ಲಾಕಪ್ ಡೆತ್ ಪ್ರಕರಣ ಇತ್ಯರ್ಥ

ಚನ್ನರಾಯಪಟ್ಟಣ: ಪೊಲೀಸರ ವಶದಲ್ಲಿದ್ದಾಗ ಮೃತಪಟ್ಟ ತಾಲೂಕಿನ ಬೆಳಗುಲಿ ಗ್ರಾಮದ ಅವಿನಾಶ್ (28) ಅವರ ಅಂತ್ಯಕ್ರಿಯೆ ಶನಿವಾರ ಸಂಜೆ 5 ಗಂಟೆಗೆ ಸ್ವಗ್ರಾಮದಲ್ಲಿ ನೆರವೇರಿತು.
ಕಳ್ಳತನ ಪ್ರಕರಣ ಆರೋಪಿಯಾಗಿದ್ದ ಅವಿನಾಶ್ ಶುಕ್ರವಾರ ಸಂಜೆ ಪೊಲೀಸ್ ವಶದಲ್ಲಿದ್ದಾಗಲೇ ಮೃತಪಟ್ಟಿದ್ದರು. ಶುಕ್ರವಾರ ರಾತ್ರಿ ಹಾಸನದ ಹಿಮ್ಸ್‌ನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಪೊಲೀಸ್ ಹಾಗೂ ಕುಟುಂಬಸ್ಥರ ನಡುವೆ ರಾಜಿ ಸಂಧಾನವಾಗಿ ಪ್ರಕರಣ ಇತ್ಯರ್ಥ ಕಂಡಿದೆ.
ಲಾಕಪ್ ಡೆತ್ ಆರೋಪ?: ಯುವಕ ಅವಿನಾಶ್‌ನನ್ನು ಲಾಕಪ್ ಡೆತ್ ಮಾಡಲಾಗಿದೆ ಎಂದು ಆರೋಪಿಸಿ ಬೆಳಗುಲಿ ಗ್ರಾಮಸ್ಥರು ಶನಿವಾರ ಬೆಳಗ್ಗೆ ನುಗ್ಗೆಹಳ್ಳಿ ಪೊಲೀಸ್ ಠಾಣೆ ಬಳಿ ಪ್ರತಿಭಟನೆಗೆ ನಿರ್ಧರಿಸಿದ್ದರು. ಆದರೆ ಪೊಲೀಸ್ ಅಧಿಕಾರಿಗಳು ಗೊಂದಲಕ್ಕೆ ಅವಕಾಶ ಮಾಡಿಕೊಡದೆ ಸಮಸ್ಯೆಗೆ ಪರಿಹಾರ ಕಲ್ಪಿಸಿದರು.
ಡಿವೈಎಸ್‌ಪಿ ಶಶಿಧರ್ ಮಾತನಾಡಿ, ಪೊಲೀಸರ ಯಾವುದೇ ತಪ್ಪಿನಿಂದ ಅವಿನಾಶ್ ಮೃತಪಟ್ಟಿಲ್ಲ. ಕಳ್ಳತನ ಪ್ರಕರಣ ಆರೋಪಿಯಾಗಿದ್ದ ಕಾರಣ ಪೊಲೀಸರು ಬಂಧಿಸಲು ಹೋಗಿದ್ದರು. ಚನ್ನರಾಯಪಟ್ಟಣದ ಬೈಪಾಸ್‌ನಲ್ಲಿ ಸೆರೆ ಸಿಕ್ಕ ಆತನನ್ನು ಪೊಲೀಸ್ ಠಾಣೆಗೆ ಕರೆತರುತ್ತಿದ್ದರು. ಈ ಸಂದರ್ಭದಲ್ಲೇ ಹೃದಯಾಘಾತವಾಗಿ ಕುಸಿದು ಬಿದ್ದ ಪರಿಣಾಮ ಆಸ್ಪತ್ರೆಗೆ ಕರೆತರುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಅನಿವಾರ್ಯವಾಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನಕ್ಕೆ ಕಳುಹಿಸಿಕೊಡಲಾಯಿತು. ಪ್ರಕರಣ ಸಂಬಂಧ ನುಗ್ಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 176 ರ ಅಡಿ ಪ್ರಕರಣ ದಾಖಲಾಗಿದೆ ಎಂದರು.
ಬಿಗಿ ಭದ್ರತೆ: ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಅಹಿತಕರ ಘಟನೆ ಸಂಭವಿಸಬಾರದೆಂದು ಎಚ್ಚರ ವಹಿಸಿದ್ದ ಪೊಲೀಸ್ ಇಲಾಖೆ ನುಗ್ಗೆಹಳ್ಳಿ ಠಾಣೆಗೆ ಅಗತ್ಯ ಬಿಗಿ ಭದ್ರತೆ ಕಲ್ಪಿಸಿತ್ತು. ಕೆಎಸ್‌ಆರ್‌ಪಿ ತುಕಡಿ, ತಾಲೂಕು ವ್ಯಾಪ್ತಿಯ ಎಲ್ಲ ಪಿಎಸ್‌ಐ ಹಾಗೂ ನೂರಕ್ಕೂ ಅಧಿಕ ಪೇದೆಗಳ ನೇಮಕ ಮಾಡಲಾಗಿತ್ತು.

Leave a Reply

Your email address will not be published. Required fields are marked *