More

  ಪಂಜಾಬ್​ನಲ್ಲಿ ಚತುಷ್ಕೋಣ ರಾಜಕೀಯ ಸೆಣಸಾಟ

  | ರಾಘವ ಶರ್ಮ ನಿಡ್ಲೆ, ನವದೆಹಲಿ

  ಪಂಚನದಿಗಳ ನಾಡು, ಇಂಡೋ-ಪಾಕ್ ಗಡಿಭಾಗದ ರಾಜ್ಯ ಪಂಜಾಬ್, ಲೋಕಸಭೆ ಚುನಾವಣೆಗೆ ಚತುಷ್ಕೋಣ ಚುನಾವಣಾ ಸಂಘರ್ಷಕ್ಕೆ ಸಾಕ್ಷಿಯಾಗುತ್ತಿದೆ. 13 ಲೋಕಸಭೆ ಕ್ಷೇತ್ರಗಳುಳ್ಳ ರಾಜ್ಯದಲ್ಲಿ ಮುಖ್ಯಮಂತ್ರಿ ಭಗವಂತ ಸಿಂಗ್ ಮಾನ್ ನೇತೃತ್ವದ ಆಮ್ ಆದ್ಮಿ ಪಾರ್ಟಿ (ಆಪ್) ಸರ್ಕಾರವಿದೆ. ದೆಹಲಿ ಮತ್ತು ಹರ್ಯಾಣದಲ್ಲಿ ಆಮ್ ಆದ್ಮಿ ಪಾರ್ಟಿ-ಕಾಂಗ್ರೆಸ್ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿದ್ದರೂ, ಪಂಜಾಬ್​ನಲ್ಲಿ ಆಪ್, ಕಾಂಗ್ರೆಸ್ ಪ್ರತ್ಯೇಕ ಸ್ಪರ್ಧೆಗಿಳಿದಿವೆ. ಹೀಗಾಗಿ, ಇತಿಹಾಸದಲ್ಲೇ ಮೊದಲ ಬಾರಿಗೆ ನಾಲ್ಕು ಪ್ರಬಲ ಪಕ್ಷಗಳು ಕದನಕಣದಲ್ಲಿವೆ.

  2022ರ ವಿಧಾನಸಭೆ ಚುನಾ ವಣೆಯಲ್ಲಿ ಅಭೂತಪೂರ್ವ ದಿಗ್ವಿಜಯ ಸಾಧಿಸಿದ್ದ ಆಪ್, 117 ಸೀಟುಗಳಲ್ಲಿ 92 ಸೀಟುಗಳನ್ನು ಗೆದ್ದು ದಾಖಲೆ ಬರೆದಿತ್ತು. ಕಳೆದ 7 ದಶಕಗಳಿಂದ ರಾಜಕೀಯ ಪ್ರಾಬಲ್ಯ ಸಾಧಿಸಿದ್ದ ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿದಳ ಪಕ್ಷಗಳನ್ನು ತಿರಸ್ಕರಿಸಿದ ಮತದಾರ, ಮೊದಲ ಬಾರಿಗೆ ಆಪ್​ಗೆ ಅವಕಾಶ ನೀಡಿದ. ಈ ಚುನಾವಣೆಯಲ್ಲಿ ಕಾಂಗ್ರೆಸ್ 18, ಅಕಾಲಿದಳ 3 ಮತ್ತು ಬಿಜೆಪಿ ಕೇವಲ 2 ಶಾಸಕ ಸ್ಥಾನಗಳನ್ನಷ್ಟೇ ಗೆದ್ದುಕೊಂಡಿತ್ತು. ಪಂಜಾಬ್​ನಲ್ಲಿ ಬಿಜೆಪಿ-ಶಿರೋಮಣಿ ಅಕಾಲಿದಳ ಮೈತ್ರಿಕೂಟ ಕಳೆದ ಹಲವು ಚುನಾವಣೆಗಳನ್ನು ಒಟ್ಟಾಗಿ ಎದುರಿಸಿವೆ. ಆದರೆ, ಕೇಂದ್ರ ಕೃಷಿ ಕಾಯ್ದೆಗೆ ಸಂಬಂಧಿಸಿ ಎನ್​ಡಿಎ ಮೈತ್ರಿಕೂಟದೊಂದಿಗಿನ ಸಂಬಂಧ ಕಡಿದುಕೊಂಡ ಅಕಾಲಿದಳ, ಕಳೆದ ವಿಧಾನಸಭೆ ಚುನಾವಣೆಯಲ್ಲೂ ಏಕಾಂಗಿಯಾಗಿ ಸ್ಪರ್ಧಿಸಿತು. ಲೋಕಸಭೆ ಚುನಾವಣೆಗೆ ಬಿಜೆಪಿ-ಅಕಾಲಿದಳ ಮೈತ್ರಿ ಬಗ್ಗೆ ಪ್ರಾಥಮಿಕ ಚರ್ಚೆಗಳು ನಡೆದರೂ, ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಲು ತೀರ್ವನಿಸಿವೆ.

