ಪ್ರವಾಸಿಗರ ಸೆಳೆಯಲು ಸೂಳೆಕೆರೆಯಲ್ಲಿ ದೋಣಿ ವಿಹಾರಕ್ಕೆ ಶಾಸಕ ಮಾಡಾಳು ವಿರೂಪಾಕ್ಷಪ್ಪ ಸಾಂಕೇತಿಕವಾಗಿ ಚಾಲನೆ

ಚನ್ನಗಿರಿ: ಏಷ್ಯಾ ಖಂಡದಲ್ಲೇ 2ನೇ ದೊಡ್ಡ ಸೂಳೆಕೆರೆಗೆ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಪ್ರವಾಸೋಧ್ಯಮ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಮಾಡಾಳು ವಿರೂಪಾಕ್ಷಪ್ಪ ತಿಳಿಸಿದರು.

ತಾಲೂಕಿನ ಸೂಳೆಕೆರೆಯಲ್ಲಿ ಮಂಗಳವಾರ ದೋಣಿ ವಿಹಾರಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡಿದರು. ಕೆರೆಯಲ್ಲಿ ಸದಾ ನೀರು ಇರುವಂತೆ ನೋಡಿಕೊಳ್ಳಲು ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯಡಿ ನೀರು ಹರಿಸಲಾಗುವುದು. ಯೋಜನೆ ಕಾಮಗಾರಿ ವೇಗವಾಗಿ ನಡೆಯುತ್ತಿದೆ ಎಂದರು.

ಚನ್ನಗಿರಿ ಸೇರಿ 82 ಗ್ರಾಮಗಳಿಗೆ: ಸೂಳೆಕೆರೆಯಿಂದ ಕುಡಿವ ನೀರು ಕೊಡಲಾಗುತ್ತದೆ. ಅಲ್ಲದೇ ಚಿತ್ರದುರ್ಗ, ದಾವಣಗರೆ ಜಿಲ್ಲೆಗಳ ಅನೇಕ ತಾಲೂಕುಗಳ 82 ಗ್ರಾಮಗಳಿಗೂ ಕುಡಿವ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸುಂದರ, ಇತಿಹಾಸ ಪ್ರಸಿದ್ಧ ಕೆರೆಯಾದ ಕಾರಣ ಪ್ರವಾಸಿಗರು ರಜಾದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅವರಿಗಾಗಿ ಮೂಲ ಸೌಕರ್ಯ ಕಲ್ಪಿಸಲು ಪ್ರವಾಸೋಧ್ಯಮ ಇಲಾಖೆಗೆ 56 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಕೆರೆಯ ಸೌಂದರ್ಯ ಸವಿಯಲು ಪ್ರವಾಸಿಗರ ಒತ್ತಾಸೆಯಂತೆ ಬೋಟ್ ಬಿಡಲಾಗಿದೆ. ಈ ವೇಳೆ ಪ್ರವಾಸಿಗರು ಎಚ್ಚರಿಕೆಯಿಂದ ಇರಬೇಕು. ಜೀವಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ನೀರಿನ ಜೊತೆಗೆ ಆಡುವುದು ಸಾವಿನ ಜೊತೆ ಸರಸವಿದ್ದಂತೆ ಎಂದರು.

ನೀರಾವರಿ ಇಲಾಖೆ ಎಇಇ ಜಿ.ಎಂ.ಗುಡ್ಡಪ್ಪ ಮಾತನಾಡಿ, ಸೂಳೆಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲು 20 ಅಡಿಯಷ್ಟು ನೀರು ಇರಬೇಕು. ಖಾಸಗಿಯವರಿಂದ ಬೋಟ್‌ಗಳನ್ನು ತರಿಸಿ ಸಾಂಕೇತಿಕವಾಗಿ ಪರೀಕ್ಷೆ ಮಾಡಲಾಗಿದೆ. ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯ ನೀರು ಕೆರೆಗೆ ಬರಲಿದೆ. ಸಮರ್ಪಕವಾಗಿ ನೀರು ನಿಂತ ನಂತರದ ದಿನಗಳಲ್ಲಿ ಬೋಟಿಂಗ್ ಅಧಿಕೃತವಾಗಿ ಆರಂಭಿಸಲಾಗುವುದು ಎಂದು ಹೇಳಿದರು.

ತಾಪಂ ಸದಸ್ಯ ಹಾಲೇಶ್ ನಾಯ್ಕ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಉಮೇಶ್, ಎಪಿಎಂಸಿ ನಿರ್ದೇಶಕ ಎಂ.ಬಿ.ರಾಜಪ್ಪ ಇದ್ದರು.