ನಕಲಿ ಔಷಧ ನೀಡಿ ವಂಚನೆ

ವಿಜಯವಾಣಿ ಸುದ್ದಿಜಾಲ ಶಿರಸಿ

ಶಸ್ತ್ರ ಚಿಕಿತ್ಸೆ ಇಲ್ಲದೇ ಔಷಧದ ಮೂಲಕ ಕಣ್ಣಿನ ಪೊರೆ ಕಡಿಮೆ ಮಾಡುವುದಾಗಿ ನಂಬಿಸಿ ಕೂಲಿ ಕಾರ್ವಿುಕ ಕುಟುಂಬದಿಂದ 7500 ರೂ. ಪಡೆದು ವಂಚಿಸಿದ ಘಟನೆ ತಾಲೂಕಿನ ಇಟಗುಳಿಯಲ್ಲಿ ಶನಿವಾರ ನಡೆದಿದೆ.

ಬಸವರಾಜ ದುರ್ಗಪ್ಪ ಭೋವಿ ಹಣ ಕಳೆದುಕೊಂಡಿದ್ದಾರೆ. ಬೆಂಗಳೂರಿನ ಆಲ್ ಇಂಡಿಯಾ ಹೋಮಿಯೋಕೇರ್ ಕ್ಯಾಂಪ್ ಹೆಸರಿನ ಗುರುತಿನ ಚೀಟಿ ಸಿದ್ಧಪಡಿಸಿಕೊಂಡು ಬೈಕ್​ನಲ್ಲಿ ಬಂದಿದ್ದ ಇಬ್ಬರು ವಂಚಕರು ಸ್ಥಳೀಯ ಆಶಾ ಕಾರ್ಯಕರ್ತೆ ಶಾರದಾ ಅವರನ್ನು ಭೇಟಿಯಾಗಿದ್ದಾರೆ.

ನಾವು ಸಾಗರದಿಂದ ಬಂದಿದ್ದೇವೆ. ಕಣ್ಣಿನ ದೋಷ, ನರ ದೋಷ, ಲಕ್ವಾ ಹೊಡೆದವರು ಹಾಗೂ ಬುದ್ಧಿ ಮಾಂದ್ಯರಿಗೆ ಉಚಿತವಾಗಿ ಚಿಕಿತ್ಸೆ ನೀಡು ತ್ತೇವೆ. ಗ್ರಾಮದಲ್ಲಿರುವ ಅಂಥವರನ್ನು ಪರಿಚಯ ಮಾಡಿಸಿಕೊಡಿ ಎಂದಿದ್ದಾರೆ.

ಸರ್ಕಾರದ ಯೋಜನೆಯ ಹೊರತಾಗಿ ಬೇರೆ ಆರೋಗ್ಯ ಚಿಕಿತ್ಸೆಗೆ ಆಸ್ಪದ ಇಲ್ಲದ ಕಾರಣ ಆಶಾ ಕಾರ್ಯಕರ್ತೆ ಸ್ಪಂದಿಸಿಲ್ಲ. ಇದರ ಹೊರತಾಗಿಯೂ ಇಬ್ಬರು ಗ್ರಾಮಕ್ಕೆ ತೆರಳಿ ಸ್ಥಳೀಯರ ಆರೋಗ್ಯ ಸಮಸ್ಯೆ ವಿಚಾರಿಸಿದ್ದಾರೆ.

ಕೂಲಿ ಮಾಡಿ ಜೀವನ ನಡೆಸುತ್ತಿರುವ ಬಸವರಾಜ ಭೋವಿ ಅವರನ್ನು ಭೇಟಿ ಮಾಡಿದ ಆಗಂತುಕರು, ಕಣ್ಣಿನ ಪೊರೆಗೆ ಶಸ್ತ್ರ ಚಿಕಿತ್ಸೆ ಬೇಕಾಗಿಲ್ಲ. ಔಷಧದಿಂದಲೇ ಸರಿಪಡಿಸುತ್ತೇವೆ ಎಂದು ನಂಬಿಸಿದ್ದಾರೆ.

ಯಾವುದೇ ಹೆಸರು, ಹೊದಿಕೆ ಇಲ್ಲದ ನಾಲ್ಕು ಗುಳಿಗೆಗಳನ್ನು ನೀಡಿ ತಕ್ಷಣ ಸೇವಿಸುವಂತೆ ಸೂಚಿಸಿದ್ದಾರೆ. ಕಣ್ಣಿಗೆ ಬಿಡುವ ಔಷಧ ಫ್ರಿಜ್​ನಲ್ಲಿದೆ. ಮಧ್ಯಾಹ್ನ ತಂದುಕೊಡುತ್ತೇವೆ. ಅದನ್ನು ದಿನಕ್ಕೆರಡು ಬಾರಿ ಕಣ್ಣಿಗೆ ಬಿಟ್ಟರೆ ಪೊರೆ ಶಸ್ತ್ರ ಚಿಕಿತ್ಸೆ ಇಲ್ಲದೇ ಕಡಿಮೆ ಆಗುತ್ತದೆ ಎಂದು ನಂಬಿಸಿದ್ದಾರೆ. ಓದು ಬರಹ ಬರದ ಕುಟುಂಬದ ಸದಸ್ಯರು ಅವರಿಗೆ 7500 ರೂ. ನೀಡಿದ್ದಾರೆ.

ಚಿಕಿತ್ಸೆಗೆ 5 ಸಾವಿರ ರೂ..:ಅಮಚಿಮನೆ ಕೂಲಿ ಕಾರ್ವಿುಕ ಉಮೇಶ ಪೂಜಾರಿ ಅವರಿಗೆ ಕುತ್ತಿಗೆ ಮತ್ತು ಮೈ ಕೈ ನೋವಿನ ಚಿಕಿತ್ಸೆಗಾಗಿ 5 ಸಾವಿರ ರೂ. ಕೇಳಿದ್ದಾರೆ. ನೋವಿನ ಕುರಿತಾಗಿ ಈಗಾಗಲೇ ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಉಮೇಶ ಅವರು ಪರೀಕ್ಷೆ ಮಾಡಿಸಿಕೊಂಡಿದ್ದ ದಾಖಲೆಗಳನ್ನು ಪರಿಶೀಲಿಸಿದ ನಕಲಿ ವೈದ್ಯರು,‘ಎರಡು ನರಗಳು ಒಂದಕ್ಕೊಂದು ಬೆಸೆದುಕೊಂಡಿದ್ದರಿಂದ ಈ ನೋವು ಆರಂಭಗೊಂಡಿದೆ. ಇದಕ್ಕೆ ಯಾವುದೇ ಶಸ್ತ್ರ ಚಿಕಿತ್ಸೆಯ ಅಗತ್ಯ ಇಲ್ಲ. ಔಷಧದಿಂದ ಕಡಿಮೆ ಮಾಡಬಹುದಾಗಿದೆ. ಇದಕ್ಕಾಗಿ 5 ಸಾವಿರ ರೂ. ಖರ್ಚು ಬರಲಿದೆ. ಈ ಔಷಧ ಸಂಗ್ರಹ ಇಲ್ಲದ ಕಾರಣ ಹಣ ನೀಡಿದರೆ ಹುಬ್ಬಳ್ಳಿಯಿಂದ ತರಿಸಿಕೊಡುತ್ತೇವೆ’ ಎಂದು ನಂಬಿಸಿದ್ದಾರೆ. ಆದರೆ, ಉಮೇಶ ಪೂಜಾರಿ ಅವರಲ್ಲಿ ಅಷ್ಟೊಂದು ಹಣ ಇಲ್ಲದ ಕಾರಣ ಮುಂದಿನ ಬಾರಿ ಬಂದಾಗ ಔಷಧ ಖರೀದಿಸುವುದಾಗಿ ಹೇಳಿ ಕಳಿಸಿದ್ದಾರೆ.

ಯಾವುದೇ ರ್ಯಾಪರ್ ಇಲ್ಲದ ಗುಳಿಗೆಯನ್ನು ರೋಗಿಗಳಿಗೆ ನೀಡುವಂತಿಲ್ಲ. ಇಟಗುಳಿಗೆ ಆಗಮಿಸಿದ ವ್ಯಕ್ತಿಗಳು ನಮ್ಮಿಂದ ಅನುಮತಿ ಪಡೆದಿಲ್ಲ. ಸಾರ್ವಜನಿಕರು ಅವರ ಬಗೆಗೆ ತಿಳಿದು ವ್ಯವಹರಿಸುವುದು ಉತ್ತಮ.

| ಡಾ. ವಿನಾಯಕ ಭಟ್, ತಾಲೂಕು ವೈದ್ಯಾಧಿಕಾರಿ. ಶಿರಸಿ

ನೀವು ಚಿಕಿತ್ಸೆ ಮಾಡಿಸಿಕೊಳ್ಳದಿದ್ದರೆ ನಮಗೇನೂ ಹಾನಿ ಇಲ್ಲ, ನಮಗೆ 60 ಸಾವಿರ ರೂ. ಸಂಬಳ ಬಂದೇ ಬರುತ್ತದೆ ಎಂದು ಹೇಳಿ ಈ ಅನಕ್ಷರಸ್ಥರನ್ನು ನಂಬಿಸಿದ್ದಾರೆ. ಈ ವಂಚಕರ ವಿರುದ್ಧ ಪೊಲೀಸ್ ದೂರು ಸಲ್ಲಿಸಲು ನಿರ್ಧರಿಸಿದ್ದೇವೆ.

| ಗೀತಾ ಭೋವಿ, ಇಟಗುಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