  1996ರ ಲೋಕಸಭೆ ಚುನಾವಣೆ ಹೊರತುಪಡಿಸಿದರೆ, ನಂತರದ ಎಲ್ಲ ಚುನಾವಣೆಗಳಲ್ಲಿ ಅಕಾಲಿದಳ-ಬಿಜೆಪಿ ಮೈತ್ರಿಕೂಟ ಕಾಂಗ್ರೆಸ್​ನ್ನು ಎದುರಿಸಿತ್ತು. 1996ರ ನಂತರ ಅಕಾಲಿದಳ-ಬಿಜೆಪಿ 6 ಲೋಕಸಭೆ ಮತ್ತು 5 ವಿಧಾನಸಭೆ ಚುನಾವಣೆಗಳಲ್ಲಿ ಒಗ್ಗಟ್ಟಿನಿಂದ ಸ್ಪರ್ಧಿಸಿದ್ದವು. 2014 ಮತ್ತು 2019ರಲ್ಲಿ ಬಿಜೆಪಿ 3 ಸೀಟುಗಳಲ್ಲಿ ಸ್ಪರ್ಧಿಸಿ, ಗುರುದಾಸಪುರ ಮತ್ತು ಹೋಶಿಯಾರ್​ಪುರ ಕ್ಷೇತ್ರಗಳಲ್ಲಿ ವಿಜಯ ಸಾಧಿಸಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ಅಕಾಲಿದಳ, ಬಠಿಂಡಾ ಮತ್ತು ಫಿರೋಜ್​ಪುರ ಕ್ಷೇತ್ರಗಳನ್ನಷ್ಟೇ ಗೆದ್ದುಕೊಂಡಿತ್ತು. ಕಾಂಗ್ರೆಸ್ 8 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದ್ದರೆ, ಆಮ್ ಆದ್ಮಿ ಪಕ್ಷ ಸಂಗ್ರೂರ್ ಲೋಕಸಭೆ (ಭಗವಂತ್ ಸಿಂಗ್ ಮಾನ್ ಅಭ್ಯರ್ಥಿಯಾಗಿದ್ದರು) ಗೆದ್ದಿತ್ತು.

  2019ರಲ್ಲಿ ಕಾಂಗ್ರೆಸ್​ಗೆ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ನಾಯಕತ್ವ ಮತ್ತು ಜನಪ್ರಿಯತೆಯ ಲಾಭವಿತ್ತು. ಆದರೆ, ಈಗ ಕ್ಯಾಪ್ಟನ್ ಸಿಂಗ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್​ನಿಂದ ಹೊರಬಂದಿರುವ ಹಿರಿಯ ನಾಯಕ ಸುನೀಲ್ ಜಾಖರ್, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿದ್ದಾರೆ.

