ಶುಂಠಿಗೆ ಮೊರೆ ಹೋದ ರೈತರು

ಚನ್ನರಾಯಪಟ್ಟಣ: ತಾಲೂಕಿನಲ್ಲಿ ಮುಂಗಾರು ಪೂರ್ವದಿಂದಲೂ ವಾಡಿಕೆ ಮಳೆಯಾಗದ ಪರಿಣಾಮ, ಯಾವುದೇ ಬೆಳೆಗಳು ಬಿತ್ತನೆಯಾಗಲಿಲ್ಲ. ಆದರೆ, ಧೃತಿಗೆಡದ ರೈತರು ನೀರಿನ ಕೊರತೆ ನಡುವೆಯೂ ಅಗತ್ಯ ನೀರಿನ ಆಸರೆಯಲ್ಲಿ ಶುಂಠಿ ಬೆಳೆಯಲು ಮುಂದಾಗಿದ್ದಾರೆ.


ಶುಂಠಿಗೆ ಪ್ರಸ್ತುತ ನಿರೀಕ್ಷೆಗೂ ಮೀರಿದ ಬೆಲೆ ಸಿಗುತ್ತಿದೆ. ಸದ್ಯದ ಬೆಲೆಯನ್ನೇ ನಂಬಿರುವ ರೈತರು ಲಾಭದ ನಿರೀಕ್ಷೆಯೊಂದಿಗೆ ಹೆಚ್ಚು ಪ್ರದೇಶದಲ್ಲಿ ಶುಂಠಿ ಬಿತ್ತನೆ ಮಾಡಿದ್ದಾರೆ. ಆದರೆ, ಫಸಲು ಬರುವ ವೇಳೆಗೆ ಹೇರಳವಾಗಿ ಶುಂಠಿ ಉತ್ಪಾದನೆಯಾಗುವ ಸಾಧ್ಯತೆಯಿದ್ದು, ಬೆಲೆ ಕುಸಿಯುವ ಚಿಂತೆ ಕಾಡುತ್ತಿದೆ.


ಒಂದು ಎಕರೆಯಲ್ಲಿ ಶುಂಠಿ ಬೆಳೆಯಲು ಉಳುಮೆ, ಬಿತ್ತನೆ, ಗೊಬ್ಬರ, ತುಂತುರು ನೀರಾವರಿ ಸೇರಿದಂತೆ ಪ್ರಾರಂಭದಲ್ಲಿಯೇ 3 ಲಕ್ಷ ರೂ.ಗಳಿಗೂ ಅಧಿಕ ಹಣ ಖರ್ಚಾಗಲಿದೆ. ನಂತರದ ದಿನಗಳಲ್ಲಿ ಕಳೆ ತೆಗೆಯುವುದು, ಗೊಬ್ಬರ ಹಾಗೂ ನಿರ್ವಹಣೆಗೆ ಪ್ರತ್ಯೇಕ ವೆಚ್ಚ ತಗುಲಲಿದೆ ಎನ್ನುತ್ತಾರೆ ಶುಂಠಿ ಬೆಳೆಗಾರ ಗೂರುಮಾನಹಳ್ಳಿ ಶಂಕರ್.


ಒಂದು ಎಕರೆಯಲ್ಲಿ ಬಿತ್ತನೆಗೆ ತಲಾ 60 ಕೆ.ಜಿ.ಯ ಸುಮಾರು 32 ಚೀಲದಷ್ಟು ಶುಂಠಿ ಬೇಕಾಗಲಿದ್ದು, ಒಂದು ಚೀಲದ ಬೆಲೆ 6ರಿಂದ 7 ಸಾವಿರ ರೂ. ದಾಟಿದೆ.


