ರಾಮನಗರ:
ಕುಮಾರಸ್ವಾಮಿ ಅವರು ಈವರೆಗೂ ನಿಮ್ಮ ಊರಿನ ಕಡೆ ತಿರುಗಿ ನೋಡಲಿಲ್ಲ. ಈಗ ಮಗನಿಗಾಗಿ ನಿಮ್ಮ ಊರು ಹುಡುಕಿಕೊಂಡು ಬರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆಯಲ್ಲಿ ಬಿ.ವಿ ಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರ ಪರ ಡಿ.ಕೆ. ಸುರೇಶ್ ಮಂಗಳವಾರದಂದು ಪ್ರಚಾರ ಮಾಡಿದರು.
ಕಳೆದ ಎರಡು ಬಾರಿ ಈ ಕ್ಷೇತ್ರದ ಜನ ಸಿ.ಪಿ ಯೋಗೇಶ್ವರ್ ಸೋಲಿಸಿದ್ದೀರಿ. ಕುಮಾರಸ್ವಾಮಿ ಅವರು ನಿಮ್ಮ ಊರು ಅಭಿವೃದ್ಧಿ ಮಾಡುತ್ತಾರೆ ಎಂದು ಅವರಿಗೆ ಮತ ಹಾಕಿದಿರಿ. ಆದರೆ ಅವರು ನಿಮ್ಮ ಕಡೆ ತಿರುಗಿಯೂ ನೋಡಲಿಲ್ಲಿ ಎಂದು ಟೀಕಿಸಿದರು.
ಕುಮಾರಸ್ವಾಮಿ ಅವರನ್ನು ನೀವು ಶಾಸಕರಾಗಿ ಮಾಡಿದ ನಂತರ ಅದನ್ನು ಬಿಟ್ಟು ಈಗ ಕೇಂದ್ರದ ಮಂತ್ರಿಯಾಗಿದ್ದಾರೆ. ಅದರ ಬಗ್ಗೆ ನಮ್ಮ ತಕರಾರು ಇಲ್ಲ. ಇಲ್ಲಿ ನಷ್ಟ ಆಗಿರುವುದು ನಿಮ್ಮ ಮನೆ ಮಗ ಯೋಗೇಶ್ವರ್ ಅವರಿಗೆ. ಯೋಗೇಶ್ವರ್ ಅವರು ಹಗಲು ರಾತ್ರಿ ನಿಮಗಾಗಿ ಶ್ರಮವಹಿಸಿದರು. ರೈತರನ್ನು ರಕ್ಷಿಸಲು ಕೆರೆಗೆ ನೀರು ತುಂಬಿಸಿದರು. ಬೆಳ್ಳಿ ಕಿರೀಟ, ಕತ್ತಿ ಕೊಟ್ಟು ಗೌರವ ಸಲ್ಲಿಸಿದ್ದಿರೋ, ಅದೇ ರೀತಿ ರಾಜಕೀಯವಾಗಿ ಶಕ್ತಿ ತುಂಬಿ ನಿಮ್ಮ ಸೇವೆಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಈ ಅವಕಾಶ ಬಳಸಿಕೊಂಡು ಕಾಂಗ್ರೆಸ್ ಪಕ್ಷದ ಹಸ್ತದ ಗುರುತಿಗೆ ಮತ ಹಾಕಿ. ಯೋಗೇಶ್ವರ್ ಅವರು ನಿಮಗೆ ನೀರು ಕೊಟ್ಟರು, ನಾವು ನಿಮಗೆ ಕರೆಂಟ್ ಕೊಟ್ಟಿದ್ದೇವೆ. ನಮ್ಮಿಬ್ಬರಿಗೂ ಅನ್ಯಾಯವಾಗಿದೆ. ಈ ಭಾಗದಲ್ಲಿ ಆನೆ ಹಾವಳಿ ಹೆಚ್ಚಾಗಿದೆ ಎಂದು ಹೇಳಿದ್ದೀರಿ. ಇದನ್ನು ತಡೆಯಲು ಬನ್ನೇರುಘಟ್ಟದಿಂದ ಮುತ್ತತ್ತಿವರೆಗೂ ರೈಲ್ವೆ ಬ್ಯಾರಿಗೇಟ್ ಹಾಕಲು ತೀರ್ಮಾನಿಸಿದ್ದೇವೆ. ಇದಕ್ಕಾಗಿ ₹150 ಕೋಟಿ ಬೇಕಾಗಿದ್ದು, ಈಗಾಗಲೇ ₹50 ಕೋಟಿ ಬಿಡುಗಡೆ ಮಾಡಲಾಗಿದ್ದು, ಬಾಕಿ ಹಣವನ್ನು ಬಿಡುಗಡೆ ಮಾಡಿಸಿ ಆನೆ ಹಾವಳಿ ನಿಲ್ಲಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.