ಸರ್ವ ಸಮಾಜಕ್ಕೆ ಆಧ್ಯಾತ್ಮಿಕ ಬಲ ತುಂಬಿದ ಲಿಂ. ಚನ್ನವೀರ ಸ್ವಾಮೀಜಿ

ಅಕ್ಕಿಆಲೂರ: ಸರ್ವ ಸಮಾಜಕ್ಕೆ ಆಧ್ಯಾತ್ಮಿಕ ಬಲ ತುಂಬಿದ ಲಿಂ. ಚನ್ನವೀರ ಸ್ವಾಮೀಜಿ ಅವರು ಶಿವಯೋಗ ಮಂದಿರದಲ್ಲಿನ ಶಿಕ್ಷಣದ ಒಂದು ಭಾಗವಾಗಿದ್ದಾರೆ ಎಂದು ಹುಬ್ಬಳ್ಳಿ ಮೂರು ಸಾವಿರಮಠದ ಗುರುಸಿದ್ಧ ರಾಜಯೋಗೀಂದ್ರ ಶ್ರೀ ಅಭಿಪ್ರಾಯ ಪಟ್ಟರು.

ಪಟ್ಟಣದ ಲಿಂ. ಚನ್ನವೀರ ಸ್ವಾಮೀಜಿಗಳ ಜನ್ಮಶತಮಾನೋತ್ಸವದ ಪ್ರಯುಕ್ತ ಸ್ಥಳೀಯ ವಿರಕ್ತಮಠದಲ್ಲಿ ಗುರುವಾರ ನಡೆದ ಹಾನಗಲ್ಲ ಕುಮಾರೇಶ್ವರರ ಜೀವನ ದರ್ಶನ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ನಾಡಿನಾದ್ಯಂತ ಮಠಗಳಿಗೆ ಪೀಠಾಧ್ಯಕ್ಷರಾಗಲು ಧಾರ್ವಿುಕ ಶಿಕ್ಷಣ ದೊರೆಯುವ ಹಾನಗಲ್ಲ ಕುಮಾರ ಶಿವಯೋಗಿಗಳು ಸ್ಥಾಪಿಸಿದ ಶಿವಯೋಗ ಮಂದಿರಲ್ಲಿ, ಅಕ್ಕಿಆಲೂರಿನ ಲಿಂ. ಚನ್ನವೀರ ಸ್ವಾಮೀಜಿ ಪ್ರತಿಪಾದಿಸುತ್ತಿದ್ದ ಮೌನ ಅನುಷ್ಠಾನ, ಲಿಂಗಪೂಜಾನುಷ್ಠಾನ, ಸರ್ವ ಸಮಾಜವನ್ನು ಉದ್ಧರಿಸುವ ಶಿಕ್ಷಣ ದೊರೆಯುತ್ತಿದೆ. ಚನ್ನವೀರ ಸ್ವಾಮೀಜಿ ಕೇವಲ ಕಾವಿ ತೊಟ್ಟ ಸ್ವಾಮೀಜಿಗಿಂತ ಸ್ವಾಮಿತ್ವದ ಘನತೆ ಹೆಚ್ಚಿಸಿದ ದೈವತ್ವ ಎಂದು ಹೇಳಿದರು.

ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಡಿ. 7ರ ವರೆಗೆ ಜರುಗುತ್ತಿರುವ ಲಿಂ. ಚನ್ನವೀರ ಸ್ವಾಮೀಜಿಗಳ ಜನ್ಮಶತಮಾನೋತ್ಸವ ಕೇವಲ ಸಮಾರಂಭಗಳ ವೈಭವವಲ್ಲ. ಅಧರ್ಮದ ಹಾದಿಯಲ್ಲಿ ನಡೆಯುವ ಮನುಷ್ಯಾತ್ಮವನ್ನು ದೇವಾತ್ಮ ಮಾಡುವ ಆಧ್ಯಾತ್ಮಿಕ ವೇದಿಕೆ. ಇಂತಹ ಮೌಲ್ಯಯುತ ಕಾರ್ಯಕ್ರಮ ನಾಡಿನ ಸುವರ್ಣಾಕ್ಷರದಲ್ಲಿ ದಾಖಲಾಗಲಿದೆ ಎಂದು ಹೇಳಿದರು. ನೀಲಗುಂದದ ಚನ್ನಬಸವ ಸ್ವಾಮೀಜಿ ಮಾತನಾಡಿದರು.

ಲಿಂಗನಾಯಕನಹಳ್ಳಿಯ ಚನ್ನವೀರ ಶ್ರೀ, ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ, ಬಾಳೂರಿನ ಕುಮಾರ ಶ್ರೀ, ಮೂಲೆಗದ್ದೆಯ ಚನ್ನಬಸವ ಸ್ವಾಮೀಜಿ, ಕೂಡಲದ ಗುರುಮಹೇಶ್ವರ ಶಿವಾಚಾರ್ಯ ಶ್ರೀ, ಮುತ್ತಿನಕಂತಿಗುರುಪೀಠದ ಚಂದ್ರಶೇಖರ ಶಿವಾಚಾರ್ಯರು, ಮಾಜಿ ಶಾಸಕ ಮನೋಹರ ತಹಶೀಲ್ದಾರ, ಜಿಪಂ ಸದಸ್ಯ ಟಾಕನಗೌಡ ಪಾಟೀಲ, ಗ್ರಾಪಂ ಅಧ್ಯಕ್ಷ ಪ್ರದೀಪ ಶೇಷಗಿರಿ, ಗ್ರಾಪಂ ಉಪಾಧ್ಯಕ್ಷೆ ಸರೋಜಾ ಪಾಟೀಲ, ಇತರರಿದ್ದರು.