ಕನ್ಹಯ್ಯ ಕುಮಾರ್ ವಿರುದ್ಧದ ದೇಶದ್ರೋಹ ಪ್ರಕರಣದಲ್ಲಿ ಪೊಲೀಸರಿಂದ ಚಾರ್ಜ್​ಶೀಟ್​

ನವದೆಹಲಿ: ದೆಹಲಿಯ ಜವಹಾರ್​ಲಾಲ್​ ನೆಹರು ವಿಶ್ವವಿದ್ಯಾಲಯದಲ್ಲಿ 2016ರಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ವಿದ್ಯಾರ್ಥಿ ಸಂಘದ ನಾಯಕರಾದ ಕನ್ಹಯ್ಯ ಕುಮಾರ್​, ಉಮರ್​ ಖಲೀದ್​ ಅವರ ವಿರುದ್ಧ ದಾಖಲಾಗಿದ್ದ ದೇಶದ್ರೋಹದ ಪ್ರಕರಣದಲ್ಲಿ ಪೊಲೀಸರು ಇಂದು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

” ಕನ್ಹಯ್ಯ ಕುಮಾರ್​, ಉಮರ್​ ಖಲೀದ್​, ಅನಿರ್ಬನ್​ ಭಟ್ಟಾಚಾರ್ಯ ಮತ್ತು ಇತರ ಏಳು ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ದೇಶದ್ರೋಹ ಕೇಸ್​ಗೆ ಸಂಬಂಧಪಟ್ಟಂತೆ ನಮ್ಮ ಬಳಿ ಸಾಕ್ಷಿಗಳಿವೆ,” ಎಂದು ಪೊಲೀಸರು ಹೇಳಿಕೊಂಡಿದ್ದಾರೆ. ಡಿಎಂಕೆ ನಾಯಕ ಡಿ. ರಾಜ ಅವರ ಪುತ್ರಿ ಅಪರಾಜಿತ ರಾಜ ಅವರ ಹೆಸರೂ ಚಾರ್ಜ್​ ಶೀಟ್​ನಲ್ಲಿ  ಉಲ್ಲೇಖವಾಗಿದೆ.

ಸಂಸತ್​ ದಾಳಿ ರುವಾರಿ ಅಫ್ಜಲ್​ ಗುರುನನ್ನು ನೇಣಿಗೇರಿಸಿದ್ದನ್ನು ವಿರೋಧಿಸಿ 2016ರ ಫೆಬ್ರವರಿಯಲ್ಲಿ ದೆಹಲಿಯ ಜೆಎನ್​ಯು ಆವರಣದಲ್ಲೇ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂಬುದು ಕನ್ಹಯ್ಯ ಕುಮಾರ್​ ಅವರ ಮೇಲಿರುವ ಆರೋಪ. ಈ ಹಿನ್ನೆಲೆಯಲ್ಲಿ ಕನ್ನಯ್ಯ ಕುಮಾರ್​, ಉಮರ್​ ಖಲೀದ್​, ಅನಿರ್ಬನ್​ ಭಟ್ಟಾಚಾರ್ಯ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು. ವಿದ್ಯಾರ್ಥಿ ನಾಯಕರ ಬಂಧನದ ಹಿನ್ನೆಲೆಯಲ್ಲಿ ದೇಶದ ಹಲವೆಡೆ ಭಾರಿ ವಿರೋಧ ವ್ಯಕ್ತವಾಗಿತ್ತು. ಪೊಲೀಸರು ಬಿಜೆಪಿಯ ನಿರ್ದೇಶನದಂತೆ ನಡೆದುಕೊಳ್ಳುತ್ತಿದ್ದಾರೆ ಎಂಬ ಕೂಗು ಕೇಳಿ ಬಂದಿತ್ತು.

ಇನ್ನು ಇಂದು ಸಲ್ಲಿಕೆಯಾಗಿರುವ 1,200 ಪುಗಳ ಚಾರ್ಜ್​ ಶೀಟ್​ ಕುರಿತು ಪ್ರತಿಕ್ರಿಯಿಸಿರುವ ಕನ್ಹಯ್ಯ ಕುಮಾರ್​, ” ಇದು ರಾಜಕೀಯ ಪ್ರೇರಿತ. ಚಾರ್ಜ್​ ಶೀಟ್​ ಸಲ್ಲಿಕೆಯಾಗಿದೆ ಎಂಬ ಸುದ್ದಿ ನಿಜವೇ ಆಗಿದ್ದರೆ, ಆ ವಿಚಾರದಲ್ಲಿ ನಾನು ಮೋದಿ ಮತ್ತು ಪೊಲೀಸರಿಗೆ ಧನ್ಯವಾದ ಅರ್ಪಿಸುತ್ತೇನೆ,” ಎಂದಿದ್ದಾರೆ.

” ನನ್ನ ಮೇಲೆ ಪ್ರಕರಣ ದಾಖಲಾಗಿ ಮೂರು ವರ್ಷಗಳಾಗಿವೆ. ಆದರೆ, ಲೋಕಸಭೆ ಚುನಾವಣೆಗೆ ಇನ್ನು ಮೂರು ತಿಂಗಳಿದೆ ಎನ್ನುವಾಗ ದಾಖಲಾಗಿರುವ ಈ ಚಾರ್ಜ್​ಶೀಟ್​ ರಾಜಕೀಯ ಪ್ರೇರಿತವಲ್ಲದೇ ಮತ್ತೇನು. ನಾನು ಈ ದೇಶದ ಕಾನೂನಿನ ಮೇಲೆ ನಂಬಿಕೆ ಇಟ್ಟಿದ್ದೇನೆ,” ಎಂದಿದ್ದಾರೆ.

https://twitter.com/ANI/status/1084749705035370496