ರೈತರ ವಂಚಿಸಿದರೆ ಜೈಲು

|ವಿಲಾಸ ಮೇಲಗಿರಿ

ಬೆಂಗಳೂರು: ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ರೈತರಿಗೆ ಅನ್ಯಾಯವಾಗುವುದನ್ನು ತಡೆಯಲು ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಕಾಯ್ದೆ ತಿದ್ದುಪಡಿಗೆ ಸರ್ಕಾರ ಸಜ್ಜಾಗಿದೆ.

ಕೇಂದ್ರ ಸರ್ಕಾರ 2018-19ನೇ ಸಾಲಿಗೆ ಕೃಷಿ ಉತ್ಪನ್ನಗಳ ಕನಿಷ್ಟ ಬೆಂಬಲ ಬೆಲೆ (ಎಂಎಸ್​ಪಿ)ಯನ್ನು ಗಮನಾರ್ಹವಾಗಿ ಹೆಚ್ಚಿಸಿದ್ದರ ಫಲವನ್ನು ನೇರವಾಗಿ ರೈತರಿಗೆ ಒದಗಿಸುವ ಸದುದ್ದೇಶವೂ ಇದರ ಹಿಂದಿದೆ. ಅನೇಕ ವರ್ತಕರು ಎಂಎಸ್​ಪಿಗಿಂತ ಕಡಿಮೆ ಬೆಲೆಯಲ್ಲಿ ರೈತರ ಉತ್ಪನ್ನ ಖರೀದಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುವುದರಿಂದ ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಸರ್ಕಾರ ಚಿಂತನೆ ನಡೆಸಿದೆ.

ಆ ಮೂಲಕ ರೈತರನ್ನು ವಂಚಿಸುವ ವರ್ತಕರಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ವರೆಗೆ ದಂಡ ವಿಧಿಸುವಂತೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಸಹಕಾರ ಹಾಗೂ ಕೃಷಿ ಸಚಿವರು ಒಲವು ತೋರಿದ್ದಾರೆ.

ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ರೈತರ ಉತ್ಪನ್ನ ಖರೀದಿಸುವ ವರ್ತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಈಗಿರುವ ಎಪಿಎಂಸಿ ಕಾಯ್ದೆಯಲ್ಲಿ ಅಸಾಧ್ಯ. ಅಲ್ಲದೆ, ದೊಡ್ಡ ದೊಡ್ಡ ವರ್ತಕರು ರಾಜಕೀಯ ಸಖ್ಯ ಇರುವವರೇ ಆಗಿರುವುದಿರಂದ ಈಗಿರುವ ಕಾಯ್ದೆಯಲ್ಲಿ ಕ್ರಮ ಕಷ್ಟ. ಹಾಗಾಗಿ ಎಪಿಎಂಸಿಗೆ ಕಾಯ್ದೆಗೆ ತಿದ್ದುಪಡಿ ತಂದು ವರ್ತಕರಿಗೆ ಕಡಿವಾಣ ಹಾಕುವುದು ಸರ್ಕಾರದ ಉದ್ದೇಶ. ರಾಜ್ಯದಲ್ಲಿ 180 ಎಪಿಎಂಸಿಗಳಿದ್ದು, ಅನೇಕ ಕಡೆ ಈಗಾಗಲೇ ಆನ್​ಲೈನ್ ಮಾರ್ಕೆಟಿಂಗ್ ವ್ಯವಸ್ಥೆ ಜಾರಿಗೊಳಿಸಲಾಗಿದ್ದರೂ ರೈತರನ್ನು ವಂಚಿಸುವುದು ನಿಂತಿಲ್ಲ.

ಸುಧಾರಣೆಗಳಿಗೆ ಸಲಹೆ: ಕಾಯ್ದೆ ತರುವ ಜತೆಗೆ ಮಾರುಕಟ್ಟೆ ವ್ಯವಸ್ಥೆ ಬಲವರ್ಧನೆ, ಮಾರುಕಟ್ಟೆಯಲ್ಲಿ ಬೆಲೆ ಕುಸಿದಾಗ ರೈತರು ಉತ್ಪನ್ನ ಶೇಖರಿಸಲು ವ್ಯವಸ್ಥೆ, ಕೆಲವೇ ಕೆಲವು ಬೆಳೆ ಬೆಳೆಯುವುದರಿಂದ ಆಗುವ ಹಾನಿ ಕುರಿತು ರೈತರಿಗೆ ಮಾರ್ಗದರ್ಶನ, ವರ್ತಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಸೇರಿ ಹಲವು ಸುಧಾರಣೆಗಳನ್ನು ತರಲು ಸಹ ಬೆಲೆ ಆಯೋಗವು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಲಿದೆ.

