ಬೆಂಗಳೂರು: ಮ್ಯಾಟ್ರಿಮೊನಿಯಲ್ಲಿ ಪರಿಚಿತನಾದ ವ್ಯಕ್ತಿಯೊಬ್ಬ ಪ್ರಾಜೆಕ್ಟ್ಗೆ ಸಂಬಂಧಿಸಿದಂತೆ ಹಣಕಾಸಿನ ಸಮಸ್ಯೆ ಇರುವುದಾಗಿ ನಂಬಿಸಿ ವೈದ್ಯೆಯಿಂದ 1.77 ಲಕ್ಷ ರೂ. ಪಡೆದು ವಂಚಿಸಿದ್ದಾನೆ. ಮೋಸ ಹೋದ ವೈದ್ಯೆ ತಿಲಕನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜಯನಗರದ ನಿವಾಸಿ ಸಾಕ್ಷಿ (39) ವಂಚನೆಗೊಳಗಾದರು. ಸಾಕ್ಷಿ ನಗರದಲ್ಲಿ ವೈದ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮ್ಯಾಟ್ರಿಮೊನಿ ವೆಬ್ಸೈಟ್ನಲ್ಲಿ ರಷ್ಯಾದ ಮಾಸ್ಕೊದಲ್ಲಿ ವಾಸಿಸುತ್ತಿರುವುದಾಗಿ ಹೇಳಿಕೊಂಡ ಸಿದ್ಧಾರ್ಥ ರೋಹನ್ ಎಂಬಾತನ ಪರಿಚಯವಾಗಿತ್ತು. ಕಂಪನಿ ಕೆಲಸಕ್ಕೆ ಸಂಬಂಧಿಸಿದಂತೆ ವೆನೆಜುವೆಲಾಕ್ಕೆ ಬಂದಿದ್ದೇನೆ. ಆರ್ಥಿಕ ಮುಗ್ಗಟ್ಟು ಎದುರಾಗಿದೆ. ಸಹಾಯ ಮಾಡುವಂತೆ ಆತ ಮನವಿ ಮಾಡಿದ್ದ. ಈತನ ಮಾತಿಗೆ ಮರುಳಾದ ಸಾಕ್ಷಿ, ಆತ ಹೇಳಿದಂತೆ ಗುರುಗ್ರಾಮದಿಂದ ವಸ್ತುಗಳನ್ನು ಪೂರೈಸುವ ಹೈವಾಕು ಕತ್ ಎಂಬ ಹೆಸರಿನ ಖಾತೆಗೆ ಡಿ.23ರಂದು 1,77,500 ರೂ. ಜಮೆ ಮಾಡಿದ್ದರು.
ನಕಲಿ ನಂಬರ್ನಿಂದ ಕರೆ: ಈ ನಡುವೆ ಸಾಕ್ಷಿಗೆ ಕರೆ ಮಾಡಿದ್ದ ಸಿದ್ಧಾರ್ಥ ರೋಹನ್ ತನಗೆ 850 ಡಾಲರ್ ಬಂದಿದೆ. ಆ ಹಣವನ್ನು ನಿಮ್ಮ ಖಾತೆಗೆ ವರ್ಗಾಯಿಸುತ್ತೇನೆ ಎಂದು ಹೇಳಿದ್ದ. ಇದಾದ ಕೆಲ ದಿನಗಳ ಬಳಿಕ ಪಿ. ಸಾಂಗ್ ಲಾಲ್ ಖಾನ್ ಕೌಲ್ ಎಂಬಾತ ಸಾಕ್ಷಿಗೆ ಕರೆ ಮಾಡಿ, ಸಿದ್ಧಾರ್ಥ ರೋಹನ್ ನಿಮ್ಮ ಖಾತೆಗೆ ಜಮೆ ಮಾಡಿರುವ ಹಣವನ್ನು ಅಪ್ಗ್ರೇಡ್ ಮಾಡಲು 3.78 ಲಕ್ಷ ರೂ.ಗಳನ್ನು ತಾವು ಹೇಳಿದ ಬ್ಯಾಂಕ್ ಖಾತೆಗೆ ಜಮೆ ಮಾಡುವಂತೆ ಹೇಳಿದ್ದ. ಇದಾದ ಕೆಲ ಹೊತ್ತಿನಲ್ಲೇ ಇಂಗ್ಲೆಂಡ್ನಿಂದ ಕರೆ ಮಾಡಿದ ಮತ್ತೊಬ್ಬ ವ್ಯಕ್ತಿ ಸಹ ಹಣ ಜಮೆ ಮಾಡುವಂತೆ ಮನವಿ ಮಾಡಿದ್ದ. ಈ ಬಗ್ಗೆ ಸಾಕ್ಷಿ ಅವರಿಗೆ ಅನುಮಾನ ಬಂದು ಪರಿಶೀಲಿಸಿದಾಗ, ಸಿದ್ಧಾರ್ಥ ರೋಹನ್ ಮತ್ತು ಇತರ ಇಬ್ಬರು ಕರೆ ಮಾಡಿದ ಮೊಬೈಲ್ ಸಂಖ್ಯೆಗಳು ನಕಲಿ ಎಂಬುದು ಗೊತ್ತಾಗಿತ್ತು. ತಕ್ಷಣವೇ ಅವರು ತಿಲಕ್ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.