ಸನಾತನ ಧರ್ಮ, ಸಂಸ್ಕೃತಿಯನ್ನು ಬೆಳೆಸಿ

ಚನ್ನರಾಯಪಟ್ಟಣ: ರಾಮಾಯಣ ಹಾಗೂ ಮಹಾಭಾರತದಂತಹ ಪುರಾಣ ಕಾವ್ಯಗಳನ್ನು ಮಕ್ಕಳಿಗೆ ಹೇಳುವ ಮೂಲಕ ಸನಾತನ ಧರ್ಮ, ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥಸ್ವಾಮೀಜಿ ಹೇಳಿದರು.

ಶ್ರೀಕ್ಷೇತ್ರ ಕಬ್ಬಳಿಯ ಶ್ರೀ ಬಸವೇಶ್ವರಸ್ವಾಮಿ ಕಲ್ಯಾಣ ಮಂಟಪದಲ್ಲಿ ಶ್ರೀ ಬಸವೇಶ್ವರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯು ಶನಿವಾರ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಂಸ್ಕೃತಿಯು ಸನಾತನ ಧರ್ಮದ ತಳಹದಿಯ ಮೇಲೆ ನಿಂತಿದೆ ಎಂದರು.

ಎಲ್ಲ ಧರ್ಮಗಳ ಸಾರವು ಒಂದೇ ಆಗಿದ್ದು, ಸನ್ಮಾರ್ಗದಲ್ಲಿ ನಡೆಯುವುದರ ಜತೆಗೆ ಪ್ರೀತಿ-ಬಾಂಧವ್ಯದೊಂದಿಗೆ ಬದುಕುವುದೇ ಎಲ್ಲ ಧರ್ಮಗಳ ಮೂಲ ಉದ್ದೇಶವಾಗಿದೆ. ಶಾಲೆಗಳಲ್ಲಿ ಮೊದಲು ಸಂಸ್ಕೃತಿ, ಆಚಾರ ವಿಚಾರಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಇಲ್ಲವಾದರೆ ಭವಿಷ್ಯದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಇನ್ನೂ ಹೆಚ್ಚಾಗಲಿವೆ ಎಂದರು.

ಶಾಲೆಯ ಸುಮಾರು 250ಕ್ಕೂ ಹೆಚ್ಚು ಪುಟಾಣಿಗಳು ಕೃಷ್ಣ ಹಾಗೂ ರಾಧೆಯ ವೇಷ ಧರಿಸಿ ಗಮನಸೆಳೆದರು. ಶ್ರೀಕ್ಷೇತ್ರ ಕಬ್ಬಳಿ ಮಠದ ಶ್ರೀ ಶಿವಪತ್ರನಾಥ ಸ್ವಾಮೀಜಿ, ದಿಡಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಆರ್.ರತ್ನರಾಜ್, ಮುಖ್ಯಶಿಕ್ಷಕ ಟಿ.ತಿಮ್ಮೇಗೌಡ, ಸಹಶಿಕ್ಷಕರಾದ ಮಧುಸೂದನ್, ಅಣ್ಣಯ್ಯ, ಹರೀಶ್.ಡಿ.ಕೆ, ಶಂಷುದ್ದೀನ್, ಗಣೇಶ್, ಧನಲಕ್ಷ್ಮೀ, ಡಿ.ಎಂ.ಅನುಪಮಾ, ಕವಿತಾ, ಸವಿತಾ ಇದ್ದರು.