ಸುಂದರ ಬದುಕು ಭಗವಂತ ನೀಡಿರುವ ಕೊಡುಗೆ

ಚನ್ನರಾಯಪಟ್ಟಣ: ಸುಂದರವಾದ ಬದುಕನ್ನು ಭಗವಂತ ನಮಗೆ ಕೊಟ್ಟಿರುವ ಕೊಡುಗೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ತಾಲೂಕಿನ ನುಗ್ಗೇಹಳ್ಳಿಯ ಶ್ರೀ ರಂಭಾಪುರಿ ಶಾಖಾ ಪುರವರ್ಗ ಹಿರೇಮಠದಲ್ಲಿ ಮಾತೃಶ್ರೀ ಸಾವಿತ್ರಮ್ಮನವರ ಪ್ರಥಮ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಇಷ್ಟಲಿಂಗ ಪೂಜೆಯೊಂದಿಗೆ ಗುರುವಾರ ಆಯೋಜಿಸಿದ್ದ ಧರ್ಮ ಜಾಗೃತಿ ಭಾವೈಕ್ಯ ಸಮ್ಮೇಳನವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಅರಿತು ಬಾಳಿದರೆ ಬದುಕು ಬಂಗಾರ, ಮರೆತು ನಡೆದರೆ ಬಾಳು ಬಂಧನ. ಇಲ್ಲಿ ಯಾರಿಗೂ ಜೀವನ ಶಾಶ್ವತವಲ್ಲ. ಆದರೆ ಪಾಲಿಸಿಕೊಂಡು ಬಂದ ಮೌಲ್ಯಯುತ ಆದರ್ಶಗಳು ಶಾಶ್ವತವಾಗಿ ಉಳಿಯಲಿವೆ. ಬದುಕಿನಲ್ಲಿ ಸನ್ಮಾರ್ಗದಲ್ಲಿ ನಡೆಯುವುದು ಬಹುಮುಖ್ಯ ಎಂದು ತಿಳಿಸಿದರು.

ಹುಟ್ಟಿನ ಬಳಿಕ ಹಿಂಬಾಲಿಸುವ ಸಾವು ಯಾರನ್ನೂ ಬಿಟ್ಟಿಲ್ಲ. ಹುಟ್ಟು ಹಾಗೂ ಸಾವಿನ ನಡುವೆ ಇದ್ದಷ್ಟು ದಿನಗಳು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು. ಅವರವರ ಕರ್ತವ್ಯ ಪೂರೈಸಿಯೇ ತೀರುವುದು ದೇವರ ಪ್ರೇರಣೆಯಾಗಿರುತ್ತದೆ ಎಂದು ಹೇಳಿದರು.

ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಬದುಕಿದ್ದಷ್ಟು ದಿನ ಹೇಗೆ ಬಾಳಿದನೆಂಬುದು ಮುಖ್ಯವಾಗಿರುತ್ತದೆ. ಹುಟ್ಟಿದಾಗ ಉಸಿರಿರುತ್ತದೆ. ಹೆಸರಿರುವುದಿಲ್ಲ. ಅಗಲಿದಾಗ ಉಸಿರಿರುವುದಿಲ್ಲ. ಆದರೆ, ಆತನ ಸಾಧನೆಯಿಂದ ಹೆಸರು ಚಿರವಾಗಿ ಉಳಿಯುವುದರಿಂದ ಬದುಕು ಸಾರ್ಥಕವಾಗುತ್ತದೆ ಎಂದರು.

ಮಾತೃಶ್ರೀ ಸಾವಿತ್ರಮ್ಮನವರು ಧರ್ಮ, ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ಹೆತ್ತ ಮಕ್ಕಳಿಗಷ್ಟೇ ಅಲ್ಲ ಸಮಾಜಕ್ಕೆ ಅರಿವು ತುಂಬುವ ಕಾರ್ಯ ಮಾಡಿದ್ದಾರೆ. ಅವರ ಆದರ್ಶಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಹೆಗಲ ಮೇಲಿದೆ ಎಂದು ಹೇಳಿದರು.

ನುಗ್ಗೇಹಳ್ಳಿ ಪುರವರ್ಗ ಹಿರೇಮಠದ ಶ್ರೀ ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜನ್ಮ ನೀಡಿದ ತಾಯಿ, ಬೆಳೆಸಿದ ತಂದೆ ಹಾಗೂ ಧರ್ಮ, ಸಂಸ್ಕೃತಿ ಹಾಗೂ ಸಂಸ್ಕಾರವನ್ನು ದೀಕ್ಷೆ ನೀಡಿದ ಗುರುವನ್ನು ಗೌರವದಿಂದ ಕಾಣಬೇಕು. ಇದರಿಂದ ಮಾತ್ರ ಬದುಕಿನಲ್ಲಿ ಮುಕ್ತಿ ಹೊಂದಲು ಸಾಧ್ಯ ಎಂದರು.

2018-19ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾಗಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಡಾಕ್ಟರೇಟ್ ಪದವಿ ಸ್ವೀಕರಿಸಿರುವ ನುಗ್ಗೇಹಳ್ಳಿ ಪುರವರ್ಗ ಹಿರೇಮಠದ ಶ್ರೀ ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು.

ಎಡೆಯೂರು ಶಾಖಾ ಮಠದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಶಿವಗಂಗೆಯ ಮೆಲಣಗವಿ ಮಠದ ಶ್ರೀ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಬಾಳೆಹೊನ್ನೂರು ತೆಂಡೆಕೆರೆ ಶಾಖಾ ಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ದೊಡ್ಡಬಳ್ಳಾಪುರ ಶಾಖಾ ಮಠದ ಶ್ರೀ ನಿರಂಜನ ಸ್ವಾಮೀಜಿ, ಅಂಬಲಾ ದೇವರಹಳ್ಳಿ ಶಾಖಾ ಮಠದ ಶ್ರೀ ಉಜೈನೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಸಾಯಿಬಾಬಾ ಮಂದಿರದ ಗುರುಮೂರ್ತಿ ಗುರೂಜಿ, ಅರಸೀಕೆರೆ ತಾಲೂಕು ವೀರಶೈವ ಮುಂಖಂಡ ಕೆ.ವಿ.ನಿರ್ವಾಣಸ್ವಾಮಿ, ಚನ್ನಮಲ್ಲಪ್ಪ, ನುಗ್ಗೇಹಳ್ಳಿ ಹೋಬಳಿ ವೀರಶೈವ ಸಮಾಜದ ಅಧ್ಯಕ್ಷ ಗಿರೀಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಸವಲಿಂಗಪ್ಪ, ನಾಗರಾಜ್, ಭರತ್‌ಗೌಡ ಇತರರು ಹಾಜರಿದ್ದರು.