ಚಾರ್ಮಾಡಿಯಲ್ಲಿ ದುರಸ್ತಿ ಚುರುಕು

ಬೆಳ್ತಂಗಡಿ: ಭಾರಿ ಮಳೆ ಪರಿಣಾಮ ಭೂಕುಸಿತದಿಂದ ತತ್ತರಿಸಿ ಹೋಗಿರುವ ಚಾರ್ಮಾಡಿ ಘಾಟ್‌ನಲ್ಲಿ ಸಮರೋಪಾದಿಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದೆ.

ಪ್ರಾರಂಭಿಕ ಹಂತದಲ್ಲಿ ರಸ್ತೆಯ ಮೇಲ್ಭಾಗ (ಗುಡ್ಡದ ಬದಿ) ಕುಸಿತ ಆಗಿರುವಲ್ಲಿ ಮಣ್ಣು ತೆರವು ನಡೆಸಲಾಗುತ್ತಿದ್ದು, ಸಣ್ಣ ವಾಹನಗಳು ಚಲಿಸುವಂತೆ ಮಾಡಲು ಆದ್ಯತೆ ನೀಡಲಾಗಿದೆ. ಇದರ ಬಳಿಕ ಕುಸಿತ ಆಗಿರುವಲ್ಲಿ ಯಾವ ರೀತಿ ರಸ್ತೆಯನ್ನು ಸಂಚಾರಕ್ಕೆ ಯೋಗ್ಯ ಮಾಡಬೇಕು ಎನ್ನುವ ಬಗ್ಗೆ ತಜ್ಞರು ನಿರ್ಧಾರ ಕೈಗೊಳ್ಳಲಿದ್ದಾರೆ.
ಬೃಹತ್ ಪ್ರಮಾಣದ ಮಳೆನೀರು, ಬಂಡೆಗಳ ಹೊಡೆತಕ್ಕೆ ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ 2,3,4,11ನೇ ತಿರುವಿನವರೆಗೆ ಅಲ್ಲಲ್ಲಿ ಸಾಮಾನ್ಯ ಹಾನಿಯಾಗಿದೆ. ಆದರೆ ಅದರ ಬಳಿಕ ಸುಮಾರು 7 ಕಿ.ಮೀ ಉದ್ದಕ್ಕೂ ಭಾರಿ ಪ್ರಮಾಣದಲ್ಲಿ ರಸ್ತೆ ಮೇಲೆ ಗುಡ್ಡ ಕುಸಿದು ಕುಳಿತಿದ್ದು, ಒಟ್ಟಾರೆ 15ರಷ್ಟು ಜೆಸಿಬಿಗಳನ್ನು ಬಳಸಿ ತೆರವು ಕಾರ್ಯ ನಡೆಸಲಾಗುತ್ತಿದೆ.

ಒಂದು ತಂಡ ದಕ್ಷಿಣ ಕನ್ನಡ ಕಡೆಯಿಂದ ಮಣ್ಣು ತೆರವು ಮಾಡುತ್ತ ಮೇಲ್ಭಾಗಕ್ಕೆ ಹೋಗುತ್ತಿದ್ದರೆ, ಮೂಡಿಗೆರೆ ಕಡೆಯಿಂದ ಇನ್ನೊಂದು ತಂಡದವರು ತೆರವು ಕಾರ್ಯದಲ್ಲಿ ತೊಡಗಿದ್ದಾರೆ. ಚಿಕ್ಕಮಗಳೂರು ಹಾಗೂ ದ.ಕ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಉನ್ನತ ಅಧಿಕಾರಿಗಳು ಕಾಮಗಾರಿ ಪರಿಶೀಲನೆ ಹಾಗೂ ಮುಂದಿನ ಕ್ರಮದ ಬಗ್ಗೆ ಯೋಜನೆಯಲ್ಲಿ ತೊಡಗಿದ್ದಾರೆ.

ಗುಡ್ಡಕುಸಿತ, ರಸ್ತೆಯೂ ಇನ್ನಿಲ್ಲ
ಚಾರ್ಮಾಡಿ ಘಾಟ್ ಪ್ರದೇಶದ ಏರಿಕಲ್ಲು, ಕೊಡೆಕಲ್ಲು, ಮಿಂಚುಕಲ್ಲು, ಬಾರೆಕಲ್ಲು ಬೆಟ್ಟಗಳ ಪಾರ್ಶ್ವಗಳು ಕುಸಿದಿದ್ದು, ಗುಡ್ಡದಲ್ಲಿ ಕಂದಕಗಳು ನಿರ್ಮಾಣಗೊಂಡಿವೆ. ಕನಿಷ್ಠ ಮೂರು ಕಡೆಗಳಲ್ಲಿ ರಸ್ತೆಯ ತಳಭಾಗ ಬೃಹತ್ ಪ್ರಮಾಣದಲ್ಲಿ ಕುಸಿದು ಕಣಿವೆಯತ್ತ ಜಾರಿದ್ದರಿಂದ ರಸ್ತೆಯ ಬಹುಪಾಲು ಇನ್ನಿಲ್ಲ. ಇಲ್ಲಿ ಕೆಳಗಿನಿಂದ ರಿಟೇನಿಂಗ್ ವಾಲ್ ನಿರ್ಮಿಸುವುದು ಬಲುದೊಡ್ಡ ಸವಾಲು.

