More

    ನಗರೋತ್ಥಾನ ಯೋಜನೆ ಅವ್ಯವಹಾರ ತನಿಖೆ, ಅಂದಾಜಿಗಿಂತ ಶೇ.32 ಹೆಚ್ಚುವರಿ ಹಣ ಮಂಜೂರು; ನಿವೃತ್ತ ಸಿಇ ನೇತೃತ್ವದ ಸಮಿತಿ ನೇಮಕ

    ಬೆಂಗಳೂರು:  ನಗರೋತ್ಥಾನ ಯೋಜನೆಯಡಿ 2016ರ ನವೆಂಬರ್​ನಿಂದ 2019ರ ಜೂನ್ ಅವಧಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನೀಡಿರುವ ಅನುಮೋದನೆಯಲ್ಲಿ ಭಾರಿ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಕಾಮಗಾರಿಗಳ ಗುಣಮಟ್ಟ ಹಾಗೂ ಅನುಮೋದನೆಯಲ್ಲಿ ನಡೆದ ಅವ್ಯವಹಾರ ಕುರಿತು ತನಿಖೆ ನಡೆಸಿದ ವರದಿ ನೀಡುವಂತೆ ಸೂಚಿಸಿ ಕ್ಯಾಪ್ಟನ್ ಆರ್.ಆರ್. ದೊಡ್ಡಿಹಾಳ್ ನೇತೃತ್ವದ ಸಮಿತಿಯನ್ನು ಸರ್ಕಾರ ರಚಿಸಿದೆ.

    2016ರ ನ.3ರಿಂದ 2019ರ ಜೂ.30ರವರೆಗಿನ ಅವಧಿಯಲ್ಲಿ ನಗರೋತ್ಥಾನ ಯೋಜನೆಗೆ ಹಣ ಬಿಡುಗಡೆ ಮಾಡಲಾಗಿದೆ. ಆದರೆ ಈ ಕಾಮಗಾರಿಗಳು ಕಳಪೆಯಾಗಿರುವ ಬಗ್ಗೆ ದೂರುಗಳು ಬಂದಿದ್ದವು. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದೊಡನೆ ಮುಖ್ಯಮಂತ್ರಿ ಯಡಿಯೂರಪ್ಪ ಅನುದಾನ ಸ್ಥಗಿತಗೊಳಿಸಿದ್ದರು.ಈಗ ಸಮಿತಿ ರಚಿಸಿ ತನಿಖೆಗೆ ಮುಂದಾಗಿದ್ದಾರೆ.

    ಹೆಚ್ಚುವರಿ ಹಣ ಪಾವತಿ: ನಗರೋತ್ಥಾನ ಯೋಜನೆಯಡಿ ಕಾಮಗಾರಿಗಳಿಗೆ ಅನುಮೋದನೆ ನೀಡಲು ‘ಅಧಿಕಾರಯುಕ್ತ ಸಮಿತಿ’ ರಚಿಸಲಾಗಿತ್ತು. ಅದು ಸಾವಿರಾರು ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ನೀಡಿದೆ. ಬಹುತೇಕ ಕಾಮಗಾರಿಗಳಿಗೆ ಅಂದಾಜು ವೆಚ್ಚಕ್ಕಿಂತ ಶೇ.32 ಹೆಚ್ಚುವರಿ ಮೊತ್ತ ನಮೂದಿಸಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿದೆ. ಈ ಅವ್ಯವಹಾರದಲ್ಲಿ ಅಧಿಕಾರಯುಕ್ತ ಸಮಿತಿ ಸದಸ್ಯರು, ಪ್ರಭಾವಿಗಳು ಮತ್ತು ಅಧಿಕಾರಿಗಳು ಶಾಮೀಲಾಗಿರುವ ಅನುಮಾನ ವ್ಯಕ್ತವಾಗಿದೆ.

