ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ವಿರುದ್ಧ ಚಾರ್ಜ್‌ ಶೀಟ್

ಕೋಲ್ಕತ: ಟೀಂ ಇಂಡಿಯಾದ ವೇಗದ ಬೌಲರ್‌ ಮೊಹಮ್ಮದ್ ಶಮಿ ವಿರುದ್ಧ ಶಮಿ ಪತ್ನಿ ಹಸೀನ್ ಜಹಾನ್ ನೀಡಿರುವ ದೂರಿನ ಅನ್ವಯ ಕೋಲ್ಕತ ಪೊಲೀಸರು ಜಾಮೀನು ರಹಿತ ಆರೋಪ ಪಟ್ಟಿಯನ್ನು ಅಲಿಪೋರ್ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಚಾರ್ಜ್‌ಶೀಟ್‌ನಲ್ಲಿ ಶಮಿ ವಿರುದ್ಧ ಸೆಕ್ಷನ್‌ 498A ಅಡಿ ವರದಕ್ಷಿಣೆ ಕಿರುಕುಳ ಮತ್ತು 354A ಅಡಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ.

ಇದೀಗ ಶಮಿ ಕ್ರಿಕೆಟ್‌ ಜೀವನ ಡೋಲಾಯಮಾನ ಸ್ಥಿತಿಗೆ ತಲುಪಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗಲಿರುವ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಶಮಿ ಆಡಲಿದ್ದಾರೆಯೇ, ಇಲ್ಲವೇ ಎನ್ನುವ ಕುರಿತು ಪ್ರಶ್ನೆಗಳು ಎದ್ದಿವೆ. ಶಮಿ ಇತ್ತೀಚೆಗಷ್ಟೇ ನಡೆದ ಆಸ್ಟ್ರೇಲಿಯ ವಿರುದ್ಧ ಏಕದಿನ ಸರಣಿಯಲ್ಲಿ ಆಡುವ ಮೂಲಕ ನಾಲ್ಕು ಪಂದ್ಯಗಳಲ್ಲಿ 5 ವಿಕೆಟ್‌ ಕಬಳಿಸಿದ್ದರು.

ಶಮಿ ಪತ್ನಿ ಹಾಸಿನ್‌ ಜಹಾನ್‌ ಅವರು ಕಳೆದ ವರ್ಷ ಮಾ. 7ರಂದು ಶಮಿಗೆ ಅಕ್ರಮ ಸಂಬಂಧ ಇದೆ ಎಂದು ಆರೋಪಿಸಿ ಸಹ ಸಾಮಾಜಿಕ ತಾಣದ ಮೂಲಕ ಬಯಲುಗೊಳಿಸಿದ್ದರು. ಅಲ್ಲದೆ ಕೌಟುಂಬಿಕ ದೌರ್ಜನ್ಯ, ಮ್ಯಾಚ್ ಫಿಕ್ಸಿಂಗ್ ನಡೆಸಿದ್ದಾರೆಂದು ಕೂಡ ಗಂಭೀರ ಆರೋಪ ಮಾಡಿದ್ದರು.

ಮ್ಯಾಚ್‌ಫಿಕ್ಸಿಂಗ್‌ ಕುರಿತು ಆಂತರಿಕ ತನಿಖೆ ಕೈಗೊಂಡಿದ್ದ ಬಿಸಿಸಿಐ ಮ್ಯಾಚ್‌ಫಿಕ್ಸಿಂಗ್‌ ಪ್ರಕರಣದಲ್ಲಿ ಶಮಿಗೆ ಕ್ಲೀನ್‌ ಚಿಟ್‌ ನೀಡಿತ್ತು ಮತ್ತು ಅವರೊಂದಿಗಿನ ಒಪ್ಪಂದವನ್ನು ಪುನಃ ಸ್ಥಾಪಿಸಿತ್ತು. ಇತ್ತೀಚಿಗಿನ ಕೇಂದ್ರ ಒಪ್ಪಂದಗಳ ಪಟ್ಟಿ ಪ್ರಕಾರ, ಶಮಿಗೆ ಎ ಗ್ರೇಡ್‌ ಒಪ್ಪಂದ(5 ಕೋಟಿ ರೂ.)ವನ್ನು ನೀಡಲಾಗಿತ್ತು. (ಏಜೆನ್ಸೀಸ್)