ಸಂಭ್ರಮದ ಚಾತುರ್ವಸ್ಯ ಸಂಪನ್ನ

ಬಾಗಲಕೋಟೆ: ತುಲಾಭಾರದ ಭಕ್ತಿ ಸೇವೆಗೆ ಭಾಗವತದ ತೂಕ ನೀಡಿದ ಶ್ರೀಪಾದಂಗಳವರು, ಕಿಕ್ಕಿರಿದು ಸೇರಿದ್ದ ಜನಸ್ತೋಮದ ಮಧ್ಯೆ ಭಿನ್ನವತ್ತಳೆ ಅರ್ಪಣೆ, ಹಮ್ಮಿಣಿ ಅರ್ಪಣೆಯೊಂದಿಗೆ ನಗರದಲ್ಲಿ 52 ದಿನಗಳವರೆಗೆ ನಡೆದ ಭಂಡಾರಕೇರಿ ಮಠದ ವಿದ್ಯೇಶತೀರ್ಥ ಶ್ರೀಪಾದಂಗಳವರ ಚಾತುರ್ವಸ್ಯ ಸಂಕಲ್ಪ ಮಂಗಳವಾರ ಸಂಪನ್ನಗೊಂಡಿತು.

ವಿದ್ಯಾಗಿರಿಯ ವಿಪ್ರ ಅಭಿವೃದ್ಧಿ ಮಂಡಳಿಯ ರಾಘವೇಂದ್ರ ಸ್ವಾಮಿಗಳ ಮಠದ ಆವರಣದಲ್ಲಿ ಅಭಿನಂದನಾ ಸಮಾರಂಭದ ನಂತರ ನಡೆದ ತುಲಾಭಾರದಲ್ಲಿ ಭಾಗವತ ಹಿಡಿದು ವಿರಾಜಮಾನರಾಗಿದ್ದ ಶ್ರೀಪಾದಂಗ ಳವರನ್ನು ನಾಣ್ಯ, ಧಾನ್ಯದೊಂದಿಗೆ ತೂಗಲಾಯಿತು. ತೂಕ ಅವರೆತ್ತರಕ್ಕೆ ಏರಿದಾಗ ಭಕ್ತ ಸಮೂಹ ಸಂತಸಪಟ್ಟಿತು.

ಶ್ರೀ ಕೋದಂಡ ರಾಮ ದೇವರನ್ನು ನಗರಕ್ಕೆ ಕರೆತಂದು ನಿತ್ಯ ಪೂಜೆಯ ಅವಕಾಶ ಕಲ್ಪಿಸಿದ ಶ್ರೀಪಾದಂಗಳವರು ನಗರವನ್ನು ಪರಮ ಪಾವನಗೊಳಿಸಿದ್ದಾರೆ ಎಂದು ಈ ಸಂದರ್ಭ ಅಭಿನಂದಿಸಲಾಯಿತು. ಅವರ ಧಾರ್ವಿುಕ ಶ್ರದ್ಧೆ, ತಪಸ್ಸು, ಸಾಹಿತ್ಯ ರಚನೆಯನ್ನು ಕೊಂಡಾಡಿ ಭಿನ್ನವತ್ತಳೆ ಅರ್ಪಿಸಲಾಯಿತು. ಪಂ. ಭೀಮಸೇನಾಚಾರ್ಯ ಪಾಂಡುರಂಗಿ ಅವರು ಸನ್ಮಾನ ಪತ್ರ ಓದಿ ನಗರದ ಜನತೆಗೆ ಚಾತುರ್ವಸ್ಯ ಸಂಭ್ರಮ ತಂದಿದೆ ಎಂದು ತಿಳಿಸಿದರು.