  ಯಾರಿದು ಬಂಡಿ ಸಿಂಗ್​ಗಳು?: ಕಳೆದ 30ಕ್ಕೂ ಹೆಚ್ಚು ವರ್ಷಗಳಿಂದ ದೇಶದ ವಿವಿಧ ಜೈಲುಗಳಲ್ಲಿ ಬಂಡಿ ಸಿಂಗ್​ಗಳು ಬಂಧಿಯಾಗಿದ್ದಾರೆ. ಅವರ ಬಿಡುಗಡೆಗಾಗಿ ಪಂಜಾಬ್​ನಲ್ಲಿ ಹಲವು ವರ್ಷಗಳಿಂದ ಆಂದೋಲನ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಇದು ವ್ಯಾಪಕ ಚರ್ಚೆಗೂ ಗ್ರಾಸವಾಗಿದೆ. ಪಂಜಾಬ್​ನಲ್ಲಿ ಬಂಡುಕೋರ ಚಟುವಟಿಕೆಗಳನ್ನು ನಡೆಸಿದ್ದ, ಉಗ್ರಗಾಮಿಗಳು ಎಂದೇ ಪರಿಗಣಿಸಿದ್ದ ಸಿಖ್ಖರನ್ನು ಬಂಡಿ ಸಿಂಗ್​ಗಳು ಎಂದು ಕರೆಯಲಾಗುತ್ತದೆ. ಆದರೆ, ಪಂಜಾಬ್​ನಲ್ಲಿ ಬಂಡುಕೋರ ಚಟುವಟಿಕೆ 90ರ ದಶಕದಲ್ಲೇ ಅಂತ್ಯಗೊಂಡು, ಇದೀಗ 30 ವರ್ಷಗಳೇ ಸಂದಿವೆ. ಜೈಲಿನಲ್ಲಿರುವ ಅನೇಕರು ವಿವಿಧ ಮಾನಸಿಕ, ದೈಹಿಕ ಸಮಸ್ಯೆಗಳನ್ನು ಎದುರಿ ಸುತ್ತಿದ್ದು, ಕುಟುಂಬಗಳು ರೋದಿಸುತ್ತಿವೆ. ಹೀಗಾಗಿ, ಈ ಸಿಖ್ಖರನ್ನು ಬಿಡುಗಡೆ ಮಾಡಬೇಕು ಎಂಬ ಕೂಗೆದ್ದಿದೆ.

  pun

  2019ರಲ್ಲೂ ಆಗಿರಲಿಲ್ಲ ಮೈತ್ರಿ: 2019ರ ಲೋಕಸಭೆ ಚುನಾವಣೆ ವೇಳೆ, ದೆಹಲಿ ಮತ್ತು ಪಂಜಾಬ್​ನಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳಬೇಕೆಂದು ಎಎಪಿ ಬಯಸಿತ್ತು. ‘ದೆಹಲಿಯಲ್ಲಿ 6 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಉಳಿದ ಒಂದನ್ನು ನಿಮಗೆ ನೀಡುತ್ತೇವೆ. ಪಂಜಾಬ್​ನ ಹೆಚ್ಚಿನ ಸೀಟುಗಳಲ್ಲಿ ನೀವು ಸ್ಪರ್ಧಿಸಬಹುದು’ ಎಂಬ ಕೊಡು-ಕೊಳ್ಳುವಿಕೆಯ ತಂತ್ರವನ್ನು ಎಎಪಿ ಮುಖಂಡ ಅರವಿಂದ ಕೇಜ್ರಿವಾಲ್ ಕಾಂಗ್ರೆಸ್ ನಾಯಕರ ಮುಂದಿಟ್ಟಿದ್ದರು. ಆದರೆ ದೆಹಲಿ ಕಾಂಗ್ರೆಸ್ ಅಧ್ಯಕ್ಷೆ ಶೀಲಾ ದೀಕ್ಷಿತ್ ಮತ್ತು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಅಸಮ್ಮತಿಯಿಂದಾಗಿ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಏಕಾಂಗಿ ಸ್ಪರ್ಧೆಗೆ ಮುಂದಾಗಿತ್ತು.

