ಚನ್ನಗಿರಿ: ಚನ್ನಗಿರಿ ಪಟ್ಟಣದ ಭಾವಸಾರ ಕ್ಷತ್ರಿಯ ದೈವ ಮಂಡಳಿ ಮತ್ತು ಭಜನಾ ಮಂಡಳಿ ಹಾಗೂ ಮಹಿಳಾ ಭಜನಾ ಮಂಡಳಿ ಸಮುದಾಯದವರಿಂದ 81ನೇ ವರ್ಷದ ದಿಂಡಿ ಮಹೋತ್ಸವ ಕಾರ್ಯಕ್ರಮ ಗುರುವಾರ ಸಾಂಗವಾಗಿ ನೆರವೇರಿತು.
ಉತ್ಸವದ ನಿಮಿತ್ತ ವಿಠಲ ರುಖುಮಾಯಿ ಮಂದಿರದಲ್ಲಿ ಮೂರು ದಿನಗಳ ಕಾಲ ಭಜನೆ, ಅಖಂಡ ವೀಣಾ ಜಾಗರಣೆ, ಕೀರ್ತನೆ ನಡೆಯಿತು. ಶಿವಮೊಗ್ಗದ ಹನುಮಂತರಾವ್ ರಂಗಧೋಳ್ ಸಾನ್ನಿಧ್ಯದಲ್ಲಿ ಕಾಕಡಾರತಿ, ಪಾರಾಯಣ, ನಾಮಜಪ, ಪ್ರವಚನ ನಡೆದವು.
ಕೊನೆಯ ದಿನದಂದು ಬೆಳ್ಳಿ ರಥದಲ್ಲಿ ಪಾಂಡುರಂಗ ಮೂರ್ತಿಯೊಂದಿಗೆ ಅದ್ದೂರಿ ಮೆರವಣಿಗೆ ನಡೆಸಲಾಯಿತು. ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಹೊಳೆಹೊನ್ನೂರು, ಅಜ್ಜಂಪುರ, ಭದ್ರಾವತಿ, ಹೊಳೆಲ್ಕೆರೆ, ನಲ್ಲೂರು, ಸಂತೇಬೆನ್ನೂರು ಇತರೆಡೆಗಳಿಂದ ಬಂದಿದ್ದ ಸಮುದಾಯದವರು ಭಾಗವಹಿಸಿದ್ದರು.
ಹನುಮಂತರಾವ್ ರಂಗಧೋಳ್ ಮಾತನಾಡಿ, ದೇವರು ನಮ್ಮ ಬಳಿಗೆ ಬರುವುದಿಲ್ಲ, ದೇವರ ಬಳಿ ಭಕ್ತಿಯಿಂದ ಅರಾಧನೆ ಮಾಡುವಂಥವರಿಗೆ ಭಗವಂತ ಕರುಣಿಸುತ್ತಾನೆ. ಸ್ವಾರ್ಥ, ನಾನು ಎಂಬ ಅಹಂಕಾರ ತ್ಯಜಿಸಿದರೆ ದೇವರು ಹತ್ತಿರವಾಗುತ್ತಾನೆ ಎಂದರು.
ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಜಿ.ಪಿ. ರವಿಕುಮಾರ್ ಮಾತನಾಡಿ, ಪಟ್ಟಣದ ಹೃದಯ ಭಾಗವಾದ ಗಣಪತಿ ವೃತ್ತದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ವಿಠ್ಠಲ ರುಖುಮಾಯಿ ದೇವಸ್ಥಾನವನ್ನು ಅಮೃತಶಿಲೆಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಪ್ರತಿಮೆ, ದೇವಸ್ಥಾನ ಕ್ಕಾಗಿ ಭಕ್ತರಿಂದ ಹಣವನ್ನು ಫಲಾಪೇಕ್ಷೆ ಇಲ್ಲದೆ ಸಂಗ್ರಹಿಸಲಾಗುತ್ತಿದೆ. ಆಗಸ್ಟ್ ಅಂತ್ಯದವರೆಗೆ ಕಾಮಗಾರಿ ಮುಗಿಸಿ ಉದ್ಘಾಟನೆ ಮಾಡಲಾಗುವುದು ಎಂದರು.
ಭಾವಸಾರ ಕ್ಷತ್ರಿಯ ಸಮಾಜದ ಮುಖಂಡರಾದ ಕೆ.ಟಿ. ಮಂಜುನಾಥ್ ರಾವ್, ಕೆ.ಪಿ. ಆನಂದ ರಾವ್, ಕೆ.ಪಿ. ರಂಗನಾಥ ರಾವ್, ಬಿ.ಎಂ. ರವಿಕುಮಾರ್, ಜಿ.ಎಂ.ರಾಘವೇಂದ್ರ, ನವಲೆ ತುಕಾರಾಂ ರಾವ್, ತಬಲಾ ಸಾಥಿ ಶಿವಮೊಗ್ಗದ ತುಕಾರಾಂ ರಂಗಧೋಳ್ ಇದ್ದರು.