ಹದಗೊಳಿಸಿದ ಜಮೀನಿನಲ್ಲಿ ಶುಂಠಿ ಬಿತ್ತನೆ ಮಾಡಿದ ದಿನದಿಂದ ಮೊಳಕೆಯೊಡೆದು ಎಲೆಗಳು ಮೇಲೆ ಬರುವವರೆಗೂ ಅಂದರೆ, ಬಿತ್ತನೆ ದಿನದಿಂದ ಸುಮಾರು ಒಂದೂವರೆ ತಿಂಗಳ ಕಾಲ ಪ್ರತಿ ದಿನವೂ ತಪ್ಪಿಸದಂತೆ ದಿನದಲ್ಲಿ ಅರ್ಧಗಂಟೆ ಕಾಲ ತುಂತುರು ನೀರಾವರಿ ವ್ಯವಸ್ಥೆ ಮೂಲಕ ನೀರು ಹಾಯಿಸಲೇಬೇಕಿದೆ. ನಂತರದ ದಿನಗಳಲ್ಲಿ ದಿನ ಬಿಟ್ಟು ದಿನ ಒಂದು ಗಂಟೆ ಕಾಲ ನೀರು ಹಾಯಿಸಬೇಕಿದೆ.


ಶುಂಠಿ ಎಲೆಗಳು ಹಗಲವಾಗಿ ಹರಡಿಕೊಳ್ಳುವ ತನಕ ಕಳೆ ತೆಗೆಯಬೇಕಿದ್ದು, ಕಳೆ ತೆಗೆಯದಿದ್ದಲ್ಲಿ ಬೆಳವಣಿಗೆ ಕುಂಟಿತಗೊಳ್ಳಲಿದೆ. ಒಂದು ಎಕರೆ ಪ್ರದೇಶದಲ್ಲಿ ಒಮ್ಮೆ ಕಳೆ ತೆಗೆಸಲು 5 ಸಾವಿರ ರೂ. ಖರ್ಚಾಗಲಿದೆ. ಶುಂಠಿ ಬೆಳೆದು ಎಲೆ ಕೂಡಿಕೊಳ್ಳುವ ವೇಳೆಗೆ 3-4 ಬಾರಿ ಕಳೆ ತೆಗೆಸಿಕೊಳ್ಳಲಿದೆ.


ವಾಡಿಕೆ ಮಳೆ ಸುರಿದು ಭೂಮಿಯಲ್ಲಿ ತೇವಾಂಶವಿದ್ದು, ಕೊಳವೆ ಬಾವಿಯಲ್ಲಿ ಸಾಕಷ್ಟು ನೀರಿನ ಲಭ್ಯತೆ ಇದ್ದಲ್ಲಿ ಮಾತ್ರ ಶುಂಠಿಯನ್ನು ನಿರೀಕ್ಷೆಯಂತೆ ಬೆಳೆದು ಲಾಭಾಂಶ ಕಾಣಬಹುದು. ಆದರೆ, ಕೊಳವೆಬಾವಿ ಕೈಕೊಟ್ಟರೆ ವೆಚ್ಚವಾಗಿರುವ ಲಕ್ಷಗಟ್ಟಲೆ ಹಣ ಮಣ್ಣುಪಾಲಾಗಲಿದೆ. ಜತೆಗೆ, ಜಿಡಿಮಳೆ ಹಾಗೂ ಮೋಡ ಕವಿದ ವಾತಾವರಣ ಸೃಷ್ಟಿಯಾದರೆ ರೋಗಬಾಧೆ ಕಾಣಸಿಕೊಳ್ಳುವುದರ ಜತೆಗೆ, ಬೆಳವಣಿಗೆ ಇಳಿಮುಖ ಅನುಭವಿಸಲಿದೆ ಎನ್ನುತ್ತಾರೆ ಸಾತೇನಹಳ್ಳಿ ರೈತ ರಾಮೇಗೌಡ.


ಶುಂಠಿ 7ರಿಂದ 10 ತಿಂಗಳ ಬೆಳೆಯಾಗಿದ್ದು, ಒಂದು ಚೀಲದಷ್ಟು ಬಿತ್ತನೆಗೆ ಸುಮಾರು 20 ಚೀಲದಷ್ಟು ಇಳುವರಿ ಸಿಕ್ಕರೆ ಮಾತ್ರ ಲಾಭ ಕಾಣಬಹುದು. ಅಗತ್ಯಕ್ಕಿಂತ ಹೆಚ್ಚು ನೀರು ಹಾಯಿಸುವುದರಿಂದ ರೋಗಬಾಧೆ, ಇಳುವರಿ ಕುಂಟಿತ ಕಾಣಲಿದೆ.

