ಅಕ್ರಮ ಸಕ್ರಮ ಯೋಜನೆಗೆ 2 ಸಾವಿರ ಅರ್ಜಿ

ಚನ್ನರಾಯಪಟ್ಟಣ: ತಾಲೂಕಿನ 2 ಸಾವಿರ ರೈತರು ಅಕ್ರಮ ಸಕ್ರಮ ಯೋಜನೆಗೆ ಅರ್ಜಿ ಸಲ್ಲಿಸಿ ಹಣ ಪಾವತಿಸಿದ್ದಾರೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಸೆಸ್ಕ್ ವಿಭಾಗೀಯ ಕಚೇರಿ ಆವರಣದಲ್ಲಿ ಪಟ್ಟಣ ವ್ಯಾಪ್ತಿ, ಕಸಬಾ ಹೋಬಳಿ, ದಂಡಿಗನಹಳ್ಳಿ ಹೋಬಳಿ ಕೆಲ ಗ್ರಾಮಗಳ ಅನುಕೂಲಕ್ಕಾಗಿ 12.5 ಎಂವಿಎ ಟಿಸಿಯಿಂದ ಹೆಚ್ಚುವರಿಯಾಗಿ 20 ಎಂವಿಎ ವಿದ್ಯುತ್ ಪರಿವರ್ತಕ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಸಾಲಿನಲ್ಲಿ 1600 ರೈತರು ಅಕ್ರಮದಿಂದ ಸಕ್ರಮ ಮಾಡಿಕೊಳ್ಳಲು ಅರ್ಜಿ ನೀಡಿದ್ದು ಶೇ.95ರಷ್ಟು ಸಕ್ರಮವಾಗಿವೆ. ಪ್ರಸಕ್ತ ಸಾಲಿನಲ್ಲಿಯೂ ಹೆಚ್ಚು ರೈತರು ಆಸಕ್ತಿ ತೋರಿರುವುದು ಶ್ಲಾಘನೀಯ ಎಂದರು.
11ಕೋಟಿ ರೂ.ವೆಚ್ಚದಲ್ಲಿ ನೂತನ ಟಿಸಿ ಅಳವಡಿಸಿದ್ದು ರೈತರು ಕೃಷಿ ಚಟುವಟಿಕೆಗಾಗಿ ಕೊಳವೆಬಾವಿಯಿಂದ ನೀರೆತ್ತಲು ಬಹಳ ಅನುಕೂಲವಾಗಲಿದೆ. ಕಸಬಾ ಹೋಬಳಿ, ದಂಡಿಗನಹಳ್ಳಿ ಹೋಬಳಿ ಆನೇಕರೆ ಗ್ರಾಮ ಪಂಚಾಯತಿ ವ್ಯಾಪ್ತಿ ಹಾಗೂ ಬಳದರೆ ಗ್ರಾಮ ಪಂಚಾಯಿತಿಯ ಕೆಲ ಗ್ರಾಮಕ್ಕೆ ಹೊಸ ಟಿಸಿಯಿಂದ 7 ತಾಸು ನಿರಂತರವಾಗಿ ವಿದ್ಯುತ್ ನೀಡಲಾಗುವುದು ಎಂದರು.
ಬಾಗೂರಿನಲ್ಲಿನ ಉಪ ವಿಭಾಗೀಯ ಕಚೇರಿಯಲ್ಲಿ ವಿದ್ಯುತ್ ಬಿಲ್ ಪಾವತಿ ಸೌಲಭ್ಯ ಇರಲಿಲ್ಲ, ಅದಕ್ಕೂ ಅವಕಾಶ ಕಲ್ಪಿಸಲಾಗಿದೆ. ಹಿರೀಸಾವೆ ಹೋಬಳಿ ಕೇಂದ್ರ, ಮಟ್ಟನವಿಲೆ, ಜುಟ್ಟನಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ನೂತನವಾಗಿ ಉಪ ವಿಭಾಗೀಯ ಕಚೇರಿ ತೆರೆಯಲಾಗುವುದು ಎಂದರು.
ತಾಲೂಕಿನ ರಾಂಪುರ ಹಾಗೂ ಹಿರೀಸಾವೆ ಹೋಬಳಿ ದಿಡಗ ವಿದ್ಯುತ್ ವಿತರಣಾ ಕೇಂದ್ರದಲ್ಲಿ 8 ಎಂವಿಎ ಪರಿವರ್ತಕವಿದೆ, ಅದನ್ನು 12.5 ಎಂವಿಎಗೆ ಉನ್ನತೀಕರಿಸಲಾಗುವುದು, ಎಂ.ಬಿ.ಕಾವಲು ಮತ್ತು ಎಂ.ದಾಸಾಪುರದಲ್ಲಿ ಹೊಸದಾಗಿ ವಿದ್ಯುತ್ ವಿತರಣಾ ಉಪಕೇಂದ್ರ ತೆರೆಯಲಾಗುವುದು, ಶಟ್ಟಿಹಳ್ಳಿ ಗ್ರಾಮದ ಬಳಿ 20 ಗ್ರಾಮಗಳಿಗೆ ತೊಂದರೆಯಾಗುತ್ತಿದ್ದು ಅದನ್ನು ತುರ್ತಾಗಿ ಬಗೆಹರಿಸುವುದಾಗಿ ಭರವಸೆ ನೀಡಿದರು.
ಶಾಲಾ ಆವರಣದಲ್ಲಿ ವಿದ್ಯುತ್ ತಂತಿ ಹಾದು ಹೋಗಿದ್ದರೆ ಕಂಬಗಳನ್ನು ಬದಲಾವಣೆ ಮಾಡಲಾಗುವುದು, ಸಾರ್ವಜನಿಕರಿಗೆ ತೊಂದರೆ ಆಗುವ ಸ್ಥಳದಲ್ಲಿ ವಿದ್ಯುತ್ ಕಂಬಗಳಿದ್ದರೆ ಸ್ಥಳಾಂತರ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಪಾಲಕ ಇಂಜಿನಿಯರ್ ಅಂಬಿಕಾ, ಎಒ ನರೇಂದ್ರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹರೀಶ್, ಮಲ್ಲಿಕಾರ್ಜುನಾಚಾರ್, ಪರಮೇಶ್ ಇತರರಿದ್ದರು.