More

  ಆನೆಗಳ ದಾಳಿಗೆ ನೂರಾರು ಎಕರೆ ಬೆಳೆ ಹಾನಿ

  ಚನ್ನಗಿರಿ: ತಾಲೂಕಿನ ಉಬ್ರಾಣಿ ಹೋಬಳಿ ವ್ಯಾಪ್ತಿಯ ಅನೇಕ ಗ್ರಾಮಗಳಿಗೆ ಆಹಾರಕ್ಕಾಗಿ ಬಂದ ಎರಡು ಗಂಡಾನೆಗಳು ನೂರಾರು ಎಕರೆಯ ತೋಟದ ಅಡಕೆ, ಬಾಳೆ, ಭತ್ತದ ಬೆಳೆಗಳನ್ನು ನಾಶ ಮಾಡಿವೆ.

  ಉಬ್ರಾಣಿ, ದುರ್ವಿಗೆರೆ, ಬಸವಾಪುರ, ಮಾನಮಟ್ಟಿ, ಕಗ್ಗಿ, ಮುಗಳಿಹಳ್ಳಿ, ಚಿಕ್ಕಮಳಲಿ ತಾಂಡಾ, ಚಿಕ್ಕಮಳಲಿ, ಬಂಡೀಗುಡ್ಡ, ಚಿಕ್ಕಸಂದಿ, ಕೊಡಕಿಕೆರೆ, ಬಸವಾಪುರ, ಮಾನಮಟ್ಟಿ ಗ್ರಾಮದ ತೋಟಗಳಿಗೆ ನಿತ್ಯವೂ ರಾತ್ರಿ ನುಗ್ಗಿ, ಅಡಕೆ, ಬಾಳೆ ಬೆಳೆ ತಿಂದು ಬೆಳಗಾಗುತ್ತಿದ್ದಂತೆ ಅರಣ್ಯಕ್ಕೆ ಮರಳುತ್ತಿವೆ.

  ಅರಣ್ಯ ಇಲಾಖೆ ಅನೆ ನಾಡಿಗೆ ಬಾರದಂತೆ ಕಂದಕ ತೆಗೆಸಿದರೂ ಆನೆಗಳು ಆ ಸ್ಥಳಗಳಿಗೆ ಮಣ್ಣು ತುಂಬಿ ಹತ್ತಿ ಬರುತ್ತಿವೆ. ರೈತರು ಹಗಲಿನಲ್ಲೂ ಬರಲು ಹೆದರುತ್ತಿದ್ದಾರೆ. ಸುತ್ತಲಿನ ಗ್ರಾಮದ ಜನರಲ್ಲಿ ಭೀತಿ ಉಂಟಾಗಿದೆ. ಅರಣ್ಯ ಇಲಾಖೆಯವರು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ದೂರುತ್ತಿದ್ದಾರೆ.

  ತಾಲೂಕಿನ ಅನೇಕ ಗ್ರಾಮಗಳು ಅರಣ್ಯ ಪ್ರದೇಶಕ್ಕೆ ಹತ್ತಿರವಾಗಿವೆ. ಕಾಡಾನೆಗಳು ಆಹಾರ ಹುಡುಕಿಕೊಂಡು ಗ್ರಾಮಗಳತ್ತ ಬರುತ್ತವೆ. ರೈತರು ಬೆಳೆದ ಬೆಳೆ ಹಾಳು ಮಾಡಿ ಹೋಗುತ್ತಿದ್ದವು. 2011ರಲ್ಲಿ ಪ್ರಥಮವಾಗಿ ಕಾಡಾನೆಗಳು ಉಬ್ರಾಣಿ ಹೋಬಳಿಯ ಗ್ರಾಮದ ಜಮೀನುಗಳಿಗೆ ನುಗ್ಗಿ ಬೆಳೆ ಹಾಳು ಮಾಡಿ ಹೋಗಿದ್ದವು.