2015ರಲ್ಲೇ ಪ್ರಸ್ತಾವನೆ

ಮಾರುಕಟ್ಟೆಯಲ್ಲಿ ರೈತರಿಗೆ ಆಗುತ್ತಿರುವ ವಂಚನೆ ಹಾಗೂ ಎಂಎಸ್​ಪಿಗಿಂತ ಕಡಿಮೆ ಬೆಲೆಯಲ್ಲಿ ರೈತರ ಉತ್ಪನ್ನ ಖರೀದಿಸುವವರ ವಿರುದ್ಧ ಕಾಯ್ದೆ ಜಾರಿಗೆ ತರಬೇಕೆಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಪ್ರಕಾಶ್ ಕಮ್ಮರಡಿ 2015ರಲ್ಲೇ ರಾಜ್ಯ ಸರ್ಕಾರದ ಗಮನ ಸೆಳೆದಿದ್ದಲ್ಲದೆ, ಪ್ರಸ್ತಾವನೆಯೊಂದನ್ನೂ ಸಲ್ಲಿಸಿದ್ದರು. ಈಗ ಅದು ಜಾರಿಗೆ ಬರುವ ಕಾಲ ಸನ್ನಿಹಿತವಾಗಿದೆ.

ಮಹಾರಾಷ್ಟ್ರಕ್ಕಿಂತ ಮಾದರಿ

ಮಹಾರಾಷ್ಟ್ರ ಸರ್ಕಾರ ಎಂಎಸ್​ಪಿಗಿಂತ ಕಡಿಮೆ ಬೆಲೆಗೆ ಕೃಷಿ ಉತ್ಪನ್ನ ಖರೀದಿಸುವ ವರ್ತಕರನ್ನು ಜೈಲಿಗೆ ಕಳುಹಿಸುವ ಕಾಯ್ದೆ (ಮಹಾರಾಷ್ಟ್ರ ಅಗ್ರಿಕಲ್ಚರ್ ಪ್ರೊಡ್ಯೂಸ್ ಆಂಡ್ ಮಾರ್ಕೆಟಿಂಗ್-ಡೆವಲಪ್​ವೆುಂಟ್ ಆಂಡ್ ರೆಗ್ಯುಲೇಷನ್ ಆಕ್ಟ್-1963)ಕ್ಕೆ ತಿದ್ದುಪಡಿ ತಂದು 1 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸುವ ಕಾಯ್ದೆ ಜಾರಿಗೆ ತಂದಿದೆ. ಆದರೆ, ರಾಜ್ಯ ಸರ್ಕಾರ ಅದಕ್ಕಿಂತಲೂ ವಿಭಿನ್ನ ಹಾಗೂ ದೇಶಕ್ಕೆ ಮಾದರಿಯಾಗುವ ಕಾಯ್ದೆ ಜಾರಿಗೆ ಮುಂದಾಗಿದೆ.

ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ರೈತರ ಉತ್ಪನ್ನ ಖರೀದಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತದೆ. ಮಹಾರಾಷ್ಟ್ರ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಈ ಬಗ್ಗೆ ನಮ್ಮ ಸರ್ಕಾರವೂ ಚಿಂತನೆ ನಡೆಸಲಿದೆ.

| ಎನ್.ಎಚ್. ಶಿವಶಂಕರರೆಡ್ಡಿ ಕೃಷಿ ಸಚಿವ

ಶೇ.15 ಕಮಿಷನ್

ಕೇಂದ್ರ ಸರ್ಕಾರ ಎಂಎಸ್​ಪಿ ಏರಿಕೆ ಜತೆಗೆ ಈ ಬೆಲೆಗೆ ರೈತರ ಉತ್ಪನ್ನ ಖರೀದಿಸುವ ವರ್ತಕರಿಗೆ ಶೇ.15 ಕಮಿಷನ್ ಕೂಡ ನೀಡಲಿದೆ. ಎಷ್ಟು ಬೇಕಾದರೂ ದಾಸ್ತಾನು ಅವಕಾಶ, ರಫ್ತು ಅನುಮತಿ ಸೇರಿ ಹಲವು ಪ್ರೋತ್ಸಾಹದಾಯಕ ಕಾರ್ಯಕ್ರಮ ಜಾರಿಗೊಳಿಸಿದ್ದು, ಈ ಬಗ್ಗೆ ವರ್ತಕರಿಗೆ ತಿಳಿಸಬೇಕಾದ ಅಗತ್ಯವಿದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ.

ವರ್ತಕರಿಂದ ರೈತರಿಗೆ ಆಗುತ್ತಿರುವ ಅನ್ಯಾಯಗಳ ಕುರಿತು ಕಾಯ್ದೆ ತಿದ್ದುಪಡಿ ಸಂಬಂಧ ರಾಷ್ಟ್ರೀಯ ಕಾನೂನು ಶಾಲೆಯಿಂದ ವರದಿ ತರಿಸಿಕೊಂಡಿದ್ದೇವೆ. ಶೀಘ್ರದಲ್ಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ.

| ಡಾ.ಪ್ರಕಾಶ್ ಕಮ್ಮರಡಿ ಅಧ್ಯಕ್ಷ, ಕರ್ನಾಟಕ ಕೃಷಿ ಬೆಲೆ ಆಯೋಗ