ಇರುಗೋಡು ಶುಂಠಿ ಹೆಚ್ಚು ಬಿತ್ತನೆ:ಶುಂಠಿಯಲ್ಲಿ ಇರುಗೋಡು, ನೀಲಿ ಇರುಗೋಡು, ಮಾರನ್ ಇನ್ನಿತರ ತಳಿಗಳಿದ್ದು, ಸದ್ಯ ತಾಲೂಕಿನಲ್ಲಿ ಇರುಗೋಡು ಶುಂಠಿಯನ್ನು ಹೆಚ್ಚಾಗಿ ಬಿತ್ತನೆ ಮಾಡಲಾಗುತ್ತಿದೆ. ಮಿತ ನೀರಿನ ಜತೆಗೆ, ವಾತಾವರಣದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಇರುಗೋಡು ಶುಂಠಿ ನಿರೀಕ್ಷೆಯ ಫಸಲು ನೀಡಲಿದೆ.
ಆದರೆ, ಮಾರನ್ ತಳಿಯ ಶುಂಠಿ ಇಳುವರಿಯಲ್ಲಿ ಕಡಿಮೆ ಇದ್ದರೂ ಹೆಚ್ಚು ಬೆಲೆ ಸಿಗಲಿದ್ದು, ವಾತಾವರಣದಲ್ಲಿ ಏರುಪೇರಾದರೆ ರೋಗಬಾಧೆ ಹೆಚ್ಚು ಕಾಡಲಿದೆ. ಸದ್ಯ ಶುಂಠಿ ಈ ಬಾರಿ ಔಷಧಗಳ ತಯಾರಿಕೆಗೆ ಹೆಚ್ಚು ರವಾನೆಯಾಗುತ್ತಿರುವುದರಿಂದ ಬೆಲೆ ತಕ್ಕಮಟ್ಟಿಗೆ ಇದ್ದೇ ಇರಲಿದೆ ಎನ್ನಲಾಗಿದೆ.

ತೆಂಗು ಬೆಳೆಗೆ ಕುತ್ತು: ಪೂರ್ವದಿಂದಲೂ ತೆಂಗಿನ ತೋಟದಲ್ಲಿ ಜಾನುವಾರುಗಳ ಮೇವಿಗೆಂದು ಜೋಳವನ್ನು ಮಾತ್ರ ಬೆಳೆಯಲಾಗುತ್ತಿತ್ತು. ಆಗ ಸಾಕಷ್ಟು ಕೊಟ್ಟಿಗೆ ಗೊಬ್ಬರ ಹಾಕುತ್ತಿದ್ದರಿಂದ ತೋಟದ ಮಣ್ಣಿನಲ್ಲಿ ಫಲವತ್ತತೆ ಸದಾ ಇರುತಿತ್ತು. ಆದರೆ, ಈಗ ತೆಂಗಿನ ತೋಟದಲ್ಲಿ ಶುಂಠಿಯನ್ನೂ ಬೆಳೆಯಲಾಗುತ್ತಿದೆ. ಅದಕ್ಕಾಗಿ ಅತಿಹೆಚ್ಚು ರಾಸಾಯನಿಕ ಗೊಬ್ಬರ, ಔಷಧ ಹಾಗು ಶುಂಠಿ ಬೆಳೆಯಿಂದ ಮಣ್ಣಿನಲ್ಲಿ ಉಂಟಾಗುವ ಖಾರ ತೆಂಗು ಬೆಳೆಯ ಮೇಲೆ ಪರಿಣಾಮ ಬೀರಲಿದೆ.