ಚಾತುರ್ವಸ್ಯ ಸೇವಾ ಸಮಿತಿಯಿಂದ 5 ಲಕ್ಷ ರೂ.ಗಳ ಹಮ್ಮಿಣಿ ಅರ್ಪಿಸುವ ವಾಗ್ದಾನ ಮಾಡಿ 4.6 ಲಕ್ಷ ರೂ.ಗಳನ್ನು ನೀಡಿ ಗೌರವ ಸಲ್ಲಿಸಿತು. ಸಮಿತಿ ಅಧ್ಯಕ್ಷ ಕೆ.ಎಸ್. ದೇಶಪಾಂಡೆ ಅವರ ಮಾರ್ಗದರ್ಶನದಲ್ಲಿ ನಡೆದ ಸೇವಾ ಚಟುವಟಿಕೆಯನ್ನು ವಿವರಿಸಿದ ನಂತರ ಗೌರವ ಕಾರ್ಯದರ್ಶಿ ಡಾ. ಗಿರೀಶ ಮಾಸೂರಕರ, ಕಾರ್ಯದರ್ಶಿಗಳಾದ ರಾಮ ಮನಗೂಳಿ, ಹರಿ ಪಾಟೀಲ, ಜಾಲಿಹಾಳ, ನರಸಿಂಹ ಆಲೂರ ಅವರುಗಳು ಸಲ್ಲಿಸಿದರು. ಸಮಾರಂಭದಲ್ಲಿ ಅನುಗ್ರಹ ಸಂದೇಶ ನೀಡಿದ ಶ್ರೀಪಾದಂಗಳವರು ಮಹಾಭಾರತಕ್ಕೆ ತುಲಾಭಾರ ನಡೆದಿತ್ತು. ಈಗ ಭಾಗವತಕ್ಕೆ ತುಲಾಭಾರ ನಡೆದಿದೆ. ಇದನ್ನು ತೂಕದಿಂದ ಅಳೆಯಲು ಸಾಧ್ಯವಿಲ್ಲ. ಆದರೆ, ಭಕ್ತಿಯ ತೂಕದ ಮುಂದೆ ಇದು ಅಸಾಧ್ಯವಲ್ಲ. ಬಾಗಲಕೋಟೆಯ ಜನ ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾರೆ, ಇದು ರಾಮ ದೇವರಿಗೆ ಸಲ್ಲುವ ಭಕ್ತಿ ಎಂದರು.

ಶ್ರೀಕೃಷ್ಣ ಪರಮಾತ್ಮ ಅನನ್ಯವಾದ ಸಂದೇಶ ನೀಡಿದ್ದಾನೆ, ಆತ ಬೆಣ್ಣೆ ಕದ್ದ, ಮಣ್ಣನ್ನು ತಿಂದ, ಎಲ್ಲವನ್ನೂ ಸಹಿಸಿಕೊಂಡ ದಿವ್ಯ ಚೇತನ. ಅದು ನಮ್ಮ ಪಾಲಿನ ಚೈತನ್ಯ ಎಂದು ಬಣ್ಣಿಸಿದರು. ನರಸಿಂಹ ಆಲೂರ, ಅಶೋಕ ಹಳ್ಯಾಳ ಅವರುಗಳು ತುಲಾಭಾರದ ಸೇವೆ ನೀಡಿದರು. ಸಮಾರಂಭದಲ್ಲಿ ಆರ್.ಎಸ್. ಕುಲಕರ್ಣಿ, ರಾಮ ಮನಗೂಳಿ ಅವರು ಚಾತುರ್ವಸದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಸೇವಾಕರ್ತೃಗಳಿಗೆ ಫಲ ಮಂತ್ರಾಕ್ಷತೆ ನೀಡಲಾಯಿತು.

ದೆಹಲಿಯ ಸಂಸ್ಕೃತಿ ಸಂಸ್ಥೆಯಿಂದ ಪಿಎಚ್​ಡಿ ಪದವಿ ಪಡೆದ ಪಂ. ರಘೊತ್ತಮಾಚಾರ್ಯ ನಾಗಸಂಪಗಿ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಮಾತನಾಡಿದ ರಘೊತ್ತಮಾಚಾರ್ಯರು ಜನರು ತೋರಿದ ಅಭಿಮಾನ ದೊಡ್ಡದು ಎಂದರು. ಪಂ. ಬಿಂದಾಚಾರ್ಯ ನಾಗಸಂಪಗಿ ಮಾತನಾಡಿದರು. ಮಂಗಳವಾರ ಶ್ರೀ ಕೃಷ್ಣ ಮಠದಲ್ಲಿ ಸಂಸ್ಥಾನ ಪೂಜೆ, ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಶ್ರೀಗಳು ಗಲಗಲಿಗೆ ತೆರಳುವ ಮೂಲಕ ಸೀಮೋಲ್ಲಂಘನ ಮಾಡಿದರು.