಥೆಯನ್ನು ಕಟ್ಟುನಿಟ್ಟುಗೊಳಿಸಿದೆ. ಮೋಸ ನಡೆದಿರುವುದರಿಂದ ಕಂಪನಿಯ ಸಿಬ್ಬಂದಿಯೂ ಒತ್ತಡಕ್ಕೆ ಸಿಲುಕಿದ್ದು, ದಾರಿ ತೋಚದಂತಾಗಿದ್ದಾರೆ.