ಚನ್ನಗಿರಿ: ಪ್ರತಿಯೊಬ್ಬರು ಕಡ್ಡಾಯ ಮತದಾನ ಮಾಡಬೇಕು. ರಾಜಕೀಯ ಪಕ್ಷಗಳು ನೀಡುವ ಆಮಿಷಗಳಿಗೆ ಯಾರು ಬಲಿಯಾಗಬೇಡಿ ಎಂದು ಮಹಿಳಾ ಸಾಂತ್ವನ ಆಪ್ತ ಸಮಾಲೋಚಕಿ ಬಿ.ಎನ್. ನೇತ್ರಾವತಿ ತಿಳಿಸಿದರು.

ತಾಲೂಕಿನ ಅಜ್ಜಿಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಜಿಲ್ಲಾ ಜನಜಾಗೃತಿ ವೇದಿಕೆ ಹಾಗೂ ಮಹಿಳಾ ಸಾಂತ್ವನ ಕೇಂದ್ರ ಸಹಯೋಗದಲ್ಲಿ ಬುಧವಾರ ಜನರಲ್ಲಿ ಮತದಾನದ ಜಾಗೃತಿ ಮೂಡಿಸಲಾಯಿತು.
ವಿಧಾನಸಭಾ ಚುನಾವಣೆಯಲ್ಲಿ ಮತ ಹಾಕುವುದು ನಿಮ್ಮ ಹಕ್ಕು. ಮೇ 10ರಂದು ಮತಗಟ್ಟೆ ಕೇಂದ್ರಕ್ಕೆ ಬಂದು ಕಡ್ಡಾಯ ಮತ ಹಾಕಬೇಕು. ನಮ್ಮನ್ನು ಆಳುವ ನಾಯಕನನ್ನು ಆಯ್ಕೆ ಮಾಡುವುದು ನಮ್ಮ ಕೈಯಲ್ಲಿದೆ ಎಂದರು.
ಚುನಾವಣೆ ಸಮಯದಲ್ಲಿ ನೀಡಿದ ಆಮಿಷಗಳು ನಿಮ್ಮ ಜೀವನದ ಕೊನೆವರೆಗೆ ಬರಲಾರವು. ನಿಮ್ಮ ನಾಯಕ ನಿಮ್ಮ ಕಷ್ಟಸುಖಗಳಿಗೆ ಸ್ಪಂದಿಸುವಂತೆ ಇರಬೇಕು. ಅಂತಹ ನಾಯಕನನ್ನು ಆಯ್ಕೆ ಮಾಡಿ. ಜತೆಗೆ, ಮತ ಹಾಕುವುದು ನಿಮ್ಮ ಕರ್ತವ್ಯ. ಶೇ. ನೂರರಷ್ಟು ಕಡ್ಡಾಯ ಮತದಾನ ನಮ್ಮ ಗುರಿಯಾಗಬೇಕು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ಶ್ರೀಧರ ಕೊಂಡ, ಜನಜಾಗೃತಿ ವೇದಿಕೆ ಸದಸ್ಯ ಟಿ.ಎನ್. ಜಗದೀಶ್, ನಲ್ಲೂರು ಗ್ರಾಪಂ ಸದಸ್ಯ ಮಂಜಪ್ಪ, ಸಂಸ್ಥೆ ಮೇಲ್ವಿಚಾರಕಿ ಬಿ. ಶಾರದಾ, ಸೇವಾ ಪ್ರತಿನಿಧಿ ವಾಣಿಶ್ರೀ ಮತ್ತಿತರರು ಇದ್ದರು.