ರೋಟಾ ವೈರಸ್‌ನಿಂದ 78 ಸಾವಿರ ಮಕ್ಕಳು ಸಾವು

ಚನ್ನರಾಯಪಟ್ಟಣ: ರೋಟಾ ವೈರಸ್ ಅಥವಾ ಅತಿಸಾರ ಭೇದಿಯಿಂದ ದೇಶದಲ್ಲಿ ಪ್ರತಿವರ್ಷ ಸುಮಾರು 78 ಸಾವಿರ ಮಕ್ಕಳು ಸಾವಿಗೀಡಾಗುತ್ತಿವೆ ಎಂದು ಮಕ್ಕಳ ತಜ್ಞೆ ಡಾ.ಮಾಲಿನಿ ಮಾಹಿತಿ ನೀಡಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಹಾಗೂ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರೋಟಾ ವೈರಸ್ ಲಸಿಕೆ ಪರಿಚಯ ಹಾಗೂ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ರೋಟಾ ವೈರಾಣುವಿನ ಸೋಂಕು ಹಾಗೂ ಭೇದಿ ಯಾವಾಗ ಬೇಕಾದರೂ ಕಾಣಿಸಿಕೊಳ್ಳಲಿದ್ದು, ಚಳಿಗಾಲದಲ್ಲಿ ಹೆಚ್ಚಾಗಿ ಹರಡಲಿದೆ ಎಂದು ತಿಳಿಸಿದರು.

ರೋಟಾ ಎಂಬ ವೈರಾಣು ಸುಲಭವಾಗಿ ಹರಡಲಿದ್ದು, ಮಕ್ಕಳ ದೇಹ ಸೇರಿದ ನಂತರ 1-3 ದಿನಗಳಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಳ್ಳಲಿದೆ. ತೀವ್ರ ಸ್ವರೂಪದ ಭೇದಿಯ ಜತೆಗೆ ಜ್ವರ ಹಾಗೂ ವಾಂತಿಯೂ ಆಗಲಿದೆ. ಆಗಾಗ್ಗೆ ಮಗುವಿಗೆ 3 ರಿಂದ 7 ದಿನ ಕಾಲ ಹೊಟ್ಟೆ ನೋವು ಕಾಣಿಸಿಕೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಒಂದು ಮಗುವಿನಿಂದ ಮತ್ತೊಂದು ಮಗುವಿಗೆ, ಕಲುಷಿತ ನೀರು, ಆಹಾರ ಹಾಗೂ ಕೊಳೆಯಾದ ಕೈಗಳಿಂದ ವೈರಾಣು ಹರಡಲಿದ್ದು, ರೋಟಾ ವೈರಸ್‌ನಿಂದ ಆಗುವ ಭೇದಿಗೆ ಯಾವುದೇ ನಿರ್ಧಿಷ್ಠ ಚಿಕಿತ್ಸೆ ಇಲ್ಲ. ಮುನ್ನೆಚ್ಚರಿಕೆ ವಹಿಸಿ ಲಸಿಕೆ ಹಾಕಿಸುವುದು ಅತ್ಯಾಗತ್ಯ. ಸೋಂಕು ತಗಲಿದ ಮಗುವಿಗೆ ಒಆರ್‌ಎಸ್, 14 ದಿನ ಜಿಂಕ್ ಮಾತ್ರೆ ಹಾಗೂ ಸಿರಾಫ್ ಮಾದರಿಯಲ್ಲಿ 5 ಎಂಎಲ್ ಔಷಧ ನೀಡಬೇಕಿದೆ. ಭೇದಿ ತೀವ್ರ ಸ್ವರೂಪದಲ್ಲಿದ್ದರೆ ಅಂತಹ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಐವಿ ಫ್ಲೂಯಿಡ್ ನೀಡಬೇಕಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮಾ ಬಾಲಕೃಷ್ಣ, ಸಾಮಾನ್ಯ ತಿಳುವಳಿಕೆ ಬರುವವರೆಗೆ ಮಕ್ಕಳನ್ನು ಹೆಚ್ಚಿನ ಜಾಗ್ರತೆ ವಹಿಸಿ ಕಾಪಾಡಬೇಕು. ಮಕ್ಕಳ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಲ್ಲಿ ತಕ್ಷಣ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡುವ ಮೂಲಕ ಪಾಲನೆ ಮಾಡಬೇಕು. ನಿರ್ಲಕ್ಷೃ ಮಾಡುವುದರಿಂದ ಅಪಾಯ ಹೆಚ್ಚು ಎಂದರು.

ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಜಯರಾಮ್, ಪುರಸಭೆ ಮಾಜಿ ಸದಸ್ಯ ಸಿ.ಎನ್.ಶಶಿಧರ್, ಪರಿಸರ ಪ್ರೇಮಿ ಸಿ.ಎನ್.ಅಶೋಕ್, ಸ್ಥಳೀಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್.ವೆಂಕಟೇಶ್‌ಮೂರ್ತಿ, ಪುರಸಭೆಯ ಮುಖ್ಯಾಧಿಕಾರಿ ಎಂ.ಕುಮಾರ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಿ.ಮಹೇಶ್, ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ಡಾ.ಎಸ್.ರವಿ, ಖಜಾಂಚಿ ಸಿ.ಎನ್.ನಾಗರಾಜ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪುಷ್ವಲತಾ, ಸಿಬ್ಬಂದಿ ಇತರರಿದ್ದರು.

ಪ್ರತಿ ಗುರುವಾರ ತಾಲೂಕಿನ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ರೋಟಾ ವೈರಸ್‌ನ ಲಸಿಕೆ ಉಚಿತವಾಗಿ ಹಾಕಲಾಗುವುದು. ಜತೆಗೆ ಪ್ರತಿ ತಿಂಗಳ ಮೊದಲ ಮಂಗಳವಾರ ಉಪಕೇಂದ್ರಗಳಲ್ಲಿ ಮಕ್ಕಳಿಗೆ ಲಸಿಕೆ ನೀಡಲಾಗವುದು.
ಡಾ.ಎ.ಎನ್.ಕಿಶೋರ್‌ಕುಮಾರ್ ತಾಲೂಕು ಆರೋಗ್ಯಾಧಿಕಾರಿ