ಬಸವಾಪಟ್ಟಣ: ನಾಡು ಉಳಿಯಬೇಕೆಂದರೆ ಭಾಷೆ ಉಳಿಯಬೇಕು ಎಂದು ಜಿ.ಕೆ.ಹಳ್ಳಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಂ.ಆರ್.ಲೋಕೇಶ್ವರಯ್ಯ ತಿಳಿಸಿದರು.
ಚನ್ನಗಿರಿ ತಾಲೂಕಿನ ದಾಗಿನಕಟ್ಟೆ ಗ್ರಾಮದ ವಾಲ್ಮೀಕಿ ಪ್ರೌಢಶಾಲೆಯಲ್ಲಿ ಬುಧವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಶಾಲಾ ಅಂಗಳದಲ್ಲಿ ನುಡಿ ತೋರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾವು ಮೊದಲು ಕನ್ನಡದಲ್ಲಿ ಸಂವಹನ ಮಾಡಬೇಕು. ನಂತರ ಉಳಿದ ಪರ ಭಾಷೆಗೆ ಆದ್ಯತೆ ನೀಡಬೇಕು. ಈ ಮೂಲಕ ನಾವು ಕನ್ನಡಮುಖಿಗಳಾಗಬೇಕು ಎಂದು ತಿಳಿಸಿದರು.
ಕೌಶಲ, ಸಾಮರ್ಥ್ಯ ವೃದ್ಧಿಸಿಕೊಳ್ಳಲು ಪರಭಾಷೆ ಅನಿವಾರ್ಯ. ಇವನ್ನು ಗಳಿಸಿಕೊಂಡ ಬಳಿಕ ಕನ್ನಡದ ಬಳಕೆಯ ವಿಸ್ತರಣೆಗೆ ಅವಶ್ಯವಿರುವ ಕೆಲಸವನ್ನು ಮೊದಲ ಆದ್ಯತೆಯಾಗಿ ನಿರ್ವಹಿಸಬೇಕಾಗಿದೆ ಎಂದರು.
ವಾಲ್ಮೀಕಿ ವಿದ್ಯಾಸಂಸ್ಥೆಯ ಖಜಾಂಚಿ ಹನುಮಂತಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ಅಧ್ಯಕ್ಷ ಎಲ್.ಜಿ.ಮಧುಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಶಿಕ್ಷಕ ಎಚ್.ಎಸ್.ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಬಿ.ಜಿ.ಅಮಿತ್, ಡಿ.ಆರ್. ರಾಮಚಂದ್ರಪ್ಪ, ದೈಹಿಕ ಶಿಕ್ಷಕ ಸಂತೋಷ್ ಮತ್ತಿತರರು ಇದ್ದರು.