ಲಿಂಗಸುಗೂರು: ಪಠ್ಯದ ಜತೆಗೆ ಸಾಮಾನ್ಯ ಜ್ಞಾನ ವೃದ್ಧಿಗೆ ಗ್ರಂಥಾಲಯಗಳು ಪೂರಕವಾಗಿವೆ. ಆದರೆ, ಪುಸ್ತಕ ಭಂಡಾರ ಎನ್ನಿಸುವ ಗ್ರಂಥಾಲಯಗಳು (ಅರಿವು ಕೇಂದ್ರ) ಗ್ರಾಮೀಣ ಭಾಗದಲ್ಲಿ ಅಸಮರ್ಪಕ ಸೌಲಭ್ಯ, ಸ್ಥಳದ ಕೊರತೆಯಿಂದಾಗಿ ಓದುಗರರಿಂದ ದೂರ ಉಳಿದಿದೆ.
ಇದನ್ನೂ ಓದಿ: ಗ್ರಂಥಾಲಯ,ಹಾಸ್ಟೆಲ್‌ಗಳಿಗೆ ಸಿಇಒ ಹಠಾತ್ ಭೇಟಿ
ತಾಲೂಕಿನ ಈಚನಾಳ ಗ್ರಾಮದ ಅರಿವು ಕೇಂದ್ರವೆಂಬ ಹೆಸರಿನ ಗ್ರಾಪಂ ಗ್ರಂಥಾಲಯ ಜಾಗ ಕೊರತೆಯಿಂದ ಇಕ್ಕಟ್ಟಾದ ಸಂದಿಯಲ್ಲಿ ಒಂದು ಕೊಠಡಿಯಲ್ಲಿ ನಡೆಯುತ್ತಿದೆ. ಅದು ಕೂಡ ಶಿಥಿಲಾವಸ್ಥೆಗೆ ತಲುಪಿದೆ. ಕೇಂದ್ರದಲ್ಲಿ ಏಳು ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ. ಹೊಸದಾಗಿ ಬಂದ ನೂರಾರು ಪುಸ್ತಕಗಳನ್ನು ಹೊಂದಿಸಲು ಸ್ಥಳವಿಲ್ಲದೆ ಮೂಟೆಯಲ್ಲಿಯೇ ಉಳಿದಿವೆ.
ಇದಕ್ಕೆ ಹೈಟೆಕ್ ಗ್ರಂಥಾಲಯವೆಂದು ಹೆಸರಿಸಲಾಗಿದೆ. ಮಹಿಳೆಯರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಇಲ್ಲದೆ ಕೇಂದ್ರಕ್ಕೆ ಬರಲು ಹಿಂದೇಟು ಹಾಕುವಂತಾಗಿದೆ. ಕೇಂದ್ರದ ಸುತ್ತ ಜಾಲಿಗಿಡಗಳು, ಕೊಳಚೆ ನೀರಿನಿಂದ ಕೂಡಿದ್ದು, ಕೊಠಡಿಯಲ್ಲಿ ಶುದ್ಧ ಗಾಳಿ, ಕುಡಿವ ನೀರು, ಶೌಚಗೃಹ, ವಿದ್ಯುತ್ ದೀಪ, ಅಗತ್ಯ ಆಸನಗಳ ವ್ಯವಸ್ಥೆಗಳಿಲ್ಲ. ಆರೇಳು ತಿಂಗಳ ಹಿಂದೆ ಐದಾರು ಕಂಪ್ಯೂಟರ್‌ಗಳನ್ನು ಪೂರೈಕೆ ಮಾಡಿದ್ದು, ವಿದ್ಯುತ್ ಸಂಪರ್ಕ,
ಇಂಟರ್‌ನೆಟ್, ಯುಪಿಎಸ್ ಬ್ಯಾಟರಿ, ಸೋಲಾರ್ ವ್ಯವಸ್ಥೆ ಇಲ್ಲದೆ ಓದುಗರು ಪರದಾಡುವಂತಾಗಿದೆ. ಹೈಟೆಕ್ ಗ್ರಂಥಾಲಯದ ಕಟ್ಟಡ ನಿರ್ಮಾಣಕ್ಕೆ 30ಲಕ್ಷ ರೂ. ಮಂಜೂರಾಗಿತ್ತು. ಹಳೆಯ ಕಟ್ಟಡ ತೆರವುಗೊಳಿಸಿ ಅಲ್ಲಿಯೇ ಹೊಸದಾಗಿ ನಿರ್ಮಿಸಲು ಜಾಗದ ಕೊರತೆ ಉಂಟಾಯಿತು. ಗ್ರಾಪಂ ಆಡಳಿತ ಮಂಡಳಿ ಬೇರೆಡೆ ಜಾಗ ನೀಡದ ಕಾರಣ ಹಣ ವಾಪಸ್ ಹೋಗಿದೆ. ಗ್ರಂಥಾಲಯ ನಿರ್ವಹಣೆ ನಿರ್ಲಕ್ಷ್ಯದಿಂದ ಪುಸ್ತಕ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಅತಿ ಚಿಕ್ಕದಾದ ಕೊಠಡಿಯಲ್ಲಿ ಗ್ರಂಥಾಲಯವಿದೆ. ಸಾವಿರಾರು ಪುಸ್ತಕಗಳನ್ನು ಜೋಡಿಸಲು ಸ್ಥಳದ ಅಭಾವವಿದೆ. ಸೌಲಭ್ಯಗಳ ವ್ಯವಸ್ಥೆ ಕಲ್ಪಿಸಲು ಗ್ರಾಪಂಗೆ ಮಾಹಿತಿ ನೀಡಲಾಗಿದೆ. ಇರುವ ವ್ಯವಸ್ಥೆಯಲ್ಲಿಯೇ ಕೇಂದ್ರ ನಡೆಸಲಾಗುತ್ತಿದೆ.
ಮೈತ್ರಾ ಮೇಟಿ
ಗ್ರಂಥಪಾಲಕಿ, ಈಚನಾಳಗ್ರಂಥಾಲಯದ ಹಳೆಯ ಕಟ್ಟಡ ತೆರವುಗೊಳಿಸಿ ಪಕ್ಕದ ಜಾಗವನ್ನೂ ಬಳಸಿ ಹೈಟೆಕ್ ಗ್ರಂಥಾಲಯ ನಿರ್ಮಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಹೇಳಲಾಗಿತ್ತು. ಕ್ರಿಯಾಯೋಜನೆಯಂತೆ ಹೊಸ ಕಟ್ಟಡಕ್ಕೆ ಜಾಗದ ಕೊರತೆಯಾಗಲಿದೆ ಎಂದು ಹೇಳಿ ಕೈಬಿಟ್ಟಿದ್ದಾರೆ. ಬೇರೆಡೆ ಜಾಗ ನೀಡಲು ಸಭೆಯಲ್ಲಿ ಚರ್ಚಿಸಲಾಗುವುದು.
ಶಿವಪ್ಪ
ಪ್ರಭಾರ ಪಿಡಿಒ, ಈಚನಾಳ ಗ್ರಾಪಂ