ಶುಂಠಿ ಬೆಳೆ ತೆಗೆದ ಮೇಲೆ ಸಿಗುವ ಲಾಭದಲ್ಲಿ ಶೇ.25ರಷ್ಟು ಹಣದಿಂದ ತೆಂಗಿನ ತೋಟಕ್ಕೆ ಸಾಕಷ್ಟು ಕೊಟ್ಟಿಗೆ ಗೊಬ್ಬರ, ಕೆರೆಮಣ್ಣು ಹಾಗೂ ನೀರು ಹಾಯಿಸಿ ಹಾರೈಕೆ ಮಾಡಬೇಕಿದೆ.
ಆದರೆ, ರೈತರು ಶುಂಠಿಯಿಂದ ಸಿಗುವ ಲಾಭವನ್ನು ಹಬ್ಬ-ಹುಣ್ಣಿಮೆ, ವಾಹನ-ಒಡವೆ ಖರೀದಿ ಹಾಗೂ ಮನೆ ಬಳಕೆಗೆ ಹಾಕಿ ಕೈಚೆಲ್ಲುತ್ತಿರುವ ಪರಿಣಾಮ, ನಂತರದ ವರ್ಷ ತೆಂಗಿನ ಮರಗಳಿಗೆ ಭಾರಿ ಹೊಡೆತ ಬೀಳಲಿದೆ. ಶುಂಠಿ ಬೆಳೆ ತೆಗೆದ ನಂತರ ಹಾರೈಕೆಯ ಕೊರತೆಯೇ ತೆಂಗಿನ ಮರಗಳಿಗೆ ಕುತ್ತಾಗಿ ಪರಿಣಮಿಸುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ಕೇರಳ ಮೂಲದಿಂದ ರಾಜ್ಯಕ್ಕೆ ಕಾಲಿಟ್ಟ ಶುಂಠಿ ಬೆಳೆ ತಾಲೂಕಿನ ಶೇ.15ರಿಂದ 20ರಷ್ಟು ಪ್ರದೇಶದಲ್ಲಿ ಬಿತ್ತನೆಗೊಂಡಿದೆ. ಆದರೆ, ರೈತರು ಇಲಾಖೆಯ ಶಿಫಾರಸು ಅನುಸರಿಸದೆ ಅನಗತ್ಯ ನೀರು ಹಾಗೂ ಗೊಬ್ಬರ ಬಳಕೆ ಮಾಡುತ್ತಿರುವ ಪರಿಣಾಮ ನಷ್ಟ ಅನುಭವಿಸುತ್ತಿರುವುದರ ಜತೆಗೆ, ಮಣ್ಣಿನ ಫಲವತ್ತತೆ ಕಳೆದುಕೊಳ್ಳುತ್ತಿದ್ದಾರೆ. ಬೆಳೆ ಯಾವುದೇ ಇರಲಿ ಸಂಬಂಧಪಟ್ಟ ಇಲಾಖೆಗಳಿಂದ ಮಾಹಿತಿ ಹಾಗೂ ಸಲಹೆ ಪಡೆಯುವುದು ಸೂಕ್ತ.
ಭಾನುಪ್ರಕಾಶ್, ತೋಟಗಾರಿಕೆ ಅಧಿಕಾರಿ, ಚನ್ನರಾಯಪಟ್ಟಣ ತಾಲೂಕು

ಶುಂಠಿ ಬೆಳೆಗೆ ಅಗತ್ಯ ನೀರು, ತಕ್ಕ ಗೊಬ್ಬರ, ಔಷಧ ಹಾಗೂ ಸೂಕ್ತ ನಿರ್ವಹಣೆ ಅಗತ್ಯ. ಕಳೆದ ವರ್ಷಕ್ಕಿಂತ ಈ ಬಾರಿ ಶುಂಠಿಗೆ ಬೇಡಿಕೆಯೊಂದಿಗೆ ಉತ್ತಮ ಬೆಲೆ ಸಿಗುತ್ತಿದೆ. ಆದರೆ, ತಾಲೂಕಿನಲ್ಲಿ ಈಗಷ್ಟೇ ಶುಂಠಿ ಬಿತ್ತನೆಯಾಗಿದ್ದು, ಬೆಳೆ ಕೈಗೆ ಸಿಗುವ ವೇಳೆಗೆ ಬೆಲೆ ಏನಾಗುತ್ತೋ ಗೊತ್ತಿಲ್ಲ. ಸದ್ಯ ಈಗಿನ ಬೆಲೆಯೇ ಇದ್ದರೆ ಸಾಕು. ಆದರೆ, ಈ ಬರದ ನಡುವೆ ಬೆಳೆಗೆ ನೀರು ಒದಗಿಸುವುದೇ ಕಷ್ಟವಾಗಿದೆ.
ರಾಜಣ್ಣ, ಶುಂಠಿ ಬೆಳೆಗಾರ, ಬಂಡಿಹಳ್ಳಿ

Leave a Reply

Your email address will not be published. Required fields are marked *