ಸಾಗುವಳಿ ರೈತರಿಗೆ ಸಮಸ್ಯೆ ಆಗದು

ಚನ್ನಗಿರಿ: ಚನ್ನಗಿರಿ ವ್ಯಾಪ್ತಿಯ ಅರಣ್ಯ ಭೂಮಿ, ಬಗರ್‌ಹುಕುಂ ಮತ್ತು ಗೋಮಾಳ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು.

ತಾಲೂಕಿನ ಗಾಂಧಿನಗರ ಗ್ರಾಮದಲ್ಲಿ ಯುಟಿಪಿ ಯೋಜನೆಯಡಿ ಕೈಗೊಂಡಿರುವ 2.30 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶನಿವಾರ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.

ಸಾಗುವಳಿ ಪತ್ರ ಸಿಕ್ಕಿಲ್ಲ, ಅಧಿಕಾರಿಗಳು ಜಮೀನು ಬಿಡಿಸುತ್ತಾರೆ ಎಂಬ ಭಯದಲ್ಲಿ ರೈತರು ಅರ್ಜಿ ಹಿಡಿದು ಕಚೇರಿಗಳಿಗೆ ತೆರಳುವುದು ಬಿಟ್ಟು ಕೃಷಿ ಕೆಲಸದ ಕಡೆ ಗಮನಹರಿಸಬೇಕು. ರೈತರ ಜತೆ ನಾನಿದ್ದೇನೆ. ಯಾವ ಅಧಿಕಾರಿಗಳು ತೊಂದರೆ ನೀಡುವುದಿಲ್ಲ. ಆದರೆ, ಹೊಸದಾಗಿ ಅರಣ್ಯ ನಾಶ ಮಾಡಿ ಸಾಗುವಳಿ ಮಾಡಿದಲ್ಲಿ ನನ್ನ ಜವಾಬ್ದಾರಿ ಅಲ್ಲ ಎಂದರು.

ಸರ್ಕಾರ ಅನುದಾನ ಸದ್ಬಳಕೆಯಾಗಬೇಕು. ಕಾಮಾಗಾರಿ ಕಳಪೆಯಾದರೆ ಕೆಲಸದ ಜತೆ ಹಣವೂ ಹಾಳಾಗುತ್ತದೆ. ಜನರ ಅನುಕೂಲತೆ ಅರಿತು ಗುತ್ತಿಗೆದಾರರು ಕೆಲಸ ಮಾಡಬೇಕು ಎಂದು ಸೂಚಿಸಿದರು.

ಜಿಪಂ ಸದಸ್ಯೆ ಮಂಜುಳಾ, ತಾಪಂ ಅಧ್ಯಕ್ಷೆ ರೂಪಾ, ಉಪಾಧ್ಯಕ್ಷೆ ಗೀತಾ, ಗ್ರಾಪಂ ಅಧ್ಯಕ್ಷೆ ಮಾಲಿನಿ, ಯುಟಿಪಿ ಇಇ ಓಂಕಾರಪ್ಪ, ಎಇ ಶಶಿಕಾಂತ್, ಪ್ರಥಮದರ್ಜೆ ಗುತ್ತಿಗೆದಾರ ಎಂ.ಜಿ.ಕೆ.ಹನುಮಂತಪ್ಪ ಇದ್ದರು.