  ಪಂಜಾಬ್​ನಿಂದ ಗೆದ್ದಿದ್ದ ಕಾನ್ಶಿರಾಮ್ : ಬಹುಜನ ಸಮಾಜ ಪಕ್ಷದ ಸಂಸ್ಥಾಪಕ ಕಾನ್ಶಿರಾಮ್ ಪಂಜಾಬ್​ನ ರೋಪರ್ ಜಿಲ್ಲೆಯವರು. 1996ರಲ್ಲಿ ರಾಜ್ಯದ ಹೋಶಿಯಾರ್​ಪುರ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಮೊದಲ ಬಾರಿಗೆ ಅವರು ಲೋಕಸಭೆ ಪ್ರವೇಶಿಸಿದ್ದರು. ಆ ಚುನಾವಣೆಗೆ ಶಿರೋಮಣಿ ಅಕಾಲಿದಳ-ಬಿಎಸ್​ಪಿ ಮೈತ್ರಿ ಮಾಡಿಕೊಂಡಿದ್ದವು. ಆದರೆ, ಅದೇ ವರ್ಷ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್-ಬಿಎಸ್​ಪಿ ಮೈತ್ರಿ ಘೊಷಣೆಯಾಗುತ್ತಲೇ ಎಸ್​ಎಡಿ ಪಕ್ಷ ಕಾಂಶಿರಾಮ್ ಜತೆಗಿನ ಸಂಬಂಧಗಳನ್ನು ಕಡಿದುಕೊಂಡಿತು. ‘ಸಿಖ್ಖ ವಿರೋಧಿ’ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಪಕ್ಷದೊಂದಿಗೆ ನಮಗೆ ಸಖ್ಯ ಬೇಡ ಎಂದು ಎಸ್​ಎಡಿ ಈ ನಿರ್ಧಾರಕ್ಕೆ ಬಂದಿತ್ತು. 2014ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ವಿಜಯ್ ಸಂಪ್ಲ ಹೋಶಿಯಾರ್​ಪುರದಿಂದ ಗೆದ್ದಿದ್ದರು. 2019ರಲ್ಲಿ ಕೇಸರಿಪಕ್ಷದ ಸೋಮ್ ಪ್ರಕಾಶ್ ಸಂಸದರಾಗಿ ಆಯ್ಕೆಯಾಗಿದ್ದರು.

  ಸನ್ನಿ ಡಿಯೋಲ್​ಗಿಲ್ಲ ಅವಕಾಶ: ರಾಜ್ಯದ ಹೈಪ್ರೊಫೈಲ್ ಕ್ಷೇತ್ರ ಗುರುದಾಸಪುರ ಕ್ಷೇತ್ರದ ಸಂಸದ, ಬಾಲಿವುಡ್ ನಟ ಸನ್ನಿ ಡಿಯೋಲ್​ಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡಿಲ್ಲ. ಬದಲಿಗೆ, ಪಕ್ಷದಿಂದ 3 ಬಾರಿ ಶಾಸಕ ರಾಗಿದ್ದ ದಿನೇಶ್ ಬಬ್ಬುರನ್ನು ಕಣಕ್ಕಿಳಿಸಲಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ದಿನೇಶ್ ಪಠಾಣ್​ಕೋಟ್ ಜಿಲ್ಲೆ ವ್ಯಾಪ್ತಿಯ ಸುಜಾನ್​ಪುರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ, 4636 ಮತಗಳಿಂದ ಸೋತಿದ್ದರು. ಗುರುದಾಸಪುರವನ್ನು ಈ ಹಿಂದೆ ಬಾಲಿವುಟ್ ನಟ, ದಿವಂಗತ ವಿನೋದ್ ಖನ್ನಾ ಅವರು 4 ಬಾರಿ ಪ್ರತಿನಿಧಿಸಿ ದ್ದರು. ಕ್ಯಾನ್ಸರ್​ನಿಂದಾಗಿ ಅವರು 2017ರಲ್ಲಿ ಮೃತಪಟ್ಟರು.

