ಕನ್ಹಯ್ಯ ಕುಮಾರ್​ ವಿರುದ್ಧದ ಚಾರ್ಜ್​ಶೀಟ್​ ತಿರಸ್ಕರಿಸಿದ ದೆಹಲಿ ಹೈಕೋರ್ಟ್​

ನವದೆಹಲಿ: ಜವಹರ್​ ಲಾಲ್ ನೆಹರು​ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಮಾಜಿ ನಾಯಕ ಕನ್ಹಯ್ಯ ಕುಮಾರ್​ ಅವರ ದೇಶ ವಿರೋಧಿ ಹೇಳಿಕೆ ಕುರಿತಂತೆ ದೆಹಲಿ ಪೊಲೀಸರು ಸಲ್ಲಿಸಿದ್ದ ಚಾರ್ಜ್​ಶೀಟ್​ನ್ನು ದೆಹಲಿ ಹೈಕೋರ್ಟ್​ ತಿರಸ್ಕರಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸೋಮವಾರ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆದರೆ, ಇಂದು ದೆಹಲಿ ಹೈಕೋರ್ಟ್​ ಅದನ್ನು ಒಪ್ಪಿಕೊಳ್ಳದೆ ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.

ದೆಹಲಿ ಸರ್ಕಾರದ ಅನುಮೋದನೆ ಪಡೆದಿಲ್ಲ. ಹಾಗೆಯೇ ದೋಷಾರೋಪ ಪಟ್ಟಿ ಸಲ್ಲಿಸಿದ್ದೀರಾ ಎಂದು ಅರ್ಜಿ ವಿಚಾರಣೆ ವೇಳೆ ದೆಹಲಿ ಪೊಲೀಸರಿಗೆ ಪ್ರಶ್ನಿಸಿದೆ. ಇದಕ್ಕೆ ಉತ್ತರಿಸಿದ ದೆಹಲಿ ಪೊಲೀಸ್​ ದೋಷಾರೋಪ ಪಟ್ಟಿಗೆ ಇನ್ನು ಹತ್ತು ದಿನಗಳಲ್ಲಿ ದೆಹಲಿ ಸರ್ಕಾರದಿಂದ ಅನುಮೋದನೆ ಪಡೆಯುತ್ತೇವೆ ಎಂದಿದೆ.

ದೆಹಲಿಯ ಜವಹಾರ್​ಲಾಲ್​ ನೆಹರು ವಿಶ್ವವಿದ್ಯಾಲಯದಲ್ಲಿ ಫೆಬ್ರವರಿ 2016ರಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಘದ ನಾಯಕರಾಗಿದ್ದ ಕನ್ಹಯ್ಯ ಕುಮಾರ್​ ಮತ್ತು ಉಮರ್​ ಖಲೀದ್​ ದೇಶದ್ರೋಹದ ಹೇಳಿಕೆ ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸೋಮವಾರ 1,200 ಪುಟಗಳ ಚಾರ್ಜ್​ ಶೀಟ್ ಅ​ನ್ನು ದೆಹಲಿ ಹೈಕೋರ್ಟ್​ಗೆ ಸಲ್ಲಿಸಿದ್ದರು. ದೋಷಾರೋಪ ಪಟ್ಟಿಯಲ್ಲಿ ಉಮರ್​ ಖಲೀದ್​, ಅನಿರ್ಬನ್​ ಭಟ್ಟಾಚಾರ್ಯ ಮತ್ತು ಜಮ್ಮು ಕಾಶ್ಮೀರದ ಇತರ ಏಳು ವಿದ್ಯಾರ್ಥಿಗಳ ಹೆಸರನ್ನೂ ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.

ವಿದ್ಯಾರ್ಥಿ ನಾಯಕರ ಬಂಧನದ ಹಿನ್ನೆಲೆಯಲ್ಲಿ ದೇಶದ ಹಲವೆಡೆ ಭಾರಿ ವಿರೋಧ ವ್ಯಕ್ತವಾಗಿತ್ತು. ಪೊಲೀಸರು ಬಿಜೆಪಿಯ ನಿರ್ದೇಶನದಂತೆ ನಡೆದುಕೊಳ್ಳುತ್ತಿದ್ದಾರೆ ಎಂಬ ಕೂಗು ಕೇಳಿ ಬಂದಿತ್ತು. (ಏಜೆನ್ಸೀಸ್)