ಆಹಾರಕ್ಕಾಗಿ ಮಂಗಗಳ ಪರದಾಟ
ಚಾರ್ಮಾಡಿ ಘಾಟ್ ಪ್ರದೇಶದ ಅಣ್ಣಪ್ಪಗುಡಿ ವ್ಯಾಪ್ತಿ ಹೊರತುಪಡಿಸಿ ಹೆದ್ದಾರಿ ಸಮೀಪ ಮಂಗಗಳ ಗುಂಪು ಕಾಣಸಿಗುವುದು ಅತೀ ವಿರಳ. ಆದರೆ ಈಗ ಚಾರ್ಮಾಡಿ ಘಾಟ್ ಉದ್ದಗಲಕ್ಕೂ ಮಂಗಗಳ ಗುಂಪು ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದ್ದು, ಆಹಾರಕ್ಕಾಗಿ ಪರದಾಡುತ್ತಿದೆ. ಒಂದು ಕಾಲದಲ್ಲಿ ಜೂನ್‌ನಿಂದ ನವಂಬರ್‌ವರೆಗೆ ಪ್ರವಾಸಿಗರ ಸ್ವರ್ಗದಂತಿದ್ದ ಚಾರ್ಮಾಡಿ ಘಾಟ್ ಪ್ರದೇಶ ಇಂದು ಗುಡ್ಡ ಕುಸಿತದಿಂದ ತನ್ನ ಮೂಲ ಸೌಂದರ್ಯವನ್ನೇ ಕಳೆದುಕೊಂಡಿದೆ. ಮಳೆಗಾಲ ಸಂದರ್ಭ ಮೈತುಂಬಿ ಹರಿಯುತ್ತಿದ್ದ ಚಾರ್ಮಾಡಿಯ ಮಾನ್ಸೂನ್ ಜಲಪಾತಗಳಿದ್ದಲ್ಲಿ ಪ್ರಸ್ತುತ ಬೃಹತ್ ಕಂದಕಗಳೇ ಕಾಣುತ್ತಿದೆ.

ನೇತ್ರಾವತಿ ಮಟ್ಟ ಹೆಚ್ಚಳ ಸಾಧ್ಯತೆ
ಮಂಗಳವಾರದಿಂದ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಮತ್ತೆ ಮಳೆ ಆರಂಭಗೊಂಡಿದ್ದು, ಬುಧವಾರ ಇದರ ತೀವ್ರತೆ ಹೆಚ್ಚಾಗಿದೆ. ಘಾಟ್ ಪ್ರದೇಶದ ನದಿ, ತೊರೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಪರಿಣಾಮದಿಂದ ಮುಂದಿನ ದಿನಗಳಲ್ಲಿ ಮತ್ತೆ ನೇತ್ರಾವತಿ ನದಿನೀರಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ.

ಭಾರಿ ಪ್ರಮಾಣದಲ್ಲಿ ಕುಸಿದಿದೆ, ಒಂದೇ ದಿನ ಅಧಿಕ ಪ್ರಮಾಣದಲ್ಲಿ ಮಳೆಯಾಗಿರುವುದೇ ಮೇಲ್ನೋಟಕ್ಕೆ ಈ ಮಟ್ಟದ ಭೂಕುಸಿತಕ್ಕೆ ಕಾರಣ. ರಸ್ತೆಯ ಕೆಳಭಾಗ ಕುಸಿತವಾದ ಕಡೆ ಸಾಯಿಲ್ ನೈಲಿಂಗ್ ತಂತ್ರಜ್ಞಾನದಲ್ಲಿ ತಡೆಗೋಡೆ ನಿರ್ಮಿಸಿ ಮುಂದೆ ಕುಸಿಯದಂತೆ ಮಾಡುವ ಬಗ್ಗೆ ಯೋಜಿಸಲಾಗುತ್ತಿದೆ.
ರಮೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾ.ಹೆ.ವಿಭಾಗ

Leave a Reply

Your email address will not be published. Required fields are marked *