  ರೈತರು ಈ ಬಗ್ಗೆ ಇಲಾಖೆಗೆ ದೂರು ನೀಡಿದ್ದರು. ಇಲಾಖೆ ತಂಡ ರಚಿಸಿ ಆನೆ ಹೆಜ್ಜೆಗುರುತು ಮತ್ತು ಅದರ ತ್ಯಾಜ್ಯ ಆಧರಿಸಿ ಆನೆ ಬಂದಿರುವ ಸುಳಿವು ಪತ್ತೆ ಹಚ್ಚಿದರು. ಇಲಾಖೆಯಿಂದ ರಾತ್ರಿ ವೇಳೆ ಜಮೀನು, ತೋಟಗಳಿಗೆ ಹೋಗದಂತೆ ಎಚ್ಚರಿಕೆ ನೀಡಿತ್ತು.

  ಕಾಡಾನೆ ದಾಳಿ ತಡೆಗಟ್ಟಲು ಅರಣ್ಯ ಇಲಾಖೆ ಗ್ರಾಮಗಳಲ್ಲಿ ಮೈಕ್ ಮೂಲಕ ಪ್ರಚಾರ ಮಾಡಿದ್ದಾರೆ. ಇಲಾಖೆಯಿಂದ ರೈತರಿಗೆ ಪಟಾಕಿ ನೀಡಲಾಗಿದೆ. ಇಲಾಖೆಯ 4 ಜನರ ತಂಡ ರಚಿಸಿ ರಾತ್ರಿ, ಹಗಲು ಪಾಳಿಯಲ್ಲಿ ಕೆಲಸ ನಿರ್ವಹಣೆಗೆ ನಿಗದಿಮಾಡಿದ್ದಾರೆ.

  See also  ಪಾಕ್ ಜನತೆಗೆ ಹೊರೆಯಾದ ಇಂಧನ ದರ; ಒಂದು ಲೀ. ಪೆಟ್ರೋಲ್ ಬೆಲೆ 249 ರೂ.!

  ರೈತರು ತೋಟ, ಜಮೀನುಗಳಲ್ಲಿ ಪಟಾಕಿ ಹಚ್ಚುವುದು ಹಾಗೂ ಶಬ್ದ ಮಾಡುತ್ತಿದ್ದಾರೆ. ಆನೆ ಕಾಟ ತಡೆಯಲು ಕಾಡಂಚಿನ ಪ್ರದೇಶದಲ್ಲಿ 6.82 ಕೋಟಿ ವೆಚ್ಚದಲ್ಲಿ 37 ಕಿ.ಮೀ. ಉದ್ದದ 10 ಅಡಿ ಅಗಲ ಹಾಗೂ 10 ಆಳದ ಕಂದಕ ನಿರ್ಮಿಸಲಾಗಿದೆ.

  ಆನೆಗಳು ಬಹಳ ದಿನಗಳಿಂದ ಆಹಾರ ಅರಸಿಕೊಂಡು ಕಾಡಂಚಿನ ತೋಟಗಳಿಗೆ ಬರುತ್ತಿವೆ. ರಾತ್ರಿ ವೇಳೆ ತೋಟದ ಮಾಲೀಕರು ಹೋಗದಂತೆ ತಿಳಿಸಲಾಗಿದೆ. ಆನೆಗಳು ಬರುವಾಗ ಪಟಾಕಿ ಸಿಡಿಸಿ ಕಾಡಿಗೆ ವಾಪಸ್ ಕಳುಹಿಸಲು ಸಿಬ್ಬಂದಿಗೆ ತರಬೇತಿ ನೀಡಿ ಪಟಾಕಿ ಖರೀದಿಸಿ ನೀಡಲಾಗಿದೆ.
  l ಮಧುಸೂದನ್, ಚನ್ನಗಿರಿ ವಲಯ ಅರಣ್ಯಾಧಿಕಾರಿ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts