ಸಾಧಕರಿಗೆ ಪ್ರಶಸ್ತಿ ನೀಡದಿರುವುದು ವಿಷಾದನೀಯ

ಚನ್ನರಾಯಪಟ್ಟಣ: ಕನ್ನಡ ನಾಡು, ನುಡಿ ಹಾಗೂ ಸಾಹಿತ್ಯಕ್ಕಾಗಿ ಶ್ರಮಿಸಿದ ಸಾಧಕರಿಗೆ ಪ್ರಶಸ್ತಿ ನೀಡದೆ 63ನೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿರುವುದು ವಿಷಾದನೀಯ ಎಂದು ದಿಗ್ವಿಜಯ ನ್ಯೂಸ್‌ನ ಶುಭನುಡಿ ವಾಚಕ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಕಳವಳ ವ್ಯಕ್ತಪಡಿಸಿದರು.

ತಾಲೂಕಿನ ದಂಡಿಗನಹಳ್ಳಿ ಹೋಬಳಿ ದೂತನೂರು ಕಾವಲು ಸಮೀಪದ ಮಾನಸಗಿರಿಯ ಮಲ್ನಾಡ್ ಅಕಾಡೆಮಿ ಪಿಯು ಕಾಲೇಜಿನ ವತಿಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ‘ಕನ್ನಡ ನಾಡು ನುಡಿ ಅಂದು ಇಂದು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡಿಗರನ್ನು ಗೌರವಿಸದೆ ಸಂಭ್ರಮಾಚರಣೆ ಮಾಡಿರುವುದು ತಾಯಿ ಭುವನೇಶ್ವರಿಗೆ ಮಾಡಿದ ಅಪಮಾನ ಎಂದರು.

ಕರ್ನಾಟಕದಲ್ಲಿ ಇಂದಿಗೂ ನಾಡಗೀತೆ ಬಗ್ಗೆ ಹಲವು ಗೊಂದಲವಿದೆ. ಇದಕ್ಕಾಗಿ ನ್ಯಾಯಾಲಯದ ಮೆಟ್ಟಿಲು ಏರುವುದು ಎಷ್ಟರ ಮಟ್ಟಿಗೆ ಸರಿ. ನಾವೇ ತೀರ್ಮಾನ ತೆಗೆದುಕೊಳ್ಳಬೇಕಿದ್ದು, ಕಾನೂನು ಕೇಳುವ ಮೂಲಕ ನಾಡಿಗೆ ಅಗೌರವ ತರುತ್ತಿದ್ದೇವೆ. ನಾಡಗೀತೆ ಶಾಲಾ ಕಾಲೇಜಿಗೆ ಸೀಮಿತವಾಗಿದೆ. ರಾಜ್ಯದಲ್ಲಿ ಉಸಿರಾಡುವ ಪ್ರತಿಯೊಬ್ಬರೂ ಇದನ್ನು ಹಾಡುವಂತೆ ಮಾಡುವುದು ಕನ್ನಡಿಗನ ಆದ್ಯಕರ್ತವ್ಯ ಎಂದು ಹೇಳಿದರು.

ಹಾಸನಾಂಬೆ ದೇವಾಲಯದ ಜಗುಲಿಯಲ್ಲಿ ಕನ್ನಡ ಕಲಿತ ತಮಿಳಿನ ಟಿ.ಪಿ.ಕೈಲಾಸಂ ಕನ್ನಡ ಸಾಹಿತ್ಯಕ್ಕೆ ಅಗಾಧ ಕೊಡುಗೆ ನೀಡಿದ್ದಾರೆ. ಆದರೆ ರಾಜ್ಯದಲ್ಲಿ ಜನ್ಮತಾಳಿದವರು ಕನ್ನಡ ಭಾಷೆ ಬದಲಾಗಿ ಆಂಗ್ಲಭಾಷೆ ಕಡೆ ವಾಲುತ್ತಿದ್ದಾರೆ. ಭಾಷೆ ಉಳಿದರೆ ಭಾವನೆ ಉಳಿಯುತ್ತದೆ. ರಾಜ್ಯೋತ್ಸವ ನವೆಂಬರ್ ತಿಂಗಳಿಗೆ ಸೀಮಿತವಾಗದೆ ನಿತ್ಯವೂ ಜರುಗಲಿ ಎಂದರು.

ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ದೇವಾಲಯಗಳ ಸಂಖ್ಯೆ ಹೆಚ್ಚದೆ ಗ್ರಂಥಾಲಯಗಳ ಸಂಖ್ಯೆ ಹೆಚ್ಚಬೇಕಿದೆ. ಜಿಲ್ಲೆಯಲ್ಲಿ ಇಂದಿಗೂ ಕನ್ನಡ ಭಾಷೆ ಮೇಲೆ ಇತರರ ಆಕ್ರಮಣ ನಡೆದಿಲ್ಲ ಹಾಗೂ ನಡೆಯಲು ಬಿಡುವುದಿಲ್ಲ. ಒತ್ತಡದ ಬದುಕಿನಿಂದ ಹೊರ ಬರಬೇಕೆಂದರೆ ಸಾಹಿತ್ಯ ಓದುವುದು, ಬರೆಯುವುದನ್ನು ಅಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.

ಶ್ರೀದೇವಿ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ.ಸಿ.ಕೆ.ವಿಜಯಕುಮಾರ್, ಕಾರ್ಯದರ್ಶಿ ಡಾ.ಆಶಾ, ಸಾಹಿತಿ ಬೆಳವಾಡಿ ಮಂಜುನಾಥ್, ಜಿ.ಪಂ. ಮಾಜಿ ಸದಸ್ಯೆ ಸಿ.ಕೆ.ಕುಸುಮಾರಾಣಿ, ಮಂಗಳೂರು ಶಕ್ತಿ ಎಜುಕೇಶನ್ ಟ್ರಸ್ಟ್‌ನ ಆಡಳಿತಾಧಿಕಾರಿ ಜನಾರ್ದನ ಆಚಾರ್, ಪ್ರಾಂಶುಪಾಲರಾದ ಲಕ್ಷ್ಮೀಪ್ರಸನ್ನ ಇತರರಿದ್ದರು.