ರಾಯರ ಆರಾಧನೆಯಲ್ಲಿ ಮಿಂದೆದ್ದ ಭಕ್ತಗಣ

ಚನ್ನಗಿರಿ: ಪಟ್ಟಣದ ಅಗ್ರಹಾರದ ಶ್ರೀ ರಾಘವೇಂದ್ರ ರಾಯರ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ಸಂಪನ್ನಗೊಂಡಿತು.

ಮೂರು ದಿನ ನಡೆದ ರಾಯರ 348ನೇ ಆರಾಧನಾ ಮಹೋತ್ಸವದಲ್ಲಿ ಜನರು ಭಕ್ತಿಸಾಗರದಲ್ಲಿ ಮಿಂದೆದ್ದರು.

ರಾಜಬೀದಿಗಳು ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದವು. ರಾಯರ ಬೃಂದಾವನಕ್ಕೆ ಪುಷ್ಪಾಂಕಾರ ಮಾಡಲಾಗಿತ್ತು. ರಾಯರಿಗೆ ಅಭಿಷೇಕ, ಅಂಕುರದರ್ಪಣ, ಅಷ್ಟವದನಸೇವೆ, ರಕ್ಷಾಬಂಧನ ಹಾಗೂ ಪಲ್ಲಕ್ಕಿ ಉತ್ಸವ ನೆರವೇರಿಸಲಾಯಿತು.

ದೇವರ ಕಳಸ ಸ್ಥಾಪನೆ, ಧ್ವಜಾರೋಹಣ, ನವಗ್ರಹಸ್ಥಾಪನೆ, ಗಜೇಂದ್ರೋತ್ಸವ ನಡೆಸಲಾಯಿತು. ರಥಾಂಗಹೋಮ, ಬಲಿದಾನ, ಮಧ್ಯಾಹ್ನ ಬ್ರಹ್ಮರಥೋತ್ಸವ ಜರುಗಿತು. ಭಕ್ತರಿಗೆ ಪ್ರಸಾದ ವಿತರಿಲಾಯಿತು.

ಶ್ರೀ ರಾಘವೇಂದ್ರ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಪಿ.ಎನ್.ಕೃಷ್ಣ ಉಪಾಧ್ಯ, ಕಾರ್ಯದರ್ಶಿ ಸಿ.ವಿ.ಸುಮತೀಂದ್ರ, ಕೆ.ರಾಮಮೂರ್ತಿ, ಸಿ.ಜಿ.ವೆಂಕಟೇಶ್, ಮಾರ್ಕೋಡ್ ವಿದ್ಯಾರಣ್ಯ ಇತರರಿದ್ದರು.

Leave a Reply

Your email address will not be published. Required fields are marked *