  ಬದಲಾದ ರಾಜಕೀಯ ಸಮೀಕರಣ: ಪಂಜಾಬ್ ಕೃಷಿಕರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಮುನಿಸಿಕೊಂಡಿದ್ದಾರೆ ಎಂಬುದರ ಜತೆಗೆ ‘ಬಂಡಿ ಸಿಂಗ್’ಗಳ ಬಿಡುಗಡೆಗೆ (ಜೈಲಿನಲ್ಲಿರುವ ಸಿಖ್ಖರು) ಸಂಬಂಧಿಸಿ ಅಕಾಲಿದಳದ ಬೇಡಿಕೆಗಳಿಗೆ ಬಿಜೆಪಿ ಒಪ್ಪಿಲ್ಲ. ಏತನ್ಮಧ್ಯೆ, ಕೆಲ ದಿನಗಳ ಹಿಂದೆ ಪಂಜಾಬ್ ರೈತರು ಕನಿಷ್ಠ ಬೆಂಬಲ ಬೆಲೆಯ ಖಾತರಿಗೆ ಸಂಬಂಧಿಸಿ ಹರ್ಯಾಣ ಗಡಿಯಲ್ಲಿ ಪ್ರತಿಭಟನೆ ನಡೆಸಲು ಮುಂದಾದಾಗ, ಕೇಂದ್ರ ಸರ್ಕಾರ ಅದಕ್ಕೆ ಅನುಮತಿ ನೀಡಿರಲಿಲ್ಲ. ಇದು ರಾಜ್ಯದಲ್ಲಿ ಚುನಾವಣೆ ವಿಷಯವಾಗಿರುವ ಹಿನ್ನೆಲೆಯಲ್ಲಿ ಅಕಾಲಿದಳ ಎನ್​ಡಿಎ ಮೈತ್ರಿಕೂಟ ಮರುಸೇರ್ಪಡೆ ಬಗ್ಗೆ ಹೆಚ್ಚು ಆಸಕ್ತಿ ತೋರಲಿಲ್ಲ ಎನ್ನಲಾಗಿದೆ. ಬಿಜೆಪಿ ಕೂಡ, ಇದು ತನ್ನ ಸಂಘಟನಾ ವಿಸ್ತರಣೆಗೆ ಸಿಕ್ಕ ಅವಕಾಶ ಎಂದು ಹೆಚ್ಚು ತಲೆಕೆಡಿಸಿಕೊಳ್ಳಲೂ ಹೋಗಿಲ್ಲ. ಪಂಜಾಬ್​ನಲ್ಲಿ ಶೇಕಡ 38ರಷ್ಟು ಹಿಂದೂ ಜನಸಂಖ್ಯೆಯಿದ್ದು, ಈ ಗುಂಪನ್ನು ಗುರಿಯಾಗಿಸಿ ಮತ ಯಾಚಿಸುವ ಲೆಕ್ಕಾಚಾರದಲ್ಲಿ ಬಿಜೆಪಿಯಿದೆ. ಅಯೋಧ್ಯೆ ರಾಮಮಂದಿರ ನಿರ್ವಣ, ಕರ್ತಾರ್​ಪುರ್ ಕಾರಿಡಾರ್ ನಿರ್ವಣ, ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ, ರಾಜ್ಯದ ಸಿಖ್ಖರ ಕಲ್ಯಾಣಕ್ಕಾಗಿ ಕೈಗೊಂಡ ಕಾರ್ಯಕ್ರಮಗಳನ್ನು ಬಿಜೆಪಿ ಜನರ ಮುಂದಿಡುತ್ತಿದೆ. ಈ ನಡುವೆ, ಕಾಂಗ್ರೆಸ್​ನ ಪಟಿಯಾಲ ಕ್ಷೇತ್ರದ ಸಂಸದೆ ಪ್ರಣೀತ್ ಕೌರ್, ಲೂಧಿಯಾನ ಸಂಸದ ರವನೀತ್ ಸಿಂಗ್ ಭಿಟ್ಟು, ಆಮ್ ಆದ್ಮಿ ಪಕ್ಷದ ಏಕೈಕ ಸಂಸದ ಸುಶೀಲ್ ಕುಮಾರ್ ರಿಂಕು ಕೂಡ ಬಿಜೆಪಿ ಸೇರ್ಪಡೆಯಾಗಿದ್ದಾರೆ.

