More

    ಗೂಗಲ್ ಪೇಗೆ 1 ರೂಪಾಯಿ ಹಾಕಿ 94 ಸಾವಿರ ರೂಪಾಯಿ ಧೋಖಾ!

    ಬೆಂಗಳೂರು: ಪೀಠೋಪಕರಣ ಖರೀದಿಸುವ ನೆಪದಲ್ಲಿ ಮಹಿಳೆಯ ಗೂಗಲ್ ಪೇಗೆ 1 ರೂ. ವರ್ಗಾಯಿಸಿದ ಆರೋಪಿ ಆಕೆಯ ಬ್ಯಾಂಕ್ ಖಾತೆಯಿಂದ 94 ಸಾವಿರ ರೂ. ಲಪಟಾಯಿಸಿದ್ದಾನೆ.

    ಬೈಯಪ್ಪನಹಳ್ಳಿ ಜಿ.ಎಂ. ಪಾಳ್ಯದ ಬೃಂದಾ ದೇಸಾಯಿ (30) ವಂಚನೆಗೊಳಗಾದ ಮಹಿಳೆ. ಬೃಂದಾ ಮನೆಯಲ್ಲಿದ್ದ ಹಳೆಯ ಪೀಠೋಪಕರಣಗಳನ್ನು ಮಾರಾಟ ಮಾಡಲು ಜ.7ರಂದು ಒಎಲ್​ಎಕ್ಸ್​ನಲ್ಲಿ ಜಾಹಿರಾತು ಹಾಕಿದ್ದರು. ಅದೇ ದಿನ ರಾತ್ರಿ ಅಪರಿಚಿತ ನಂಬರ್​ನಿಂದ ಬೃಂದಾ ಮೊಬೈಲ್​ಗೆ ಕರೆ ಬಂದಿತ್ತು.

    ಕರೆ ಮಾಡಿದ ವ್ಯಕ್ತಿ ತನ್ನನ್ನು ದೀಪಕ್ ಕಪೂರ್ ಎಂದು ಪರಿಚಯಿಸಿಕೊಂಡಿದ್ದ. ಮಿಲಿಟರಿ ಕ್ಯಾಂಟಿನ್ ವ್ಯಾಪಾರಿಯಾಗಿದ್ದು, ಪೀಠೋಪಕರಣಗಳನ್ನು ಖರೀದಿ ಮಾಡುವುದಾಗಿ ಹೇಳಿದ್ದ. ಹಣವನ್ನು ಗೂಗಲ್ ಪೇ ಮೂಲಕ ಕೊಡುವುದಾಗಿ ಹೇಳಿದ್ದ. ಪರಿಶೀಲನೆ ಮಾಡುವ ಸಲುವಾಗಿ 1 ರೂ.ಗಳನ್ನು ಬೃಂದಾ ಅವರ ಗೂಗಲ್ ಪೇ ಖಾತೆಗೆ ಕಳಿಸಿದ್ದ. ಜತೆಗೆ, ಕ್ಯೂಆರ್ ಕೋಡ್ ಕಳುಹಿಸಿದ್ದ.

    ಬೃಂದಾ ಕ್ಯೂಆರ್ ಕೋಡ್​ನ್ನು ಸ್ಕಾ್ಯನ್ ಮಾಡಿದಾಗ ಅದರಲ್ಲಿ ಪಿನ್ ನಂಬರ್ ಕೇಳಿತ್ತು. ತಮ್ಮ ಬ್ಯಾಂಕ್ ಖಾತೆಯ ಪಿನ್ ನಂಬರ್ ಭರ್ತಿ ಮಾಡಿದ್ದರು. ಆಗ ಖಾತೆಗೆ 2 ರೂ. ಬಂದಿತ್ತು. ನಂತರ ದೀಪಕ್ ಕಪೂರ್ 10 ಸಾವಿರ ರೂ.ಗಳಿಗೆ ಕ್ಯೂಆರ್ ಕೋಡ್ ಕಳುಹಿಸಿ, ಕ್ಲಿಕ್ ಮಾಡುವಂತೆ ಸೂಚಿಸಿದ್ದ. ಕ್ಲಿಕ್ ಮಾಡಿದ ಕೆಲವೇ ನಿಮಿಷಗಳಲ್ಲಿ ಬೃಂದಾ ಅವರ ಬ್ಯಾಂಕ್ ಖಾತೆಯಿಂದ 10 ಸಾವಿರ ರೂ. ಕಡಿತಗೊಂಡಿತ್ತು.

    ಇದರಿಂದ ಅನುಮಾನಗೊಂಡು ಬೃಂದಾ ಆತನಿಗೆ ಕರೆ ಮಾಡಿ ವಿಚಾರಿಸಿದಾಗ ತಾನು ನಿಮಗೆ ಹಣ ಹಿಂದಿರುಗಿಸುವುದಾಗಿ ನಂಬಿಸಿದ್ದ. ಆತ ಮತ್ತೆ ಹಲವು ಬಾರಿ ಇದೇ ರೀತಿ ಕ್ಯೂಆರ್ ಕೋಡ್ ಕಳಿಸಿ ಬೃಂದಾ ಅವರ ಖಾತೆಯಿಂದ ಒಟ್ಟು 94 ಸಾವಿರ ರೂ. ಲಪಟಾಯಿಸಿದ್ದ. ಇದಾದ ಬಳಿಕ ಬೃಂದಾ ಆತನಿಗೆ ಕರೆ ಮಾಡಿದಾಗ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಬೈಯಪ್ಪನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts