ಮುಂದುವರಿದ ಚಾರ್ಮಾಡಿ ಬ್ಲಾಕ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಚಾರ್ಮಾಡಿ ಘಾಟಿ 3ನೇ ತಿರುವಿನಲ್ಲಿ ಬುಧವಾರ ಮುಂಜಾನೆ ಸರಕು ಲಾರಿ ಪಲ್ಟಿಯಾಗಿ ವಾಹನ ಸಂಚಾರದಲ್ಲಿ ತಾಸುಗಟ್ಟಲೆ ವ್ಯತ್ಯಯವಾಯಿತು.
ಕೊಟ್ಟಿಗೆಹಾರ ಕಡೆಯಿಂದ ಉಜಿರೆೆಗೆ ಬರುತ್ತಿದ್ದ ಲಾರಿ, ಮೂರನೇ ಹಿಮ್ಮುರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಶಿರಾಡಿ ಘಾಟಿ ರಸ್ತೆ ಘನ ವಾಹನಗಳಿಗೆ ನಿರ್ಬಂಧ ಇರುವುದರಿಂದ ಸರ್ಕಾರಿ, ಖಾಸಗಿ ಬಸ್‌ಗಳು, ಜಿಲ್ಲಾಡಳಿತ ನೀಡಿದ ಆದೇಶದಂತೆ ಈ ಘಾಟಿ ರಸ್ತೆಯಲ್ಲಿ ಸಂಚರಿಸಲು ಅವಕಾಶ ಇರುವ ಘನ ವಾಹನಗಳ ದಟ್ಟಣೆ ಹೆಚ್ಚಿದ್ದು ಲಾರಿ ಪಲ್ಟಿಯಾದ್ದರಿಂದ ಮುಕ್ತ ಸಂಚಾರಕ್ಕೆ ತಡೆಯಾಯಿತು.
ಬೆಳಗ್ಗಿನ ಜಾವ ಬೆಂಗಳೂರಿನಿಂದ ಮಂಗಳೂರು, ಧರ್ಮಸ್ಥಳ, ಉಡುಪಿ ಮುಂತಾದ ಕಡೆಗೆ ಬರುತ್ತಿದ್ದ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳು ಘಾಟಿಯಲ್ಲಿ ಬ್ಲಾಕ್ ಆಗಿದ್ದವು. ಇದರಿಂದ ಘಾಟಿಯಲ್ಲಿ ಪ್ರಯಾಣಿಕರು ಪರದಾಡುವಂತಾಯಿತು. ಸ್ಥಳೀಯರ ಹಾಗೂ ಸಂಚಾರಿ ಪೋಲೀಸರ ಸಹಕಾರದಿಂದ ಪಲ್ಟಿಯಾದ ವಾಹನ ತೆರವು ಬಳಿಕ ಘಾಟಿಯಲ್ಲಿ ಸಾಲುಗಟ್ಟಿ ನಿಂತಿದ್ದ ವಾಹನಗಳನ್ನು ನಿಧಾನಗತಿಯಲ್ಲಿ ಬಿಡಲಾಯಿತು.

ಪದೇಪದೆ ಸಮಸ್ಯೆ: ದ.ಕ ಜಿಲ್ಲೆಯನ್ನು ಸಂಪರ್ಕಿಸುವ ಬೇರೆ ಘಾಟಿ ರಸ್ತೆಗಳಲ್ಲಿ ಘನವಾಹನಗಳ ಸಂಚಾರ ನಿಷೇಧದಿಂದಾಗಿ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಆಗಾಗ ವಾಹನ ಸಂಚಾರದಲ್ಲಿ ತಡೆಯಾಗುತ್ತಿದೆ. ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಘಾಟಿ ರಸ್ತೆಯಲ್ಲಿ ಹೊಂಡಗಳು ಸೃಷ್ಟಿಯಾಗಿದ್ದು ತಿರುವುಗಳಲ್ಲಿ ವಾಹನಗಳು ಪಲ್ಟಿಯಾಗಿ ವಾಹನ ಸಂಚಾರದಲ್ಲಿ ವ್ಯತ್ಯಯವಾಗಿ ಪ್ರಯಾಣಿಕರು ತಾಸುಗಟ್ಟಲೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.