Friday, 16th November 2018  

Vijayavani

Breaking News

ಚಾರ್ಮಾಡಿ ಘಾಟಿ ರಸ್ತೆ ಸಂಚಾರ ಅಸ್ತವ್ಯಸ್ತ

Sunday, 10.06.2018, 10:17 PM       No Comments

ಬೆಳ್ತಂಗಡಿ: ಕಳೆದೊಂದು ವಾರದಿಂದ ಚಾರ್ಮಾಡಿ ಭಾಗದಲ್ಲಿ ಅಧಿಕ ಮಳೆಯಾಗುತ್ತಿದ್ದು, ಘಾಟಿ ಪ್ರದೇಶದಲ್ಲಿ ಬೃಹತ್ ಮರಗಳು ಧರೆಗುರುಳಿ ಕೆಲದಿನಗಳಿಂದ ತಾಸುಗಟ್ಟಲೆ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಇಲಾಖಾ ನಿರ್ಲಕ್ಷ್ಯದಿಂದ ವಾರ ಕಳೆದರೂ ಮರಗಳ ತೆರವು ಮಾಡದೆ ಭಾನುವಾರ ಮತ್ತೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.

ಶಿರಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರಂಭವಾದ ಬಳಿಕ ಕರಾವಳಿ ಜಿಲ್ಲೆಗಳ ಪ್ರಮುಖ ಧಾರ್ಮಿಕ ಕ್ಷೇತ್ರ ಮತ್ತು ವಾಣಿಜ್ಯ ಕ್ಷೇತ್ರಗಳನ್ನು ಸಂಪರ್ಕಿಸಲು ಚಾರ್ಮಾಡಿ ಘಾಟಿ ರಸ್ತೆಯೇ ಪ್ರಮುಖ ರಸ್ತೆಯಾಗಿದೆ. ಇದೀಗ ಈ ರಸ್ತೆಯ ಅವ್ಯವಸ್ಥೆಯಿಂದ ಪ್ರಯಾಣಿಕರು, ವಾಹನ ಚಾಲಕರು ಪರದಾಡುವಂತಾಗಿದೆ.

ಸೂಕ್ತ ಚರಂಡಿ ವ್ಯವಸ್ಥೆ ಮಾಡದ ಕಾರಣ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ಕೆರೆಯಂತೆ ರಸ್ತೆಗಳು ಗುಂಡಿಯಲ್ಲಿ ಮುಳುಗಿವೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಒಂದು ಹೊಂಡವನ್ನು ತಪ್ಪಿಸಲು ತಾಸುಗಟ್ಟಲೆ ಸರತಿಯಲ್ಲಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ದ್ವಿಚಕ್ರ ವಾಹನ ಸವಾರರು ಹಾಗೂ ಲಘುವಾಹನ ಚಕ್ರಗಳು ಗುಂಡಿಯಲ್ಲಿ ಮುಳುಗುತ್ತಿದ್ದು, ಚಾಲಕರು ಈ ರಸ್ತೆಯಲ್ಲಿ ವಾಹನ ಚಲಾಯಿಸಲು ಹಿಂಜರಿಯುತ್ತಿದ್ದಾರೆ. ನಿಧಾನ ಗತಿ ಚಾಲನೆ ಅನಿವಾರ್ಯವಾಗಿರುವುದರಿಂದ ವಾಹನಗಳು ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ.

ರಸ್ತೆ ತಡೆ ಎಚ್ಚರಿಕೆ: ಶಿರಾಡಿ ಘಾಟಿ ಕಾಮಗಾರಿ ಪ್ರಾರಂಭವಾಗುವ ಮುಂಚೆಯೇ ಸ್ಥಳೀಯರು ಹಾಗೂ ಸಾಮಾಜಿಕ ಕಾರ್ಯಕರ್ತರು ಮಾಧ್ಯಮದ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಎಚ್ಚರಿಸಿದ್ದರು. ಆದರೆ, ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ವ್ಯಾಪಾರಿಗಳು, ಧಾರ್ಮಿಕ ಕ್ಷೇತ್ರ ಸಂದರ್ಶಿಸುವ ಭಕ್ತರು ಇದೀಗ ತೊಂದರೆ ಅನುಭವಿಸುತ್ತಿದ್ದು, ಮುಂದಿನ ದಿನಗಳಲ್ಲಿ ಶೀಘ್ರ ಪರಿಹಾರ ಸೂಚಿಸದಿದ್ದಲ್ಲಿ ರಸ್ತೆ ತಡೆ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಗುರುವಾಯನಕೆರೆ, ಶ್ರೀಕಾಂತ್ ಬೆಳ್ತಂಗಡಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back To Top