ಮಾನ್ಸೂನ್ ಜಲಪಾತ ಕ್ಷೀಣ!

ಶ್ರವಣ್‌ಕುಮಾರ್ ನಾಳ

ಸುತ್ತ ಕಾನನ, ಮಂಜು ಸಹಿತ ಹಚ್ಚ ಹಸಿರು, ಗಾಳಿ, ಹನಿ ಮಳೆ, ರಸ್ತೆ ಸಮೀಪವೇ ಭೋರ್ಗರೆವ ಮಾನ್ಸೂನ್ ಜಲಪಾತಗಳು…
ಮಳೆಗಾಲದಲ್ಲಿ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಸಂಚಾರ ನೀಡುವ ಖುಷಿಯೇ ಬೇರೆ!
ಆದರೆ, ಈ ಬಾರಿಯ ಮಳೆಗೆ ಚಾರ್ಮಾಡಿ ಘಾಟ್‌ನ ಮಾನ್ಸೂನ್ ಜಲಪಾತಗಳಲ್ಲಿ ನೀರಿನ ಭೋರ್ಗರೆತದ ಸದ್ದು ಕ್ಷೀಣಿಸಿದೆ. ಮಳೆಗಾಲದಲ್ಲಿ ಸೆಪ್ಟೆಂಬರ್‌ವರೆಗೆ ಹರಿಯುವ ಜಲಪಾತಗಳು ಈಗಲೇ ಕ್ಷೀಣಿಸತೊಡಗಿವೆ. ಚಾರ್ಮಾಡಿ ಅರಣ್ಯ ವ್ಯಾಪ್ತಿಯಲ್ಲಿ ಹಲವಾರು ಜಲಪಾತಗಳು ಮಳೆಗಾಲದಲ್ಲಿ ಭೋರ್ಗರೆಯಲು ಆರಂಭಿಸಿ ಆಗಸ್ಟ್ ಅಂತ್ಯದ ವೇಳೆ ಕ್ಷೀಣಿಸುವುದು ರೂಢಿ. ಆದರೆ, ಈ ಬಾರಿ ಸ್ಥಿತಿ ಕೊಂಚ ಭಿನ್ನವಾಗಿದೆ. ಪಶ್ಚಿಮಘಟ್ಟ ಪ್ರದೇಶದ ಬಹುತೇಕ ಜಲಪಾತಗಳು ಅಸ್ತಿತ್ವ ಕಳೆದುಕೊಳ್ಳುವ ಹಂತ ತಲುಪಿದ್ದು, ಕೆಲವು ಜಲಪಾತ ಅಸ್ತಿತ್ವದಲ್ಲಿಲ್ಲ. ಇದಕ್ಕೆ ಸ್ಪಷ್ಟ ನಿದರ್ಶನ ದೊಂಡೊಲೆ ಜಲಪಾತ.

ವಾರದಿಂದ ನೀರಿನ ಪ್ರಮಾಣ ಕುಸಿತ
ಪಶ್ವಿಮ ಘಟದ ಗುಡ್ಡಗಾಡು ಪ್ರದೇಶಗಳಲ್ಲಿ ಚಾರ್ಮಾಡಿ ಘಾಟ್ ಅರಣ್ಯ ವ್ಯಾಪ್ತಿ ಪ್ರವಾಸಿಗರ ಹಾಗೂ ಚಾರಣಿಗರಿಗೆ ಪ್ರಿಯವಾದ ಸ್ಥಳ. ಏರಿಕಲ್ಲು, ಕುಂಬಕಲ್ಲು, ಬಾಳೆಗುಡ್ಡ, ದೊಂಡೇರಿ ಬೆಟ್ಟ, ಹೊಸಮನೆಗುಡ್ಡ, ಮಿಂಚುಕಲ್ಲು, ಮಲೆಮನೆ ಬೆಟ್ಟ, ದೇವರಮನೆ, ರಾಮನಗುಡ್ಡ, ಸೊಪ್ಪಿನ ಗುಡ್ಡ, ಅಂಬಟೆಮಲೆ, ಇಳಿಮಲೆ, ಬಾರಿಮಲೆ, ಬಾಂಜಾರುಮಲೆ, ಅಣಿಯೂರು ಕಣಿವೆ, ದೇವಗಿರಿ ಕಣಿವೆ, ಸೋಮನಕಾಡು, ಜೇನುಕಲ್ಲು, ಕೊಡೆಕಲ್ಲು, ಮೃತ್ಯುಂಜಯ ಕಣಿವೆ ಪ್ರದೇಶದಲ್ಲಿ 80ಕ್ಕೂ ಅಧಿಕ ಮಾನ್ಸೂನ್ ಜಲಪಾತಗಳಿವೆ. ಬಹುತೇಕ ಜಲಪಾತಗಳು ಅರಣ್ಯ ಒತ್ತುವರಿ ಹಾಗೂ ಗಣಿಗಾರಿಕೆಯಿಂದ ತನ್ನ ದಿಕ್ಕು ಬದಲಿಸಿದೆ, ಕೆಲವು ಅಸ್ತಿತ್ವವನ್ನೇ ಕಳೆದುಕೊಂಡಿದೆ. ಸೋಮನ ಕಾಡು ವ್ಯಾಪ್ತಿಯ ಮಳೆ ಜಲಪಾತ ಪ್ರಸಿದ್ಧ. ಚಾರ್ಮಾಡಿ ಕೊಟ್ಟಿಗೆಹಾರ ಹೆದ್ದಾರಿಯ ರಸ್ತೆ ಸಮೀಪವೇ ಹರಿಯುವುದರಿಂದ ಮಳೆಗಾಲದಲ್ಲಿ ಪ್ರಯಾಣಿಕರ ಕಣ್ಣಿಗೆ ಹಬ್ಬ. ಮಳೆ ಆರಂಭಕ್ಕೆ ಇಲ್ಲಿ ನೀರಿದ್ದರೂ ವಾರದಿಂದ ನೀರಿನ ಪ್ರಮಾಣ ಕ್ಷೀಣಿಸಿದೆ.

ಜಲಪಾತಗಳ ಕಣ್ಮರೆಗೆ ಕಾರಣವೇನು?
ಚಾರ್ಮಡಿಯ ಘಾಟ್ ಪ್ರದೇಶದ ಅಣಿಯೂರು ಕಣಿವೆ ಭಾಗದಲ್ಲಿ 600 ಸಾವಿರ ಎಕರೆಗೂ ಅಧಿಕ ಅರಣ್ಯ ಒತ್ತುವರಿ ನಡೆದಿದೆ. ಬಾಂಜಾರುಮಲೆ ನೆರಿಯಾ ವ್ಯಾಪ್ತಿ, ಅಂಬಟಿಮಲೆ, ದುರ್ಗದ ಹಳ್ಳಿಯ 2070 ಭಾಗದಲ್ಲಿ ಗಣಿಗಾರಿಕೆ, ವಿವಿದ ಯೋಜನೆಗಳಿಗೆ ಅರಣ್ಯ ಒತ್ತುವರಿಯಾಗಿದೆ. ಬಾರಿಮಲೆ, ಬಾಂಜಾರುಮಲೆ ಗಣಿಗಾರಿಕೆ, ಖಾಸಗಿ ತೋಟ ನಿರ್ಮಿಸಿದ್ದರಿಂದ ಜಲಪಾತಗಳ ನೈಸರ್ಗಿಕ ಹರಿಯುವಿಕೆಗೆ ತೊಂದರೆಯಾಗಿದೆ. ಒಂದೆಡೆ ಮಳೆ ಕೊರತೆ, ಮತ್ತೊಂದೆಡೆ ನೀರಿನ ನೈಸರ್ಗಿಕ ಹರಿಯುವಿಕೆಗೆ ತೊಂದರೆಯಾಗಿದ್ದರಿಂದ ಹಲವಡೆ ನದಿಮೂಲ ಹಾಗೂ ಜಲಪಾತಗಳೇ ಕಣ್ಮರೆಯಾಗಿವೆ.

ಏನಿದು ಮಾನ್ಸೂನ್ ಜಲಪಾತ?
ಮಳೆಗಾಲ ಆರಂಭದ 20-25 ದಿನದ ಮೊದಲು ಪಶ್ಚಿಮಘಟ್ಟದ ತಪ್ಪಲಿನಲ್ಲಿ ಮಳೆಯಾಗುವುದು ರೂಢಿ. ಒಣಗಿದ್ದ ಪಶ್ಚಿಮ ಘಟ್ಟದ ಹುಲ್ಲುಗಾವಲು ಮಳೆ ಪರಿಣಾಮ 2ರಿಂದ 3 ವಾರಗಳಲ್ಲಿ ಚಿಗುರುತ್ತವೆ. ನಂತರ ಮಳೆಗಾಲ ಆರಂಭವಾಗಲಿದೆ. ಮಳೆಯಾದಾಗ ನೀರು ಪೂರ್ಣ ಪ್ರಮಾಣದಲ್ಲಿ ಹರಿಯದಂತೆ ಈ ಹುಲ್ಲುಗಾವಲು ತಡೆದು, ಭೂರಂಧ್ರಗಳ ಮೂಲಕ ಅಂತರ್ಜಲ ಸೇರುವಂತೆ ಮಾಡುತ್ತದೆ. ಇದರಿಂದ ನದಿಮೂಲಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತದೆ. ಮಳೆ ನೀರು ಭೂರಂಧ್ರಗಳಲ್ಲಿ ಶೇಖರಣೆಗೊಳ್ಳುವ ಸಂದರ್ಭ ಹೆಚ್ಚುವರಿ ನೀರು ಕಣಿವೆಗಳ ಮೂಲಕ ಸಣ್ಣ ತೊರೆ ಅಥವ ಜಲಪಾತವಾಗಿ 2-3 ತಿಂಗಳ ಕಾಲ ಹರಿಯುತ್ತದೆ. ಇಂತಹದೇ ನೂರಾರು ಜಲಪಾತಗಳು ಒಟ್ಟು ಸೇರಿ ನದಿನೀರಿನ ಮೂಲ ಕವಲಾಗಿ ಹರಿದು ಅಂತಿಮವಾಗಿ ನದಿಯಾಗಿ ಹರಿಯುತ್ತದೆ.

ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಕುಸಿತ
ಪಶ್ಚಿಮಘಟ್ಟದ ತಪ್ಪಲಿನ ಪ್ರದೇಶ ಚಾರ್ಮಾಡಿ ಘಾಟ್ ಅರಣ್ಯ ವ್ಯಾಪ್ತಿಯಲ್ಲಿ ಮಳೆಗಾಲ ಸಂದರ್ಭ ಪ್ರತೀ ದಿನ 150 ಮಿ.ಮೀ. ಸರಾಸರಿ ಮಳೆಯಾಗುತ್ತದೆ. ಈ ಬಾರಿ 15 ಮಿ.ಮೀ.ಬೇಸಗೆಯಲ್ಲೇ ಮಳೆಯಾಗಿದೆ. ಜೂನ್1ರಿಂದ ಜುಲೈ 15ರ ವರೆಗೆ 46ಮಿ.ಮೀ.ಸರಾಸರಿ ಮಳೆಯಾಗಿದೆ. ಕಳೆದ 4-5 ವರ್ಷಗಳಿಂದ ಬಹುತೇಕ ಗ್ರಾಸ್‌ಲ್ಯಾಂಡ್ ಪ್ರದೇಶಕ್ಕೂ ಹಾನಿಯಾಗಿ, ಒರತೆ ಮುಚ್ಚಿದೆ. ನೇತ್ರಾವತಿ ನದಿಯ ಮೂಲ ಚಾರ್ಮಾಡಿ ಅರಣ್ಯ ವ್ಯಾಪ್ತಿಯಾಗಿದ್ದು, ಇಲ್ಲಿ ನೀರಿನ ಪ್ರಮಾಣ ಕೊರತೆಯಿಂದ ಮಳೆಗಾಲದಲ್ಲಿ ನೇತ್ರಾವತಿ ನದಿನೀರಿನ ಹರಿಯುವ ಪ್ರಮಾಣ ಶೇ.60 ಕುಸಿದಿದೆ.

ಪಶ್ಚಿಮಘಟ್ಟ ಶೇ.60 ಭಾಗ ಕರ್ನಾಟಕದಲ್ಲಿದೆ. ಶೇ.50 ಗ್ರಾಸ್‌ಲ್ಯಾಂಡ್, ಶೇ.70 ಶೋಲಾರಣ್ಯವಿದೆ. ಇದಕ್ಕೆ ಹೊಡೆತ ಬಿದ್ದ ಕಾರಣ, ಬೆಟ್ಟಗಳಲ್ಲಿ ನೀರಿನ ನೈಸರ್ಗಿಕ ಹರಿಯುವಿಕೆಗೆ ತೊಂದರೆಯಾಗಿದೆ. ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಜಲಪಾತಗಳು ಕಾಣಸಿಗುವುದು ಕಷ್ಟ.
ಅನಂತ ಆಶೀಸರ,
ಮಾಜಿ ಅಧ್ಯಕ್ಷ, ಪಶ್ಚಿಮಘಟ್ಟ ಕಾರ್ಯಪಡೆ

Leave a Reply

Your email address will not be published. Required fields are marked *