    ಪಿಡಬ್ಲ್ಯೂಡಿ ನಿವೃತ್ತ ಸಿಇ ನೇತೃತ್ವದ ಸಮಿತಿ: ನಗರೋತ್ಥಾನ ಯೋಜನೆಯಲ್ಲಿ ನಡೆದಿರುವ ಅಕ್ರಮಗಳನ್ನು ತನಿಖೆಗೆ ಲೋಕೋಪಯೋಗಿ ಇಲಾಖೆಯ ನಿವೃತ್ತ ಮುಖ್ಯ ಇಂಜಿನಿಯರ್ ಆರ್.ಆರ್. ದೊಡ್ಡಿಹಾಳ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿ ರಚನೆಯ ಆದೇಶ ಹೊರಡಿಸಿದ 3 ತಿಂಗಳೊಳಗಾಗಿ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಕಾಮಗಾರಿಗಳ ಗುಣಮಟ್ಟ ಪರೀಕ್ಷೆ ಹಾಗೂ ಕಾಮಗಾರಿಗಳ ಪ್ರಗತಿ ಬಗ್ಗೆ ಮಾಹಿತಿ ಕ್ರೊಡೀಕರಿಸಿ ವರದಿ ಸಲ್ಲಿಸಬೇಕಿದೆ. ತನಿಖೆಯ ಸಮನ್ವಯಕ್ಕಾಗಿ ಯೋಜನೆ ವಿಭಾಗದ ಮುಖ್ಯ ಇಂಜಿನಿಯರ್ ಎನ್. ರಮೇಶ್ ನೇಮಕಗೊಂಡಿದ್ದಾರೆ.

    ವಾರದಲ್ಲಿ ಕಡತ ನೀಡದಿದ್ದರೆ ಶಿಸ್ತು ಕ್ರಮ

    ಪಾಲಿಕೆಯ 8 ವಲಯಗಳಲ್ಲಿ ನಗರೋತ್ಥಾನ ಯೋಜನೆಯ ಕಾಮಗಾರಿಗಳ ಕಡತಗಳಿವೆ. ಅಗತ್ಯ ದಾಖಲೆಗಳ ಕ್ರೋಡೀಕರಣಕ್ಕೆ ಪಾಲಿಕೆ ಗುಣನಿಯಂತ್ರಣ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಮಧುಕುಮಾರ್ ನೇಮಕವಾಗಿದ್ದಾರೆ. ತನಿಖಾ ಆದೇಶಪತ್ರ ತಲುಪಿದ ವಾರದಲ್ಲಿ ಅಗತ್ಯ ದಾಖಲೆ ಕ್ರೋಡೀಕರಿಸಿ ಸಮಿತಿಗೆ ಸಲ್ಲಿಸಲಿದ್ದಾರೆ. ಕಡತ ನೀಡಲು 1 ವಾರಕ್ಕಿಂತ ಹೆಚ್ಚು ವಿಳಂಬವಾದಲ್ಲಿ ಸಂಬಂಧಿಸಿದ ತಾಂತ್ರಿಕ ಸಹಾಯಕರು ಹಾಗೂ ಇಂಜಿನಿಯರ್​ಗಳನ್ನು ಹೊಣೆಯಾಗಿಸಿ ಶಿಸ್ತು ಕ್ರಮ ಕೈಗೊಳ್ಳಲು ಸರ್ಕಾರ ಸೂಚಿಸಿದೆ.

    19 ಸಾವಿರ ಕೋಟಿ ರೂ. ಕಾಮಗಾರಿ

    ಪಾಲಿಕೆಯ 8 ವಲಯಗಳ ರಸ್ತೆಗಳು, ಕುಡಿಯುವ ನೀರಿನ ಯೋಜನೆಗಳು, ಒಳಚರಂಡಿ ವ್ಯವಸ್ಥೆ, ಬೃಹತ್ ನೀರು ಗಾಲುವೆ, ಘನತ್ಯಾಜ್ಯ ವಸ್ತುಗಳ ನಿರ್ವಹಣೆ, ಕೆರೆಗಳ ಅಭಿವೃದ್ಧಿ, ಟೆಂಡರ್ ಶ್ಯೂರ್, ಮೇಲ್ಸೇತುವೆಗಳು ಸೇರಿ ಒಟ್ಟು 112 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಕಾಂಗ್ರೆಸ್ ಮತ್ತು ಸಮ್ಮಿಶ್ರ ಸರ್ಕಾರದ ಅವಧಿ ಯಲ್ಲಿ 19,500 ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು. ಇದರಲ್ಲಿ ಎಷ್ಟು ಹಣ ಬಿಡುಗಡೆಯಾಗಿದೆ ಮತ್ತು ಯಾವ್ಯಾವ ಕಾಮಗಾರಿಯಲ್ಲಿ ಎಷ್ಟೆಷ್ಟು ಅಕ್ರಮ ನಡೆದಿದೆ ಎಂಬುದು ತನಿಖೆಯಿಂದ ಬಹಿರಂಗವಾಗಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts