ಚಾರ್ವಡಿ ಘಾಟ್​ನಲ್ಲಿ ಮತ್ತೆ ಭೂಕುಸಿತ

ಬಣಕಲ್: ಚಾರ್ವಡಿ ಘಾಟ್​ನಲ್ಲಿ ಬುಧವಾರವೂ ಕೆಲವೆಡೆ ರಸ್ತೆ ಮೇಲೆ ಗುಡ್ಡ ಕುಸಿದಿರುವುದರಿಂದ ತೆರವು ಕಾರ್ಯಚರಣೆ ಸವಾಲಾಗಿ ಪರಿಣಮಿಸಿದೆ. ಸೋಮವಾರ ಸಂಜೆ ಚಾರ್ವಡಿ ಘಾಟ್ ಎರಡನೇ ತಿರುವಿನಲ್ಲಿ ಭೂಕುಸಿತವಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಸತತ ಕಾರ್ಯಾಚರಣೆಯಿಂದಾಗಿ ಮಣ್ಣನ್ನು ತೆರವುಗೊಳಿಸಲಾಗಿತ್ತು. ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸೂಪರಿಟೆಂಡೆಂಟ್ ಇಂಜಿನಿಯರ್ ರಾಘವನ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸೋಮವಾರ ಸಂಜೆ ಭೂಕುಸಿತದ ಮಣ್ಣು ಹಾಗೂ ಬಿದ್ದ ಮರಗಳನ್ನು ತೆರವು ಮಾಡಲಾಗುತ್ತದೆ. ಚಾರ್ವಡಿ ಘಾಟ್​ಬಂದ್ ಆದ ನಂತರವೂ 4 ಕಡೆ ಭೂಕುಸಿತ ಉಂಟಾಗಿದೆ . ಸತತ ಮಳೆಯಂದ ತೆರವು ಕಾರ್ಯಚರಣೆಗೆ ಅಡ್ಡಿಯಾಗುತ್ತಿದೆ. ಮಳೆ ನಿಂತರೆ ಎರಡು ದಿನದಲ್ಲಿ ಸಂಚಾರಕ್ಕೆ ರಸ್ತೆ ಮುಕ್ತ ಗೊಳಿಸಬಹುದು ಎಂದು ತಿಳಿಸಿದರು.

ಶಿರಾಡಿ ಘಾಟ್ ಕಾಮಗಾರಿ ಜುಲೈ 15 ರೊಳಗೆ ಮುಗಿದರೆ ಅಲ್ಲಿಯ ರಸ್ತೆ ಸಂಚಾರಕ್ಕೆ ಮುಕ್ತ ಗೊಳಿಸಿ ಚಾರ್ವಡಿ ಘಾಟ್ ರಸ್ತೆಯನ್ನು ಸಂಪೂರ್ಣ ಕಾಂಕ್ರೀಟಿಕರಣಗೊಳಿಸಲಾಗುವುದು. ಈ ಯೋಜನೆಗೆ ಮಾರ್ಚ್​ನಲ್ಲೇ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಈ ವರ್ಷ ಚಾರ್ವಡಿ ಘಾಟ್​ನಲ್ಲಿ ರಸ್ತೆಯನ್ನು ಕೆಲವು ಕಡೆ ಅಗಲ ಮಾಡಲಾಗುವುದು ಎಂದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಸನ್ನ ಮಾತನಾಡಿ, ಒಟ್ಟು 6 ಜೆಸಿಬಿಗಳು ಮೂರು ಟಿಪ್ಪರ್ ಲಾರಿಗಳಲ್ಲಿ ಮಣ್ಣು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ವಿಭಾಗದ ಅರಣ್ಯ ಸಿಬ್ಬಂದಿ ಸ್ಥಳದಲ್ಲಿದ್ದು ತೆರವು ಕಾರ್ಯಚರಣೆಗೆ ಕೈಜೋಡಿಸಿದ್ದಾರೆ ಎಂದರು. ಹೆದ್ದಾರಿ ಪ್ರಾಧಿಕಾರದ ವಿಭಾಗೀಯ ಅಧಿಕಾರಿ ರಮೇಶ್​ಬಾಬು, ಕಾರ್ಯಪಾಲಕ ಅಭಿಯಂತರ ಸುಬ್ಬರಾಮ ಹೊಳ್ಳ ಇದ್ದರು.

Leave a Reply

Your email address will not be published. Required fields are marked *