  a

  2014ರಲ್ಲಿ ಜೇಟ್ಲಿ ಕ್ಯಾಪ್ಟನ್: 2014ರಲ್ಲಿ ಅಮೃತಸರ ದೇಶಾದ್ಯಂತ ಚರ್ಚೆಯಾಗಿದ್ದ ಕ್ಷೇತ್ರ. ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಕಾಂಗ್ರೆಸ್ ಅಭ್ಯರ್ಥಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ವಿರುದ್ಧ ಸ್ಪರ್ಧೆಗಿಳಿದಿದ್ದರು. ಜೇಟ್ಲಿ ಬರುವ ಮುನ್ನ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಇಲ್ಲಿ ಬಿಜೆಪಿ ಸಂಸದ ರಾಗಿದ್ದರು. ಆದರೆ, ಅಕಾಲಿದಳ ನಾಯಕ ಸುಖ್​ಬೀರ್ ಸಿಂಗ್ ಬಾದಲ್ ಒತ್ತಡಕ್ಕೆ ಮಣಿದಿದ್ದ ಬಿಜೆಪಿ, ಸಿಧು ಬದಲು ಜೇಟ್ಲಿಯವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿತ್ತು. ‘ಅಮೃತಸರದ ಬಿಜೆಪಿ ಅಭ್ಯರ್ಥಿ ನಮ್ಮ ಸರ್ಕಾರದಲ್ಲಿ ಹಣಕಾಸು ಸಚಿವರಾಗಲಿದ್ದಾರೆ’ ಎಂದೂ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಮಾಡಿದ್ದರು. ಆದರೆ, ಅಂತಿಮವಾಗಿ ಕ್ಯಾಪ್ಟನ್ ಸಿಂಗ್ ಅಮೃತಸರ ಗೆದ್ದರು. ಈ ಬಾರಿ ಬಿಜೆಪಿ ಹೊಸ ಪ್ರಯೋಗ ಮಾಡಿದ್ದು, ನಿವೃತ್ತ ರಾಜತಂತ್ರಜ್ಞ ತರನ್​ಜಿತ್ ಸಿಂಗ್ ಸಂಧುಗೆ ಟಿಕೆಟ್ ನೀಡಿದೆ. ಸಂಧು ಅವರು ಅಮೆರಿಕದ ಭಾರತೀಯ ರಾಯಭಾರಿಯಾಗಿ ಮತ್ತು ಶ್ರೀಲಂಕಾದಲ್ಲಿ ಭಾರತೀಯ ಹೈಕಮಿಷನರ್ ಆಗಿ ಸೇವೆ ಸಲ್ಲಿಸಿದ್ದಾರೆ.

  ಡಿಕೆ ಬ್ರದರ್ಸ್​ ಕೋಟೆಯಲ್ಲಿ ಅಮಿತ್ ಶಾ ಬೃಹತ್ ರೋಡ್​ ಶೋ..!ಫೋಟೋಗಳು ಇಲ್ಲಿವೆ…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts